ಗಂಗಾಧರ ಡಾಂಗೆ
ಕುಂದಗೋಳ: ಕಳೆದ ಒಂದೂವರೆ ತಿಂಗಳಿನಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಿಸಿಲಿನ ಬೇಗೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಬೆಳಗ್ಗೆ 9 ಗಂಟೆಯಾದರೆ ಸಾಕು ಮನೆಯಿಂದ ಹೊರಬಾರದ ಸ್ಥಿತಿ.ಬಯಲುಸೀಮೆ ಎಂಬ ಹಣೆಪಟ್ಟಿ ಪಡೆದುಕೊಂಡಿರುವ ಕುಂದಗೋಳ ತಾಲೂಕಿನ ಜನತೆ ಬಿಸಿಲಿನಿಂದ ಕಂಗಾಲಾಗಿದ್ದಾರೆ. ರೈತಾಪಿ ವರ್ಗ, ಕೂಲಿ ಕಾರ್ಮಿಕರು, ಜಾನುವಾರು, ಪಕ್ಷಿಗಳೂ ನೆರಳಿನ ಆಸರೆ ಪಡೆಯುವಂತಾಗಿದೆ. ಮಧ್ಯಾಹ್ನವಾದರೆ ಸಾಕು ಹೆಚ್ಚು ಬಿಸಿಲಾದಂತೆ ಮನೆಯಲ್ಲಿ ಕೂಡಲೂ ಆಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಸೆಖೆ ಎಂದು ಪ್ಯಾನ್ ಹಾಕಿದರೆ ಅವು ಬಿಸಿಗಾಳಿ ಬೀಸುತ್ತಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮಧ್ಯಾಹ್ನವಾದರೆ ಸಾಕು ಮನೆಯಿಂದ ಹೊರಬಂದು ಗ್ರಾಮ, ಹೊಲಗಳಲ್ಲಿರುವ ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇನ್ನು ರೈತರು ತಮ್ಮ ಹೊಲಗಳಲ್ಲಿ ಕೃಷಿಚಟುವಟಿಕೆ, ಕುಡಿಯಲು ನೀರು ಸಂಗ್ರಹಿಸಿಕೊಳ್ಳಲು ನಿರ್ಮಾಣ ಮಾಡಿರುವ ಚಿಕ್ಕದಾದ ಕೆರೆಗಳು, ಗ್ರಾಮ, ಪಟ್ಟಣಗಳಲ್ಲಿರುವ ಕೆರೆ-ಕಟ್ಟೆಗಳಲ್ಲಿರುವ ನೀರೆಲ್ಲ ಖಾಲಿಯಾಗಿವೆ. ಇದರಿಂದಾಗಿ ಪ್ರಾಣಿ, ಪಕ್ಷಿಗಳು ನೀರನ್ನರಸಿ ಗ್ರಾಮಗಳತ್ತ ದಾಪುಗಾಲು ಇಡುತ್ತಿದ್ದು, ಮನೆಯ ಮುಂದಿಟ್ಟಿರುವ ದೋಣಿ, ಬಿಂದಿಗೆಗಳಲ್ಲಿ ಸಂಗ್ರಹಿಸಿಟ್ಟಿರುವ ನೀರು ಕುಡಿಯವಂತಾಗಿದೆ. ಸರ್ಕಾರ ಕೃಷಿ ಇಲಾಖೆಯಿಂದ ಗ್ರಾಮೀಣ ಭಾಗಗಳಲ್ಲಿ ಚಿಕ್ಕದಾದ ಕೆರೆ, ಕಟ್ಟೆಗಳ ನಿರ್ಮಾಣ ಮಾಡಿ ನೀರು ಸಂಗ್ರಹಿಸಿದರೆ ಸಾರ್ವಜನಿಕರು, ದನಕರುಗಳಿಗೆ ಹೆಚ್ಚಿನ ಅನಕೂಲವಾಗಲಿದೆ ಎಂಬುದು ಜನರ ಅನಿಸಿಕೆ.ತಂಪು ಪಾನೀಯಗಳ ಮೊರೆ
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಹಲವರು ಕೊಡೆಗಳ ಮೊರೆ ಹೋದರೆ ಇನ್ನೂ ಕೆಲವರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ತಂಪು ಪಾನೀಯ ಅಂಗಡಿಗಳು ಜನರಿಂದ ತುಂಬಿ ಹೋಗಿವೆ. ಕೆಲವರು ಎಳನೀರಿಗೆ ದಾಂಗುಡಿ ಇಡುತ್ತಿದ್ದಾರೆ. ಈ ಮೂಲಕ ಬಿಸಿಲಿನ ಬೇಗೆ ಕೊಂಚ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯದ ಮೇಲಿರಲಿ ಕಾಳಜಿಬೇಸಿಗೆ ವೇಳೆ ಎಳನೀರು, ಕಬ್ಬಿನ ಹಾಲು, ಕಲ್ಲಂಗಡಿ, ಬಾಳೆಹಣ್ಣು, ಟೋಮ್ಯಾಟೋ ಸೂಪ್, ಊಟದಲ್ಲಿ ಮೂಲಂಗಿ, ಸೌತೆಕಾಯಿ ಅನೇಕ ತರಕಾರಿಗಳನ್ನು ಉಪಯೋಗಿಸಬೇಕು. ಎಲ್ಲ ಕಡೆ ದೊರೆಯುವ ಸೇಬುಹಣ್ಣು ಮತ್ತು ಬಾಳೆ ಹಣ್ಣಿನ ಜತೆಗೆ ಸ್ಟ್ರಾಬೆರಿ, ಕಲಂಗಡಿ ಸೇವನೆ ಉತ್ತಮ. ಮನೆಯಲ್ಲಿ ಯಾವಾಗಲೂ ಒಆರ್‌ಎಸ್ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಡಾ. ಗಿರೀಶ್ ಮರಡ್ಡಿ ಸಲಹೆ ನೀಡಿದ್ದಾರೆ. Eಆರೋಗ್ಯ ಸಮಸ್ಯೆ
ಕಳೆದ ಒಂದೂವರೆ ತಿಂಗಳಿನಿಂದ ತಾಲೂಕಿನಾದ್ಯಂತ ಬಿಸಿಲಿನ ಬೇಗೆಯಿಂದ ಜನತೆ ಹೈರಾಣಾಗಿದ್ದಾರೆ. ಬೆಳಗ್ಗೆ 9 ಗಂಟೆಯಾದರೆ ಸಾಕು ಮನೆಯಿಂದ ಹೊರಗೆ ಕಾಲಿಡದಷ್ಟು ಬಿಸಿಲು ಆವರಿಸಿಕೊಳ್ಳುತ್ತಿದೆ. ಇದರಿಂದಾಗಿ ಚಿಕ್ಕ ಮಕ್ಕಳು, ವೃದ್ಧರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.- ಪರುಶುರಾಮ ಮೋರೆ, ರೈತ