ಸುಸಜ್ಜಿತ ಬಸ್‌ ನಿಲ್ದಾಣದ ನಿರೀಕ್ಷೆಯಲ್ಲಿದ್ದಾರೆ ರಾಣಿಬೆನ್ನೂರು ಜನ

KannadaprabhaNewsNetwork |  
Published : Feb 24, 2026, 04:00 AM IST
ರಾಣಿಬೆನ್ನೂರು ಬಸ್‌ನಿಲ್ದಾಣ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2026-27ನೇ ಸಾಲಿನ ಬಜೆಟ್‌ನಲ್ಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2026-27ನೇ ಸಾಲಿನ ಬಜೆಟ್‌ನಲ್ಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಜಿಲ್ಲೆಯಲ್ಲಿಯೇ ಅತಿ ದೊಡ್ಡದು ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಹೆಸರಾಗಿರುವ ರಾಣಿಬೆನ್ನೂರು ನಗರದ ಜನಸಂಖ್ಯೆಗೆ ಅನುಗುಣವಾಗಿ ಒಂದು ಸುಸಜ್ಜಿತವಾದ ಬಸ್‌ ನಿಲ್ದಾಣದ ಅಗತ್ಯವಿದೆ. ಈಗಿರುವ ಬಸ್‌ ನಿಲ್ದಾಣವು ನಗರದ ಮಧ್ಯವರ್ತಿ ಸ್ಥಳದಲ್ಲಿದ್ದರೂ ತುಂಬಾ ಚಿಕ್ಕದಾಗಿದೆ. ಬಸ್ಸುಗಳು ಸರಾಗವಾಗಿ ಬಸ್‌ ನಿಲ್ದಾಣದ ಒಳಗೆ ಹೋಗಿ ಬರಲು ಪ್ರಯಾಸ ಪಡುವಂತಹ ಸ್ಥಿತಿಯಿದೆ. ಇದರ ಸಮೀಪದಲ್ಲಿಯೇ ಟ್ರಾಫಿಕ್ ಸಿಗ್ನಲ್ ಇರುವುದರಿಂದ ಅನೇಕ ಬಾರಿ ಈ ಮಾರ್ಗವಾಗಿ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಬೇರೊಂದು ವಿಶಾಲವಾದ ಜಾಗೆಯಲ್ಲಿ ಬಸ್‌ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ನಗರದ ಜಾನುವಾರು ಮಾರುಕಟ್ಟೆ ಪ್ರದೇಶದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸುವ ಕುರಿತಂತೆ ಸಂಬಂಧಿಸಿದ ಇಲಾಖೆ ಸಚಿವರುಗಳ ಜತೆ ಚರ್ಚಿಸಿದ್ದಾರೆ. ಉಪವಿಭಾಗಾಧಿಕಾರಿ ಕಚೇರಿ: ರಾಣಿಬೆನ್ನೂರು ತಾಲೂಕು ಸದ್ಯ ಹಾವೇರಿ ಉಪ ವಿಭಾಗದಲ್ಲಿದೆ. ರೈತರ ಜಮೀನುಗಳ ವ್ಯಾಜ್ಯಗಳಿಗೆ ಸಂಬಂಧಿಸಿದ ಮೇಲ್ಮನವಿ ಪ್ರಕರಣ, ಭೂಸ್ವಾಧೀನ ಪ್ರಕರಣಗಳು, ಇನಾಮು ಜಮೀನಿಗೆ ಸಂಬಂಧಿಸಿದ ಪ್ರಕರಣಗಳು, ಭೂನ್ಯಾಯ ಮಂಡಳಿ ವ್ಯಾಜ್ಯಗಳು ಮುಂತಾದವುಗಳಿಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪರಿಹಾರ ದೊರಕುತ್ತದೆ. ಹೀಗಾಗಿ ಇಲ್ಲಿನ ಜನತೆ ಅಲ್ಲಿಗೆ ಅಲೆಯಬೇಕಾಗುತ್ತಿದೆ. ಇದನ್ನು ತಪ್ಪಿಸಲು ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲೂಕುಗಳನ್ನು ಒಳಗೊಂಡು ನಗರದಲ್ಲಿಯೇ ಉಪ ವಿಭಾಗಾಧಿಕಾರಿ ಕಚೇರಿ ಪ್ರಾರಂಭಿಸುವುದು ಸೂಕ್ತವಾಗುತ್ತದೆ. ಇದರಿಂದ ತಾಲೂಕಿನ ಜನರಿಗೆ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ. ಕಚೇರಿ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ವರ್ತುಲ ರಸ್ತೆ: ಬೃಹದಾಕಾರವಾಗಿ ಬೆಳೆಯುತ್ತಿರುವ ನಗರದ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆ ನಿಯಂತ್ರಣಕ್ಕಾಗಿ ನಗರದಲ್ಲಿ ವರ್ತುಲ ರಸ್ತೆ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರದ ಕಚೇರಿಯ ಸಹಹೋಗದೊಂದಿಗೆ ನೀಲ ನಕ್ಷೆ ರೂಪಿಸಿ ಜಾರಿಗೆ ತರಬೇಕಾಗಿದೆ.

ಪೊಲೀಸ್ ಠಾಣೆ:ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾಗಿದ್ದರೂ ಇಲ್ಲಿಗಿಂತ ಹಾವೇರಿ ನಗರ ಪೊಲೀಸ್‌ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರವು ಹಾವೇರಿ ನಗರಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ. ಇಲ್ಲಿನ ನ್ಯಾಯಾಲಯ ಸಂಕಿರ್ಣದಲ್ಲಿ ಐದು ಕೋರ್ಟ್ ಹಾಲ್‌ಗಳಿವೆ. ಸಮನ್ಸ್ ಮತ್ತು ವಾರಂಟ್ ಜಾರಿಗೆ ಸಿಬ್ಬಂದಿ ಬೇಕಾಗುತ್ತದೆ. ಸಿಬ್ಬಂದಿ ಕೊರತೆಯಿಂದಾಗಿ ಇಲ್ಲಿಯ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಇದಲ್ಲದೆ ಬೆಳೆಯುತ್ತಿರುವ ನಗರದ ಜನತೆ ಶಾಂತಿ ಭದ್ರತೆ ಒದಗಿಸುವ ಸಲುವಾಗಿಯೂ ಇನ್ನೊಂದು ಠಾಣೆಯ ಅವಶ್ಯವಿದೆ ಎಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ.

ಮೆಕ್ಕೆಜೋಳ ಸಂಸ್ಕರಣಾ ಕೇಂದ್ರ ಹಾಗೂ ಕೋಲ್ಡ್ ಸ್ಟೋರೆಜ್: ತಾಲೂಕಿನ ರೈತರು ಇತ್ತೀಚಿನ ವರ್ಷಗಳಲ್ಲಿ ಅಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಅದಕ್ಕಾಗಿ ಸ್ಥಳೀಯವಾಗಿಯೇ ಮೆಕ್ಕೆಜೋಳ ಸಂಸ್ಕರಣಾ ಕೇಂದ್ರ ಸ್ಥಾಪಿಸುವುದು ಅಗತ್ಯವಾಗಿದೆ. ಇದರ ಜತೆಯಲ್ಲಿ ಮೆಕ್ಕೆಜೋಳ ಸಂಗ್ರಹಿಸಿಡಲು ಕೋಲ್ಡ್ ಸ್ಟೋರೆಜ್ ನಿರ್ಮಿಸಬೇಕು. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಬೇಕು:ನಗರವು ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾಗಿದ್ದು, ಸ್ಥಳೀಯ ತಾಲೂಕು ಮಾತ್ರವಲ್ಲದೆ ಅಕ್ಕಪಕ್ಕದ ತಾಲೂಕುಗಳಿಂದಲೂ ಪ್ರತಿದಿನ ಸಾಕಷ್ಟು ರೋಗಿಗಳು ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಾರೆ. ನಗರದ ಹಲಗೇರಿ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಸದ್ಯ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯು 50 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗಳ ಸಾಮರ್ಥ್ಯಕ್ಕೆ ಏರಿಸಬೇಕು. ಇದರಿಂದ ಮತ್ತಷ್ಟು ತಜ್ಞ ವೈದ್ಯರು ಲಭಿಸುವುದರಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕಲಿದೆ. ಇದರೊಂದಿಗೆ ಸಿಟಿ ಸ್ಕ್ಯಾನ್ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಈ ವಿಷಯದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಆಸಕ್ತಿ ವಹಿಸಿದ್ದು, ನಗರದಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆ ತೆರೆಯಲು ಆರೋಗ್ಯ ಇಲಾಖೆ ಸಚಿವರ ಜತೆ ಮಾತುಕತೆ ನಡೆಸಿದ್ದು ಅದು ಬಜೆಟ್‌ನಲ್ಲಿ ಸಾಕಾರಗೊಳ್ಳುವುದೇ ಕಾದು ನೋಡಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಯಿಲ ಎಂಡೋ ಪಾಲನಾ ಕೇಂದ್ರದಲ್ಲಿ ಪೋಷಕರ ಸಭೆ
ವಾದಿರಾಜ ಕಲ್ಲೂರಾಯಗೆ ‘ಬಹುಮುಖಿ’ ಪ್ರಶಸ್ತಿ