ಕಲ್ಯಾಣ ಕರ್ನಾಟಕದ ಜನರು ಕಾಂಗ್ರೆಸ್, ಖರ್ಗೆರನ್ನು ಮರೆಯದಿರಲಿ: ಈಶ್ವರ ಖಂಡ್ರೆ

KannadaprabhaNewsNetwork | Published : Feb 21, 2024 2:09 AM

ಸಾರಾಂಶ

ಹೈದ್ರಾಬಾದ್‌ ಕರ್ನಾಟಕ ಇದ್ದದ್ದನ್ನು ಕಲ್ಯಾಣ ಕರ್ನಾಟಕ ಮಾಡಿದ್ದೆ ಬಿಜೆಪಿಯ ಸಾಧನೆಯಾಗಿದೆ. ಸೋಲಾರ್‌ ಪಾರ್ಕ್‌, ಸಿಪೆಟ್‌ ಕಾಲೇಜು, ಎಫ್‌ಎಂ ಯಾವುದೂ ಮಾಡಿಲ್ಲ ಎಂದು ನೆಹರು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಚಿವರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಈ ಭಾಗದ 7 ಜಿಲ್ಲೆಯ ಜನರು ಕಾಂಗ್ರೆಸ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆಯನ್ನು ಎಂದೂ ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ಮಂಗಳವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಬಡವರ, ಶೋಷಿತರ ಪರ ಹಾಗೂ ಈ ಭಾಗದ ಅಭಿವೃದ್ಧಿಗಾಗಿ 371ಕಲಂ ಜಾರಿಗಾಗಿ ಹೋರಾಟ ಮಾಡಿದ ಹೆಗ್ಗಳಿಕೆ ಅವರದ್ದಾಗಿದೆ ಎಂದರು.

ಸ್ವಸಾಮರ್ಥ್ಯದಿಂದ ಖರ್ಗೆ ಅವರು 9 ಸಲ ಶಾಸಕರಾಗಿ, 2 ಸಲ ಸಂಸದರಾಗಿ ವಿವಿಧ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಭಾಗದ ಅಭಿವೃದ್ಧಿಗಾಗಿ 371 (ಜೆ) ಜಾರಿಗೆ ತರಲು ಮಾಜಿ ಸಿಎಂ ದಿ. ಧರಂಸಿಂಗ್‌ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ಅವರ ಪಾತ್ರ ಪ್ರಮುಖವಾಗಿದೆ

ದೇಶ ಕವಲು ದಾರಿಯಲ್ಲಿದೆ:

ದೇಶದಲ್ಲಿ ಜಾತಿ ಜಾತಿಗಳ ಮಧ್ಯ ಜಗಳ, ಹಿಂಸೆ, ದ್ವೇಷದ ಭಾವನೆ ಮೂಡಿ ದೇಶ ಈಗ ಕವಲು ದಾರಿಯಲ್ಲಿದೆ ಇದನ್ನು ಹೋಗಲಾಡಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರು ಸಂವಿಧಾನ ಮೊಟಕುಗೊಳಿಸುವ ಕೆಲಸ ಮಾಡುತ್ತಿದ್ದು, ಚುನಾವಣಾ ಆಯೋಗ, ಸಿಬಿಐ ದುರುಪಯೋಗ, ಜನರಲ್ಲಿ ಭಾವನಾತ್ಮಕ ವಿಷಯಗಳನ್ನು ಕೆರಳಿಸುತ್ತಾ, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರು.

ನಮ್ಮ ಸರ್ಕಾರದ ಕೊಟ್ಟಂತಹ ಅನೇಕ ಯೋಜನೆಗಳನ್ನು ದೊಡ್ಡ ದೊಡ್ಡ ಕಂಪನಿಗಳನ್ನು ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆ ನಮಗೆಲ್ಲ ಸವಾಲಾಗಿವೆ. ಇಲ್ಲಿರುವ ಸಂಸದರು ಏನೂ ಮಾಡಿಲ್ಲ. ಸಿಪೆಟ್ ಕಾಲೇಜು ಮಾಡುತ್ತೇನೆಂದು ತರಬೇತಿ ಕೇಂದ್ರ ಮಾಡಿದ್ದಾರೆ. ಎಫ್ಎಂ ಮಾಡಿಲ್ಲ, ಸೋಲಾರ್‌ ಪಾರ್ಕ ಮಾಡಿಲ್ಲ, ಇದ್ದ ಬಿಎಸ್ಎಸ್‌ಕೆ ಕಾರ್ಖಾನೆ ಬಂದ್‌ ಮಾಡಿಸಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಏನು ಮಾಡಿದ್ದೀರಿ ಎಂದು ಕೇಂದ್ರ ಸಚಿವರಿಗೆ ಕೇಳಿರಿ ಎಂದು ಜನರಿಗೆ ತಿಳಿಸಿ ಭ್ರಷ್ಟ ಕೋಮುವಾದಿ ಬಿಜೆಪಿ ತೊಲಗಿಸಲು ಎಲ್ಲರೂ ಸಜ್ಜಾಗಬೇಕು ಎಂದು ಸಚಿವ ಖಂಡ್ರೆ ಕರೆ ಕೊಟ್ಟರು.

Share this article