ಬಳ್ಳಾರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಏಳು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹತ್ತಾರು ಮರಗಳು ನೆಲಕ್ಕುರುಳಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ.ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯೂ ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಮಳೆ ಸುರಿಯಿತು. ಸಿಡಿಲಿನ ಆರ್ಭಟವಿತ್ತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಬೆಳಿಗ್ಗೆ ಸುಮಾರು 11.20ಕ್ಕೆ ಆರಂಭಗೊಂಡ ಮಳೆ ಸತತ ಎರಡು ತಾಸಿಗೂ ಹೆಚ್ಚು ಹೊತ್ತು ಮಳೆಯಾಯಿತು.
ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನಜಾವ 8 ಗಂಟೆವರೆಗೆ ಜಿಲ್ಲೆಯಲ್ಲಿ 14.6 ಮಿ.ಮೀ. ಮಳೆಯಾಗಿದೆ. ಸಿರುಗಪ್ಪದಲ್ಲಿ 20 ಮಿ.ಮೀ., ಸಂಡೂರು 18.5 ಮಿ.ಮೀ., ಕುರುಗೋಡು 11.1 ಮಿ.ಮೀ., ಬಳ್ಳಾರಿ 8.3 ಮಿ.ಮೀ. ಹಾಗೂ ಕಂಪ್ಲಿ ತಾಲೂಕಿನಲ್ಲಿ 8.1 ಮಿ.ಮೀ. ಮಳೆಯಾಗಿದೆ.
ಸತತ ಎರಡು ತಾಸು ನಿರಂತರವಾಗಿ ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಾರ್ವಜನಿಕರು ಪರದಾಡಿದರು. ಇಲ್ಲಿನ ಬಂಡಿಮೋಟ್, ಲಾರಿ ಟರ್ಮಿನಲ್, ರೇಣುಕಾನಗರ, ವಿಶ್ವೇಶ್ವರಯ್ಯನಗರ, ದೇವಿನಗರ, ರೇಡಿಯೋ ಪಾರ್ಕ್, ಕೊರಚರಬೀದಿ, ಬಾಪೂಜಿನಗರ ಸೇರಿದಂತೆ ಹತ್ತಾರು ಪ್ರದೇಶಗಳಲ್ಲಿ ಮಳೆಯ ನೀರು ಅವಾಂತರ ಸೃಷ್ಟಿಸಿತು.ಮಳೆನೀರು ಸರಾಗವಾಗಿ ಹರಿಯಲು ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ರಸ್ತೆಯಲ್ಲಿ ನೀರು ಹರಿಯುವ ದೃಶ್ಯಗಳು ಕಂಡು ಬಂದವು. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು ನೀರು ಹೊರ ಹಾಕಲು ಜನರು ಪರದಾಡುವಂತಾಯಿತು. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸದ ಪಾಲಿಕೆ ಆಡಳಿತ ವೈಖರಿ ವಿರುದ್ಧ ನಗರ ನಿವಾಸಿಗಳು ಹಿಡಿಶಾಪ ಹಾಕಿದರು.