ಧಾರಾಕಾರ ಮಳೆಗೆ ಧಾರವಾಡ ಜನ ಅಸ್ತವ್ಯಸ್ತ

KannadaprabhaNewsNetwork |  
Published : Jun 08, 2024, 12:35 AM IST
7ಡಿಡಬ್ಲೂಡಿ4,5ಧಾರವಾಡದಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ನೀರಿನಿಂದ ತುಂಬಿರುವ ಬಿಆರ್‌ಟಿೆಸ್‌ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು. | Kannada Prabha

ಸಾರಾಂಶ

ಧಾರಾಕಾರವಾಗಿ ಸುರಿದ ಮಳೆಗೆ ಬಿಆರ್‌ಟಿಎಸ್‌ ರಸ್ತೆ ಸಂಪೂರ್ಣ ನೀರಲ್ಲಿ ಮುಳುಗಿ ಹೋಯಿತು. ಬಾಗಲಕೋಟಿ ಪೆಟ್ರೋಲ್ ಪಂಪ್ ಬಳಿ, ಗಣೇಶ ಗುಡಿ ಹತ್ತಿರದ ರಸ್ತೆ ಹಾಗೂ ಟೋಲ್ ನಾಕಾ, ಕೆಎಂಎಫ್‌ ಎದುರಿನ ಪ್ರದೇಶ ಅಕ್ಷರಶಃ ನಡುಗಡೆಯಾಗಿತ್ತು.

ಧಾರವಾಡ:

ಮಳೆಯ ಮುನ್ಸೂಚನೆ ಇದ್ದರೂ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳದೇ ಇರುವುದರಿಂದ ಧಾರವಾಡ ನಗರಕ್ಕೆ ತುಸು ಮಳೆಯಾದರೂ ಪ್ರವಾಹ ಎದುರಿಸಿದ ಸ್ಥಿತಿ ಉಂಟಾಗುತ್ತಿದೆ.

ಕಳೆದ ಎರಡ್ಮೂರು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದ್ದು, ಶುಕ್ರವಾರ ಮಧ್ಯಾಹ್ನ ತುಸು ಹೆಚ್ಚಿನ ಹೊತ್ತು ಧಾರಾಕಾರವಾಗಿ ಸುರಿಯಿತು. ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು, ಗಟಾರುಗಳು ತುಂಬಿ, ರಸ್ತೆಗಳು ಹರಿಯುವ ನದಿಗಳ ರೂಪಕ್ಕೆ ತಿರುಗಿ ಅಲ್ಲೋಲ ಕಲ್ಲೋಲ ಉಂಟಾಯಿತು. ಬೈಕ್‌ ಸವಾರರು, ಪಾದಾಚಾರಿಗಳು ತಮ್ಮ ತಮ್ಮ ಸ್ಥಳಗಳಿಗೆ ಹೋಗಲು ತೀವ್ರ ಸಮಸ್ಯೆ ಎದುರಿಸಬೇಕಾಯಿತು.

ಮುಳುಗಿದ ಬಿಆರ್‌ಟಿಎಸ್‌ ರಸ್ತೆ:

ಧಾರಾಕಾರವಾಗಿ ಸುರಿದ ಮಳೆಗೆ ಬಿಆರ್‌ಟಿಎಸ್‌ ರಸ್ತೆ ಸಂಪೂರ್ಣ ನೀರಲ್ಲಿ ಮುಳುಗಿ ಹೋಯಿತು. ಬಾಗಲಕೋಟಿ ಪೆಟ್ರೋಲ್ ಪಂಪ್ ಬಳಿ, ಗಣೇಶ ಗುಡಿ ಹತ್ತಿರದ ರಸ್ತೆ ಹಾಗೂ ಟೋಲ್ ನಾಕಾ, ಕೆಎಂಎಫ್‌ ಎದುರಿನ ಪ್ರದೇಶ ಅಕ್ಷರಶಃ ನಡುಗಡೆಯಾಗಿತ್ತು. ಇದರಿಂದ ವಾಹನ ಸವಾರರು ಪೇಚೆಗೆ ಸಿಲುಕಿದರು. ಇನ್ನು, ಮೆಹಬೂಬ್ ನಗರ, ಲಕ್ಷ್ಮಿ ಸಿಂಗನಕೇರಿ, ಗೌಳಿಗಲ್ಲಿ ಅಂತಹ ಇಳಿಜಾರು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ದವಸ-ಧಾನ್ಯ, ಬಟ್ಟೆಗಳು ನೀರು ಪಾಲಾದವು. ಜನತೆ ಮಳೆ ನಿಂತ ನಂತರ ನೀರು ಹೊರಹಾಕಿದರು.

ಹಾಗೆಯೇ ವಿದ್ಯುತ್ ಕಣ್ಣಾಮುಚ್ಚಲೆಗೆ ಜನತೆ ಪೇಚೆಗೆ ಸಿಲುಕಿತು. ಮಳೆಗೆ ತರಕಾರಿ ಮಾರುಕಟ್ಟೆ, ನೆಹರೂ ಮಾರುಕಟ್ಟೆ, ಸೂಪರ್ ಮಾರುಕಟ್ಟೆ ವ್ಯಾಪಾರಸ್ಥರು ತೋಯ್ದು ತೊಪ್ಪಿಯಾಗಿರುವ ದೃಶ್ಯ ಗೋಚರಿಸಿತು.

ಶುಕ್ರವಾರದ ಮಳೆಗೆ ಧಾರವಾಡ ನಗರದ ಜನತೆಯು ತೊಂದರೆಗೆ ಸಿಲುಕಿದರೆ, ಗ್ರಾಮೀಣ ಜನರು ಖುಷಿ ವ್ಯಕ್ತಪಡಿಸಿದರು. ಈ ಹಿಂದೆ ಸುರಿದ ಮಳೆಗೆ ಶೇ. 10ರಷ್ಟು ಮಾತ್ರ ಬಿತ್ತನೆ ಮಾಡಲಾಗಿತ್ತು. ಇನ್ನೊಂದು ಮಳೆಗೆ ರೈತರು ಕಾಯುತ್ತಿದ್ದರು. ಇದೀಗ ಎರಡು ದಿನಗಳ ಕಾಲ ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಹದವಾದ ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯಲ್ಲಿ ಕೃಷಿ ಚಟವಟಿಕೆ ಗರಿಗೇದರಿವೆ. ಈಗಾಗಲೇ ಮುಂಗಾರು ಹಂಗಾಮಿಗೆ ಸೋಯಾಅವರೆ, ಹೆಸರು, ಶೇಂಗಾ, ಮೆಕ್ಕೆಜೋಳ ಬಿತ್ತನೆ ಮಾಡಿದ ರೈತರು ಮುಖದಲ್ಲಿ ಮತ್ತಷ್ಟು ಖುಷಿ ಎದ್ದು ಕಾಣುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಳಿಂಗ ಸರ್ಪ ರಕ್ಷಣೆ
ಸಂವಿಧಾನ ದಿನಾಚರಣೆ: ವಿವಿಧ ಸ್ಪರ್ಧೆ ಆಯೋಜನೆ