ಉಪಲೋಕಾಯುಕ್ತರ ಎದುರು ಸಾಲು ಸಾಲು ಸಮಸ್ಯೆ ಅನಾವರಣ

KannadaprabhaNewsNetwork |  
Published : Feb 13, 2025, 12:50 AM IST
12ಎಚ್‌ವಿಆರ್‌2- | Kannada Prabha

ಸಾರಾಂಶ

ಮೂರು ದಿನಗಳ ಜಿಲ್ಲಾ ಪ್ರವಾಸದಲ್ಲಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಎದುರು ವಿವಿಧ ರೀತಿಯ ಲೋಪಗಳು, ಸಮಸ್ಯೆಗಳು ಉಪಲೋಕಾಯುಕ್ತರ ಅನಾವರಣಗೊಂಡವು.

ಹಾವೇರಿ: ಬಸ್‌ ನಿಲ್ದಾಣದಲ್ಲಿ ಪಾರ್ಕಿಂಗ್‌ ಹೆಸರಿನಲ್ಲಿ ಸುಲಿಗೆ, ಎಪಿಎಂಸಿಯಲ್ಲಿ ಶೌಚಾಲಯ ಇಲ್ಲದೇ ರೈತರು ಪರದಾಡುತ್ತಿರುವುದು, ದಲ್ಲಾಳಿಗಳಿಂದ ರೈತರಿಗೆ ಆಗುತ್ತಿರುವ ಮೋಸ, ರಜೆ ಮೇಲಿದ್ದರೂ ಹಾಜರಾತಿ ಪುಸ್ತಕದಲ್ಲಿ ನಮೂದಿಸದಿರುವುದು ಹೀಗೆ ವಿವಿಧ ರೀತಿಯ ಲೋಪಗಳು, ಸಮಸ್ಯೆಗಳು ಉಪಲೋಕಾಯುಕ್ತರ ಎದುರು ಅನಾವರಣಗೊಂಡವು.

ಮೂರು ದಿನಗಳ ಜಿಲ್ಲಾ ಪ್ರವಾಸದಲ್ಲಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬುಧವಾರ ಬೆಳಗ್ಗೆ 6 ಗಂಟೆಗೆ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿಯ ಅವ್ಯವಸ್ಥೆ ನೋಡಿ ಗರಂ ಆದ ಲೋಕಾಯುಕ್ತರು, ಈ ಮಾರುಕಟ್ಟೆಯಲ್ಲಿ ವಾರ್ಷಿಕವಾಗಿ ₹3 ಕೋಟಿ ವಹಿವಾಟು ನಡೆಯುತ್ತದೆ. ಸೆಸ್‌ ಸಂಗ್ರಹ ಮಾಡಿದರೂ ಇಲ್ಲಿ ಮೂಲ ಸೌಕರ್ಯಗಳಿಲ್ಲ, ಎಪಿಎಂಸಿ ಅಧಿಕಾರಿಗಳು ಯಾವತ್ತೂ ಬೆಳಗ್ಗೆ ಬಂದು ಇಲ್ಲಿ ನೋಡಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.

ಬ್ಯಾಡಗಿ ಮಾರುಕಟ್ಟೆಯಲ್ಲಿ ತೂಕದ ಯಂತ್ರದ ಮೇಲೆ ಹತ್ತಿ ನಿಂತ ಲೋಕಾಯುಕ್ತರು ಖುದ್ದು ತಮ್ಮ ತೂಕ ಮಾಡಿ ಪರಿಶೀಲಿಸಿದರು. ಒಂದೊಂದು ಯಂತ್ರದಲ್ಲಿ ಒಂದೊಂದು ತೂಕ ಬಂದಿದ್ದರಿಂದ ಸಂಶಯಗೊಂಡ ಅವರು, ತೂಕದ ಯಂತ್ರಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದರಿಂದ ರೈತರಿಗೆ ಮೋಸವಾಗುತ್ತಿದೆ. ಇದನ್ನು ತಡೆಗಟ್ಟಲು ಮಾರುಕಟ್ಟೆ ಅಧಿಕಾರಿಯು ಮುಂದಾಗಬೇಕು ಮತ್ತು ತೂಕದ ಯಂತ್ರಗಳನ್ನು ಪ್ರತಿ ವರ್ಷ ಪರಿಶೀಲಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಾರ್ಕಿಂಗ್ ಹೆಸರಲ್ಲಿ ಸುಲಿಗೆ

ಹಾವೇರಿ ಬಸ್‌ ನಿಲ್ದಾಣಕೆ ಭೇಟಿ ನೀಡಿ, ಪ್ರಯಾಣಿಕರ ವಾಹನಗಳ ನಿಲುಗಡೆಗೆ ಮಾಡಿರುವ ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿದರು. ಪಾರ್ಕಿಂಗ್ ಸ್ಥಳದಲ್ಲಿ ರಸೀದಿ ಮತ್ತು ರಿಜಿಸ್ಟರ್ ಪರಿಶೀಲಿಸಿದರು. ವಾಹನಗಳ ನಿಲುಗಡೆಗೆ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚಿನ ಹಣ ಸಾರ್ವಜನಿಕರಿಂದ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ಗುತ್ತಿಗೆದಾರರ ಅವಧಿ ಮುಗಿದಿದ್ದರೂ ಏಕೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದಲ್ಲಿ ಸೆಕ್ಯೂರಿಟಿ ಇಲ್ಲ, ಮೊಬೈಲ್ ಕಳ್ಳತನ ಹಾಗೂ ವಾಹನ ಕಳ್ಳತನಗಳಾಗುತ್ತಿದ್ದು, ಈ ಬಗ್ಗೆ ಯಾರು ಕ್ರಮ ವಹಿಸುತ್ತಿಲ್ಲ, ಶೌಚಾಲಯಗಳು ಸರಿಯಾಗಿ ನಿರ್ವಹಣೆ ಇಲ್ಲ, ಶೌಚಾಲಯ ಬಳಕೆಗೆ 5 ರು. ನಿಗದಿಪಡಿಸಿದ್ದರೂ 10 ರು. ಪಡೆಯಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದರು.

ಜಿಲ್ಲಾಸ್ಪತ್ರೆಗೆ ಭೇಟಿ

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಶುಚಿತ್ವ ಕಾಪಾಡಿಕೊಳ್ಳುವಂತೆ, ಅವಧಿ ಮೀರಿರುವ ಔಷಧಿಗಳನ್ನು ತೆಗೆದುಹಾಕಬೇಕು, ಆಗಾಗ ಔಷಧಿಗಳನ್ನು ಪರಿಶೀಲಿಸುತ್ತಿರಬೇಕು. ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳು ಬಡವರಾಗಿದ್ದು, ಅವರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು. ಆ ಕಾರಣಕ್ಕಾಗಿ ತಾವೆಲ್ಲರೂ ಜವಾಬ್ದಾರಿಯಾಗಿ ಕೆಲಸ ಮಾಡಬೇಕು. ವೈದ್ಯರು ರಜೆ ಮೇಲಿದ್ದರೂ ಹಾಜರಾತಿ ಪುಸ್ತಕದಲ್ಲಿ ನಮೂದಿಸಿಲ್ಲ. ಈ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದರು.

ಏಜೆಂಟರ ಹಾವಳಿ ತಪ್ಪಿಸಿ

ಬಳಿಕ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ಅಲ್ಲಿನ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಭೂಮಾಪನ ಇಲಾಖೆ, ನಗರ ಮಾಪನ ಇಲಾಖೆ, ಭೂಮಿ ಶಾಖೆ ಹಾಗೂ ಸಿಬ್ಬಂದಿ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಹಸೀಲ್ದಾರ್ ಕಚೇರಿಯಲ್ಲಿ ಖರೀದಿ ಪತ್ರ, ಕ್ರಾಪ್ ಲೋನ್ ಮುಂತಾದ ಸಾರ್ವಜನಿಕ ಕೆಲಸಗಳನ್ನು ಮಾಡಿಕೊಡಲು ದುಡ್ಡು ಕೊಡಲೇ ಬೇಕು ಎಂದು ಸಾರ್ವಜನಿಕರು ದೂರಿದರು. ಏಜೆಂಟರ ಮೂಲಕ ಕೆಲಸ ಮಾಡಿಕೊಡುವ ಪದ್ಧತಿ ಇದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಈ ವೇಳೆ ಲೋಕಾಯುಕ್ತ ಹೆಚ್ಚುವರಿ ವಿಚಾರಣಾ ನಿಬಂಧಕ ಕೆ.ಎಂ. ರಾಜಶೇಖರ, ಪಿ. ಶ್ರೀನಿವಾಸ ಹಾಗೂ ವಿಚಾರಣಾ ಉಪ ನಿಬಂಧಕ ಅರವಿಂದ ಎನ್.ವಿ., ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ್ ಶ್ರೀಧರ್, ಎಸ್ಪಿ ಅಂಶುಕುಮಾರ, ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ, ಡಿಎಸ್‌ಪಿ ಚಂದ್ರಶೇಖರ ಬಿ.ಪಿ. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.ಸುಮೊಟೊ ಪ್ರಕರಣ ದಾಖಲು

ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸೆಸ್ ಸಂಗ್ರಹಿಸುತ್ತಾರೆ. ಆದರೆ, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹಾವೇರಿ ಬಸ್ ನಿಲ್ದಾಣದಲ್ಲಿ ಶೌಚಾಲಯದಲ್ಲಿ, ಪಾರ್ಕಿಂಗ್‌ನಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತೂಕದ ಯಂತ್ರಗಳು ಸರಿ ಇಲ್ಲ, ಆ ಯಂತ್ರಗಳನ್ನು ವಶಕ್ಕೆ ಪಡೆದಿದ್ದೇವೆ. ನಾವು ಬರೋದು 15 ದಿನಗಳ ಮುಂಚೆಯೇ ಮಾಹಿತಿ ಇದ್ದರೂ ಅಧಿಕಾರಿಗಳು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿ ಮೂರು ಸುಮೊಟೊ ಪ್ರಕರಣ ದಾಖಲಿಸುತ್ತೇವೆ. - ಬಿ.ವೀರಪ್ಪ, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ