ಗಣೇಶ ಹಬ್ಬದಾಚರಣೆಗೆ ಸಿದ್ಧರಾದ ಧಾರವಾಡ ಜನ

KannadaprabhaNewsNetwork |  
Published : Sep 07, 2024, 01:31 AM IST
6ಡಿಡಬ್ಲೂಡಿ3ಗಣೇಶೋತ್ಸವ ಹಿನ್ನೆಲೆಯಲ್ಲಿ ಧಾರವಾಡದ ಮಾರುಕಟ್ಟೆಯಲ್ಲಿ ಹೂವಿನ ಮಾರಾಟ. | Kannada Prabha

ಸಾರಾಂಶ

ಗಣೇಶ ಹಬ್ಬದ ಅಂಗವಾಗಿ ಈಗಾಗಲೇ ಪ್ರತಿಷ್ಠಾಪನೆಗೆ ಎಲ್ಲ ರೀತಿ ಸಿದ್ಧತೆಗಳಾಗಿದ್ದು, ಸಾರ್ವಜನಿಕ ಹಾಗೂ ಮನೆ ಮನೆಗಳಲ್ಲಿ ಗಣಪತಿ ಪೂಜೆಗೊಳಗಾಗಲಿದ್ದಾನೆ.

ಧಾರವಾಡ: ಶ್ರಾವಣ ಮಾಸ ಮುಗಿಯುವ ತಡವೇ ಗಣೇಶೋತ್ಸವಕ್ಕೆ ಧಾರವಾಡ ಜನತೆ ಸಿದ್ಧರಾಗಿದ್ದು, ಶನಿವಾರ ಎಲ್ಲೆಡೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ.

ಗಣೇಶ ಹಬ್ಬದ ಅಂಗವಾಗಿ ಈಗಾಗಲೇ ಪ್ರತಿಷ್ಠಾಪನೆಗೆ ಎಲ್ಲ ರೀತಿ ಸಿದ್ಧತೆಗಳಾಗಿದ್ದು, ಸಾರ್ವಜನಿಕ ಹಾಗೂ ಮನೆ ಮನೆಗಳಲ್ಲಿ ಗಣಪತಿ ಪೂಜೆಗೊಳಗಾಗಲಿದ್ದಾನೆ. ಕೆಲವರು ತಮ್ಮ ಮನೆಗಳಲ್ಲಿ ಒಂದೇ ದಿನ, ಇನ್ನೂ ಕೆಲವರು, ಮೂರು, ಐದು, ಏಳು, ಒಂಭತ್ತು, ಹನ್ನೊಂದು ಹಾಗೂ 21 ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸುವ ಪದ್ಧತಿ ಇದೆ. ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಐದು, ಏಳು, ಹನ್ನೊಂದು ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ.

ಧಾರವಾಡ ನಗರದಲ್ಲಿ 200ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಟಾನೆ ಆಗಲಿದ್ದು, ಈಗಾಗಲೇ ಮೂರ್ತಿ ಪ್ರತಿಷ್ಟಾಪನೆಗೆ ಪರವಾನಗಿ ಪಡೆದು ಆಯಾ ಸ್ಥಳಗಳಲ್ಲಿ ಪೆಂಡಾಲ್‌ ಹಾಕಲಾಗಿದೆ. ಧಾರವಾಡದ ಸಂಗಮ ವೃತ್ತ, ಟಿಕಾರೆ ರಸ್ತೆ, ಸುಭಾಸ ರಸ್ತೆ, ನೆಹರು ಮಾರುಕಟ್ಟೆ, ಕರ್ನಾಟಕ ಕಾಲೇಜು ವೃತ್ತ, ಸಪ್ತಾಪೂರ ವೃತ್ತ, ಶ್ರೀನಗರ, ಕಮಲಾಪೂರ, ಹೆಬ್ಬಳ್ಳಿ ಅಗಸಿ ಸೇರಿದಂತೆ ಹಲವೆಡೆ ಸಾರ್ವಜನಿಕ ಕೂರಿಸಲು ದೊಡ್ಡ ಮಟ್ಟದಲ್ಲಿ ಸಂಭ್ರಮ ನಡೆಯುತ್ತಿದೆ. ಹಬ್ಬದ ನಿಮಿತ್ತ ಮುನ್ನಾ ದಿನ ಶುಕ್ರವಾರ ಧಾರವಾಡ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿತ್ತು. ಹೂ-ಹಣ್ಣು, ಬಾಳೆ ದಿಂಡು ಹಾಗೂ ಅಲಂಕಾರಿಕ ವಸ್ತುಗಳ ಮಾರಾಟ ಭರ್ಜರಿಯಾಗಿದೆ. ತುಸು ತುಟ್ಟಿ ಎನಿಸಿದರೂ ಹಬ್ಬಕ್ಕೆ ಹೂ ಹಣ್ಣು, ವಿದ್ಯುತ್‌ ದೀಪಗಳು, ಅಲಂಕಾರಿಕ ವಸ್ತುಗಳ ಖರೀದಿ ಮಾತ್ರ ಕಡಿಮೆ ಆಗಿರಲಿಲ್ಲ. ಧಾರವಾಡ ಮಾರುಕಟ್ಟೆ ಮಾತ್ರವಲ್ಲದೇ ಮಾಳಮಡ್ಡಿ, ಸಂಪಿಗೆ ನಗರ, ಸಪ್ತಾಪೂರ ಅಂತಹ ಕಿರು ಮಾರುಕಟ್ಟೆಗಳಲ್ಲೂ ಹಬ್ಬದ ಸಂಭ್ರಮ ಎದ್ದು ಕಾಣುತ್ತಿತ್ತು.

ಇಷ್ಟು ವರ್ಷ ಪ್ರತಿ ಬಾರಿ ಗಣೇಶ ಹಬ್ಬದ ಸಮಯದಲ್ಲಿ ಪಿಒಪಿ ಮೂರ್ತಿಗಳ ಭರಾಟೆ ಇರುತ್ತಿತ್ತು. ಆದರೆ, ಈ ಬಾರಿ ಎರಡು ತಿಂಗಳ ಮುಂಚೆಯೇ ಈ ಬಗ್ಗೆ ಜಿಲ್ಲಾಡಳಿತವು ಕಠಿಣ ನಿಯಮ ರೂಪಿಸಿದರ ಫಲವಾಗಿ ಪಿಒಪಿ ಗಣೇಶ ಮೂರ್ತಿಗಳು ಕಾಣುತ್ತಿಲ್ಲ. ಬಹುತೇಕ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು, ಕಲಾವಿದರು ಸಂತೃಪ್ತರಾಗಿದ್ದಾರೆ.

PREV

Recommended Stories

ನಗರದಲ್ಲಿ ಬೀದಿ ನಾಯಿಗೆ ಶೆಲ್ಟರ್‌ : ಸರ್ಕಾರದೊಂದಿಗೆ ಚರ್ಚಿಸಿ ಕ್ರಮ
ಒಳಮೀಸಲಡಿ 101 ಜಾತಿಗೂ ನ್ಯಾಯ : ತಂಗಡಗಿ