ಬೆಳಗಾವಿ : ಮಹಾರಾಷ್ಟ್ರ ರಾಜ್ಯದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯಾದ್ಯಂತ ಅಬ್ಬರದ ಮಳೆ ಮುಂದುವರೆದಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿ ಜಿಲ್ಲೆಯ ಇತರೆ ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ರಾಮದುರ್ಗದಲ್ಲಿ ಮನೆ ಛಾವಣಿ ಕುಸಿದು ಬಿದ್ದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೋಕಾಕ ನಗರ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಒಂದೇ ರಾತ್ರಿಯಲ್ಲಿ ಕೃಷ್ಣಾ ನದಿಯಲ್ಲಿ 6 ಅಡಿಯಷ್ಟು ನೀರು ಹೆಚ್ಚಳವಾಗಿದೆ. ರಾತ್ರೋರಾತ್ರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ದೇವಸ್ಥಾನ ಮುಳುಗಡೆಯಾಗಿದೆ. ಸದ್ಯ ಕೃಷ್ಣಾ ನದಿಗೆ 1.50 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ. ನೀರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ಪಂಪಸೆಟ್‌ಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ನದಿ ಪಾತ್ರದಲ್ಲಿರುವ ತೋಟದ ಮನೆಗಳಲ್ಲಿನ ಜನರು ತಮ್ಮ ಮನೆಗಳನ್ನು ತೊರೆದು ಗ್ರಾಮಗಳತ್ತ ಮುಖ ಮಾಡಿದ್ದಾರೆ. ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಪಂಚಗಂಗಾ ನದಿಯ ಒಳಹರಿವು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸುಮಾರು 80 ಸಂಪರ್ಕ ಸೇತುವೆ ಜಲಾವೃತವಾಗಿದೆ.ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಕೊಯ್ನಾ ಜಲಾಶಯದಿಂದ 95 ಸಾವಿರ ಕ್ಯುಸೆಕ್ , ವಾರಣಾ ಜಲಾಶಯದಿಂದ 40 ಸಾವಿರ ಕ್ಯುಸೆಕ್, ರಾಧಾನಗರಿ ಜಲಾಶಯದಿಂದ 13 ಸಾವಿರ ಕ್ಯುಸೆಕ್ ಮತ್ತು ಕಾಳಮ್ಮವಾಡಿ ಜಲಾಶಯದಿಂದ 25 ಸಾವಿರ ಕ್ಯುಸೆಕ್ ಹೀಗೆ ಒಟ್ಟು 1.75 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ, ಘಟಪ್ರಭಾ ನದಿ ಮೂಲಕ ರಾಜ್ಯಕ್ಕೆ ಹರಿದು ಬರುತ್ತಿದೆ. ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ದೂಧಗಂಗಾಾ ನದಿ ದಡದಲ್ಲಿರುವ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತಗೊಂಡಿದ್ದು, ನೀರಿನಲ್ಲೇ ತೆರಳಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ಕರ್ನಾಟಕ- ಮಹಾರಾಷ್ಟ್ರ ಸಂಪರ್ಕ ಕಡಿತ
ಕೃಷ್ಣ ನದಿಯ ಆರ್ಭಟಕ್ಕೆ ಕುಡಚಿ ಉಗಾರಖುರ್ದ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಸಂಪರ್ಕ ಸ್ಥಗಿತವಾಗಿದೆ.ರಾಯಭಾಗ ತಾಲೂಕಿನಲ್ಲಿರುವ ಬೃಹತ್ ಕುಡಚಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕಡಿತಗೊಂಡಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಪ್ರಮುಖ ಹೆದ್ದಾರಿ ಇದಾಗಿದ್ದು, ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ.ಕೃಷ್ಣಾ ನದಿಯ ಒಳಹರಿವು ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕ್ಷಣ ಕ್ಷಣಕ್ಕೂ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ದುರ್ಗಾದೇವಿ ದೇವಸ್ಥಾನ ಜಲಾವೃತವಾಗಿದೆ. ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರದಿಂದ ಹೀರಣ್ಯಕೇಶಿ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು ಘಟಪ್ರಭಾ ನದಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಹುಕ್ಕೇರಿ ತಾಲೂಕಿನಲ್ಲಿ 6 ಸೇತುವೆ ಮುಳುಗಡೆ
ಹಿಡಕಲ್ ಜಲಾಶಯದಿಂದ 50 ಸಾವಿರಕ್ಕಿಂತ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಕೊಟಬಾಗಿ ಗ್ರಾಮದ ಶಕ್ತಿ ಪೀಠ ದುರ್ಗಾದೇವಿ ದೇವಸ್ಥಾನ ಜಲಾವೃತಗೊಂಡಿದೆ. ಮತ್ತಷ್ಟು ನೀರು ಬಿಡುಗಡೆಯಾದರೆ ಕೊಟಬಾಗಿ ಗ್ರಾಮದ ಒಳಗೆ ನೀರು ನುಗ್ಗುವ ಸಾಧ್ಯತೆಯಿದೆ. ಹುಕ್ಕೇರಿ ತಾಲೂಕಿನಲ್ಲಿ ಘಟಪ್ರಭಾ ನದಿಗೆ ನಿರ್ಮಿಸಲಾದ 6 ಬ್ರಿಜ್ ಕಂ ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಕೆಲ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.ಶೆಟ್ಟಿಹಾಳದ ಎರಡು ಬ್ರಿಡ್ಜ್, ಸಲಾಮವಾಡಿ ಹಾಗೂ ಮೋದಗಾ ಗ್ರಾಮದ ತಲಾ ಒಂದು ಬ್ರಿಡ್ಜ್ ಮುಳುಗಿವೆ. ಹಿರಣ್ಯಕೇಶಿ ನದಿಯ ಯರನಾಳ-ಹುಕ್ಕೇರಿ ಬ್ರಿಡ್ಜ್ ಜಲಾವೃತವಾಗಿದೆ. ಶಿರೂರ ಡ್ಯಾಂನಿಂದ ಹೊರಬಿಟ್ಟಿರುವ ನೀರಿನಿಂದ ಬಸ್ಸಾಪುರ ಬ್ರಿಡ್ಜ್ ಮುಳಗಡೆಯಾಗಿದೆ. ನದಿ ದಡದಲ್ಲಿರುವ ಕಬ್ಬಿನ ಗದ್ದೆ ಹಾಗೂ ಇತರೆ ಬೆಳೆಗಳಿಗೆ ನೀರು ನುಗ್ಗಿದೆ. ಸಲಾಮವಾಡಿ ಗ್ರಾಮದ ನದಿ ಪಕ್ಕದಲ್ಲಿರುವ ಭಾವೇಶ್ವರಿ ದೇವಸ್ಥಾನ ಮತ್ತೆ ಜಲಾವೃತಗೊಂಡಿದೆ.
ಗೋಕಾಕ ನಗರಕ್ಕೆ ಪ್ರವಾಹ ಭೀತಿ
ಮಾರ್ಕಂಡೇಯ ಮತ್ತು ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಗೋಕಾಕ ನಗರದ ಹೊರವಲಯದಲ್ಲಿರುವ ಲೋಳಸೂರ ಸೇತುವೆ ಮುಳುಗಡೆಯಾಗಿದೆ. ಸಂಕೇಶ್ವರ- ಸವದತ್ತಿ ರಾಜ್ಯ ಹೆದ್ದಾರಿ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ಪರ್ಯಾಯ ಮಾರ್ಗದ ಮೂಲಕ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ ದೇವಸ್ಥಾನ ಜಲಾವೃತಗೊಂಡಿದೆ. ಗೋಕಾಕ ನಗರದ ಉಪ್ಪಾರ ಗಲ್ಲಿ, ಕುಂಬಾರ ಗಲ್ಲಿ, ಮಟನ್ ಮಾರ್ಕೆಟ್, ದನದ ಪೇಟೆಗೆ ನೀರು ನುಗ್ಗಿದೆ. 300ಕ್ಕೂ ಅಧಿಕ ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಗೋಕಾಕ ನಗರಕ್ಕೆ ಭೇಟಿ ನೀಡಿ ಅವಲೋಕನ ನಡೆಸಿದರು.