೩೮ಕ್ಕೂ ಅಧಿಕ ಉಷ್ಣಾಂಶ ದಾಖಲು । ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರಿನ ಅಭಾವ
ಕನ್ನಡಪ್ರಭ ವಾರ್ತೆ ಮುಂಡಗೋಡ
ಉರಿ ಬಿಸಿಲಿನ ತಾಪಮಾನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹಿಂದೆಂದೂ ಕಾಣದ ತಾಪಮಾನ ಈಗ ಕಾಣಲಾಗುತ್ತಿದ್ದು, ಜನರಲ್ಲಿ ದಿಗ್ಬ್ರಾಂತಿ ಮೂಡಿಸಿದೆ. ದಿನ ಬೆಳಗಾಗಿ ಸೂರ್ಯ ಉದಯಿಸುತ್ತಿದ್ದಂತೆ ಪ್ರಾರಂಭವಾಗುವ ಬಿಸಿಲಿನ ತಾಪಮಾನ ಕ್ಷಣ ಕ್ಷಣಕ್ಕೂ ಹೆಚ್ಚುತ್ತ ಸಾಗುವ ಶೆಕೆಯಿಂದ ಜನರು ನಿಲ್ಲಲಾಗದೆ ಕುಳಿತುಕೊಳ್ಳಲಾಗದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಮಧ್ಯಾಹ್ನದ ನಂತರವಂತೂ ಫ್ಯಾನ್‌ಗಳು ಕೂಡ ಬಿಸಿ ಗಾಳಿಯನ್ನು ಸೂಸುತ್ತವೆ. ಅಷ್ಟೊಂದು ಬಿಸಿಲಿನ ರಭಸ ಜೋರಾಗಿದೆ. ಹೊರಗೆ ತಿರುಗಾಡುವವರ ಪರಿಸ್ಥಿತಿಯಂತೂ ಹೇಳತೀರದು. ಬೆವರು ಸುರಿಸುತ್ತಲೇ ತಿರುಗಾಡಬೇಕು. ಚಪ್ಪಲಿ ಇಲ್ಲದೆ ನಡೆದಾಡುವವರ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ.ಹಿಂದೆ ಈ ಭಾಗದಲ್ಲಿ ಶೇ ೩೪-೩೫ ಉಷ್ಣಾಂಶ ವರದಿಯಾದರೆ ಆಶ್ಚರ್ಯಪಡಬೇಕಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ೩೮ಕ್ಕೂ ಅಧಿಕ ಉಷ್ಣಾಂಶ ದಾಖಲಾಗುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಬೀದರ, ರಾಯಚೂರು, ಬಳ್ಳಾರಿ ಸೇರಿದಂತೆ ಬಯಲು ಸೀಮೆ ಪ್ರದೇಶದಲ್ಲಿ ಮಾತ್ರ ಹೆಚ್ಚು ಉಷ್ಣಾಂಶ ಕಾಣಲಾಗುತ್ತಿತ್ತು. ಆದರೆ ಈಗ ಅರ್ಧಕ್ಕೂ ಹೆಚ್ಚು ಪ್ರದೇಶ ಅರಣ್ಯದಿಂದ ಕೂಡಿರುವ ಅರೆ ಮಲೆನಾಡು ಮುಂಡಗೋಡ ಭಾಗದಲ್ಲಿ ಕೂಡ ಹೆಚ್ಚು ಉಷ್ಣಾಂಶ ಕಣುತ್ತಿದ್ದು, ಮಲೆನಾಡು ಕೂಡ ಬಯಲು ಸೀಮೆ ಪ್ರದೇಶಕ್ಕೆ ಹೊರತಾಗಿಲ್ಲ ಎಂಬುವುದನ್ನು ಸಾಬೀತುಪಡಿಸುತ್ತಿದೆ. ಅಂತರ್ಜಲ ಕ್ಷೀಣಿಸುತ್ತ ಸಾಗಿರುವುದರಿಂದ ಭೂಮಿ ಬರಡಾಗುತ್ತಿದೆ. ಬಿಸಿಲಿನ ತಾಪಮಾನಕ್ಕೆ ಅರಣ್ಯ ಪ್ರದೇಶದ ಗಿಡ ಮರಗಳ ಎಲೆ ಸಂಪೂರ್ಣ ಒಣಗಿ ಉದುರಿ ಬಿಳುತ್ತಿದ್ದು, ಅರಣ್ಯವೆಂಬುವುದು ರಣರಣವಾಗಿ ಭಾಸವಾಗುತ್ತಿದೆ.
ಬಿಸಿಲಿನ ತಾಪ ತಡೆಯಲಾಗದ ಜನ ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ಈಗ ಪಟ್ಟಣದ ಎಲ್ಲ ಪ್ರದೇಶದಲ್ಲಿ ಎಳನೀರು ಕಾಣಸಿಗುತ್ತಿದ್ದು, ಎಳನೀರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಪ್ಯಾಪಾರ ಕೂಡ ಜೋರಾಗಿಯೇ ನಡೆಯುತ್ತಿದೆ. ಜೊತೆಗೆ ಕಲ್ಲಂಗಡಿ, ಕರ್ಬೂಜ ಸೇರಿದಂತೆ ಮುಂತಾದ ಹಣ್ಣಿನ ವ್ಯಾಪಾರ ಕೂಡ ಬರದಿಂದ ಸಾಗಿದೆ.
ಭೂಮಿಯಲ್ಲಿನ ಅಂತರ್ಜಲ ಮಟ್ಟ ಕುಗ್ಗಿರುವುದರಿಂದ ಕುಡಿಯುವ ನೀರಿನ ಅಭಾವ ಎದುರಾಗಿದೆ. ತಾಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಬೋರವೆಲ್ ನೀರು ಕಡಿಮೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಕೆಲವೆಡೆ ಸ್ಥಳಿಯ ಸಂಸ್ಥೆಗಳು ಬೇರೆ ಬೇರೆ ಕಡೆಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ದೃಶ್ಯಗಳನ್ನು ನಾವು ಕಾಣಬಹುದಾಗಿದೆ.
ಬಿಸಿಲಿನ ಬೇಗೆಯಿಂದ ಗಿಡ ಮರಗಳೆಲ್ಲ ಒಣಗಿದ್ದು, ಸಣ್ಣ ಪುಟ್ಟ ಕೆರೆ ಕಟ್ಟೆಗಳು ಕೂಡ ಬತ್ತಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಬರುವ ನೆಪದಲ್ಲಿ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಅರಣ್ಯ ಇಲಾಖೆಯವರು ಅಲ್ಲಲ್ಲಿ ನೀರಿನ ತೊಟ್ಟಿಗಳನ್ನಿಟ್ಟು ಅದರಲ್ಲಿ ನೀರು ತುಂಬಿಸಿ ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ಅನುಕೂಲ ಮಾಡಿ ಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.