ಚಿಂಥನ ಮಂಥನ ಸಭೆಗೆ ಅನುಮತಿ ನಿರಾಕರಣೆಗೆ, ಮಠಾಧೀಶರ ಆಕ್ರೋಶ

KannadaprabhaNewsNetwork |  
Published : May 05, 2024, 02:07 AM IST
ಹುಬ್ಬಳ್ಳಿ ಮಹಾನಗರ ಪಾಲಿಕೆ ಎದುರು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಇದು ವಿವಿಧ ಮಠಾಧೀಶರ ಸಭೆಯಾಗಿದ್ದು, ನಾವು ಅನುಮತಿ ಕೇಳಿದರೂ ನೀಡಿಲ್ಲ ಎಂದು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದರು.

ಹುಬ್ಬಳ್ಳಿ:

ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಮಠಾಧೀಶರ ಚಿಂತನ ಮಂಥನ ಸಭೆಗೆ ಚುನಾವಣಾಧಿಕಾರಿಗಳು ತಡೆ ನೀಡಿದ್ದರಿಂದ ಆಕ್ರೋಶಗೊಂಡ ಮಠಾಧೀಶರು ಪ್ರತಿಭಟನೆ ನಡೆಸಿದರು.

ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಬೆಳಗ್ಗೆ 10.30ಕ್ಕೆ ಇಲ್ಲಿನ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿತ್ತು. ಸಭೆ ಇನ್ನೇನು ಆರಂಭವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಚುನಾವಣಾ ನೀತಿ ಸಂಹಿತೆ ಇರುವ ಕಾರಣಕ್ಕೆ ಅನುಮತಿ ಪಡೆಯದೇ ಸಭೆ-ಸಮಾರಂಭ ನಡೆಸಲು ಅವಕಾಶ ನೀಡಲು ಬರುವುದಿಲ್ಲ. ಸಭೆಗೆ ಪರವಾನಗಿ ಕಡ್ಡಾಯವಾಗಿದೆ ಎಂದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಗಳು, ಇದು ವಿವಿಧ ಮಠಾಧೀಶರ ಸಭೆಯಾಗಿದ್ದು, ನಾವು ಅನುಮತಿ ಕೇಳಿದರೂ ನೀಡಿಲ್ಲ ಎಂದು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದರು. ನಾವು ಸಭೆ ನಡೆಸಿಯೇ ಸಿದ್ಧ ಎಂದು ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳು ಹಾಗೂ ಶ್ರೀಗಳ ನಡುವೆ ವಾಗ್ವಾದ ಕೂಡ ನಡೆಯಿತು. ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ತೆರಳಿದ ಎಲ್ಲ ಮಠಾಧೀಶರು, ನಗರದ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

ಅಲ್ಲಿಂದ ಹು-ಧಾ ಮಹಾನಗರ ಪಾಲಿಕೆ ವರೆಗೂ ಮೆರವಣಿಗೆ ನಡೆಸಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾಕಾರಿಯಾದ ಪಾಲಿಕೆ ಆಯುಕ್ತರು ಕೂಡಲೇ ಸ್ಥಳಕ್ಕೆ ಬರಬೇಕು. ನಮಗೆ ಏಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಬೇಕು.

ಸಭೆಗೆ ಧಕ್ಕೆ ತಂದು ಮಠಾಧೀಶರನ್ನು ಬಂಧಿಸುತ್ತೇನೆಂದ ವಿದ್ಯಾನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಧರೇಗೌಡ ಪಾಟೀಲ ಅವರು ಸ್ವಾಮೀಜಿಗಳ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.

ಕ್ಷಮೆ ಕೇಳಲು ಒತ್ತಾಯ:

ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಅನುಮತಿ ಪತ್ರದಲ್ಲಿ ರಾಜಕೀಯ ಸಭೆ ಎಂದು ಬರೆದ ಕಾರಣಕ್ಕೆ ನಾವು ಸಭೆಗೆ ಅನುಮತಿ ನೀಡಿಲ್ಲ. ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶವೂ ಇಲ್ಲ. ಚುನಾವಣೆ ಹಾಗೂ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ರಾಜಕೀಯೇತರ ಸಭೆ ನಡೆಸಲು ಈಗ ನಾವು ಅನುಮತಿ ನೀಡುತ್ತಿದ್ದೇವೆ ಎಂದರು. ಅದಕ್ಕೆ ಸಮಾಧಾನವಾಗದ ಸ್ವಾಮೀಜಿ, ಮಠಾಧೀಶರನ್ನು ಬೀದಿಗಿಳಿಸಿದ ಪೊಲೀಸರು ನಮಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮತ್ತೆ ಬೀದಿಗಿಳಿದು ಪ್ರತಿಭಟನೆ ನಡುಸುತ್ತೇವೆ. ಭಾನುವಾರ ರಾಜ್ಯಾದ್ಯಂತ ಬಂದ್ ಕರೆ ನೀಡುತ್ತೇವೆ ಎಂದು ಪಟ್ಟು ಹಿಡಿದರು.

ಆಗ ಡಿಸಿಪಿ ರಾಜೀವ್ ಎಂ. ಹಾಗೂ ರವೀಶ್ ಸಿ.ಆರ್ ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇವೆ. ರಾಜಕೀಯ ಹೊರತುಪಡಿಸಿ ಸಭೆ ನಡೆಸಿ ಎಂದು ಮನವಿ ಮಾಡಿದ ನಂತರ ಮಠಾಧೀಶರು ಪ್ರತಿಭಟನೆ ಹಿಂಪಡೆದರು.

ಈ ವೇಳೆ ಕೊಟ್ಟೂರು ಶ್ರೀ, ಮಹಾಲಿಂಗ ಶ್ರೀ, ವೃಷಭೇಂದ್ರ ಶ್ರೀ, ಶಿವಕುಮಾರ ಶ್ರೀ, ವೀರೇಶ ಸೊಬರದಮಠ ಸ್ವಾಮೀಜಿ, ಶಂಭುಲಿಂಗ ಶ್ರೀ, ವಾಮದೇವ ಶಿವಾಚಾರ್ಯರು, ಮಹಾಂತ ಶಿವಾಚಾರ್ಯರು, ಸಿದ್ದಬಸವ ಶ್ರೀ, ಬಸವ ಭೂಷಣ ಶ್ರೀ, ಸಂಗಮೇಶ ಶ್ರೀ, ಶರಣಬಸವ ದೇವರು, ಕುಮಾರ ಶ್ರೀಗಳು ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ 50ಕ್ಕೂ ಅಧಿಕ ಮಠಾಧೀಶರು ಇದ್ದರು. ಪ್ರತಿಭಟನೆ ಬಳಿಕ ಮತ್ತೆ ತೆರಳಿ ಮಠಾಧೀಶರು ಸಭೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ