ಮಂಡ್ಯ ಮಂಜುನಾಥ
ಮಂಡ್ಯ ಜಿಲ್ಲೆಯ ಕಡೆಗೆ ಇದುವರೆಗೆ ಉಷ್ಣ ಹವೆ ಕಾಣಿಸಿಕೊಂಡಿದ್ದೇ ಇಲ್ಲ. ಬಿಸಿಲ ತಾಪ ಹೆಚ್ಚಿದ್ದರೂ ಅದನ್ನು ಸಹಿಸಿಕೊಂಡಿದ್ದ ಜನರು ಉಷ್ಣಹವೆಯನ್ನು ತಡೆಯುವುದಕ್ಕೆ ಮಾತ್ರ ಅವರಿಂದ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹೆಚ್ಚಿನ ಜನರು ದೇಹವನ್ನು ತಂಪಾಗಿಸಿಕೊಳ್ಳುವುದಕ್ಕೆ ನದಿಗಳಿಗೆ ಇಳಿದಿದ್ದಾರೆ. ನದಿ ಪಾತ್ರದ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಜನರು ಉಷ್ಣಹವೆಯಿಂದ ಧಗ ಧಗಿಸುತ್ತಿರುವ ದೇಹವನ್ನು ನದಿಗಿಳಿದು ತಂಪಾಗಿಸಿಕೊಳ್ಳುತ್ತಿದ್ದಾರೆ.
ಶ್ರೀರಂಗಪಟ್ಟಣದ ಸಂಗಮ, ಗೋಸಾಯಿಘಾಟ್, ಶ್ರೀನಿಮಿಷಾಂಬ ದೇಗುಲ, ಎಡಮುರಿ, ಬಲಮುರಿ, ಸ್ನಾನಘಟ್ಟ, ಮಳವಳ್ಳಿ ತಾಲೂಕಿನ ಮುತ್ತತ್ತಿ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಬಂದವರೆಲ್ಲರೂ ನದಿಗಿಳಿದು ಈಜಾಡಿ ದೇಹವನ್ನು ತಂಪಾಗಿಸಿಕೊಳ್ಳುತ್ತಿದ್ದಾರೆ.ಸಾಮಾನ್ಯವಾಗಿ ಜಿಲ್ಲೆಯಲ್ಲಿ ಕನಿಷ್ಠ ೩೫ ಡಿಗ್ರಿ ಉಷ್ಣಾಂಶದಿಂದ ೩೬ ಡಿಗ್ರಿಯವರೆಗೆ ತಾಪಮಾನವಿರುತ್ತಿತ್ತು. ೨೦೧೭ರ ಏಪ್ರಿಲ್ ೧೬ರಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ೪೧.೬ ಡಿಗ್ರಿ ತಾಪಮಾನ ದಾಖಲಾಗಿದ್ದು ಈವರೆಗಿನ ದಾಖಲೆಯಾಗಿದೆ. ಆ ನಂತರದಲ್ಲಿ ೨೦೧೯ರ ಮಾರ್ಚ್ ೮ರಂದು ಮದ್ದೂರು ತಾಲೂಕಿನ ಮದ್ದೂರು-೨ರಲ್ಲಿ ೪೦.೫ ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿತ್ತು. ಇನ್ನುಳಿದಂತೆ ೩೯.೯ ಡಿಗ್ರಿಯವರೆಗೆ ಅಲ್ಲಲ್ಲಿ ತಾಪಮಾನ ದಾಖಲಾಗಿದೆ. ಜಿಲ್ಲೆಯ ತಾಪಮಾನವೂ ಉತ್ತರ ಕರ್ನಾಟಕದ ಬಿಸಿಯನ್ನೇ ಎದುರಿಸುವ ಪರಿಸ್ಥಿತಿಗೆ ಬಂದು ನಿಂತಿದೆ.
ಹಿಂದೆಲ್ಲಾ ಬಿಸಿಲ ತಾಪ ಹೆಚ್ಚಿದ್ದರೂ ನೆರಳಿರುವ ಕಡೆ ಕುಳಿತಿದ್ದರೆ ಸಮಾಧಾನವೆನಿಸುವಂತಿತ್ತು. ಈಗ ಬಿಸಿಲಿನಿಂದ ಹೊರಬಂದು ನೆರಳಿಗೆ ಬಂದರೂ ಧಗೆ ಹೆಚ್ಚುತ್ತಿದೆ. ಬಿಸಿಯಾದ ಗಾಳಿ ದೇಹವನ್ನು ಇನ್ನಷ್ಟು ಬಿಸಿಯಾಗಿಸುತ್ತಿದೆ. ನೀರು ಎಷ್ಟು ಕುಡಿದರೂ ಅರ್ಧಗಂಟೆ ಕಾಲವೂ ದೇಹದಲ್ಲಿ ನೀರಿನಂಶ ಉಳಿಯುತ್ತಿಲ್ಲ. ಮಜ್ಜಿಗೆ, ಎಳನೀರು, ಹಣ್ಣಿನ ರಸ, ಐಸ್‌ಕ್ರೀಂ ಹೀಗೆ ಬಿಸಿಲಿನಿಂದ ಪಾರಾಗುವುದಕ್ಕೆ ಏನೆಲ್ಲಾ ಸರ್ಕಸ್ ಮಾಡುತ್ತಾ ದೇಹದಲ್ಲಿ ನೀರಿನಂಶ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.
ಮಾರ್ಚ್ ತಿಂಗಳ ಅಂತ್ಯದಿಂದಲೇ ಆರಂಭವಾಗಬೇಕಿದ್ದ ಮುಂಗಾರು ಪೂರ್ವ ಮಳೆ ಇಲ್ಲಿಯವರೆಗೂ ನಿರೀಕ್ಷೆಯಂತೆ ಬಿದ್ದಿಲ್ಲ. ಭೂಮಿ ತಂಪಾಗುತ್ತಿಲ್ಲ. ಹಗಲು ವೇಳೆ ಬಿಸಿಲ ತಾಪ, ರಾತ್ರಿ ವೇಳೆ ಅಸಾಧ್ಯ ಧಗೆಯ ವಾತಾವರಣದಿಂದ ಜನರು ಬೆಂದುಹೋಗಿದ್ದಾರೆ. ಉಷ್ಣ ಹವೆ ಮೊದಲ ಬಾರಿ ಎದುರಾಗಿರುವುದರಿಂದ ಈ ಬಾರಿಯ ಬೇಸಿಗೆ ಜನರನ್ನು ಹೈರಾಣಾಗುವಂತೆ ಮಾಡಿದೆ.
ಬೇಸಿಗೆ ರಜೆ: ಕುಟುಂಬ ಸಮೇತ ನೀರಿಗಿಳಿದು ಸಂತಸ
ಶ್ರೀರಂಗಪಟ್ಟಣ ಸಮೀಪವಿರುವ ಎಡಮುರಿ, ಬಲಮುರಿ, ಗೋಸಾಯ್‌ಘಾಟ್, ಶ್ರೀ ನಿಮಿಷಾಂಬ ದೇವಸ್ಥಾನ ಸೇರಿದಂತೆ ವಿವಿಧೆಡೆ ಪ್ರವಾಸಿಗರ ದಂಡೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಮೈಸೂರು, ಬೆಂಗಳೂರು ಸೇರಿದಂತೆ ಇತರೆ ಭಾಗಗಳಿಂದ ವಾಹನಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಪ್ರವಾಸಿಗರು ಸ್ಥಳ ವೀಕ್ಷಣೆಗಿಂತಲೂ ಹೆಚ್ಚಾಗಿ ನದಿಗಿಳಿದು ಸಂತಸದಿಂದ ಕಾಲ ಕಳೆಯುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದಾರೆ. ಇದರಿಂದ ಬಿಸಿಲ ಧಗೆ, ಉಷ್ಣಹವೆಯಿಂದ ಪಾರಾಗಿ ತಂಪಾದ ಹಿತಾನುಭವ ಪಡೆದುಕೊಳ್ಳುವುದಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.