ಹುಬ್ಬಳ್ಳಿ: ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಭಾನುವಾರ ಮಧ್ಯಾಹ್ನದಿಂದ ಆರಂಭಗೊಂಡ ಗುಡುಗು- ಸಿಡಿಲಿನ ಅಬ್ಬರದೊಂದಿಗೆ ಸುರಿದ ಮಹಾ ಮಳೆಗೆ ಜನತೆ ತತ್ತರಿಸುವಂತಾಯಿತು. 20ಕ್ಕೂ ಅಧಿಕ ಕಡೆ ಮರಗಳು ನೆಲಕ್ಕುರುಳಿದರೆ, ತಗ್ಗುಪ್ರದೇಶಗಳಲ್ಲಿ ನೀರು ನಿಂತು ಜನತೆ ತೊಂದರೆ ಅನುಭವಿಸುವಂತಾಯಿತು.
ಧರೆಗುರುಳಿದ ಮರಗಳು
ಮಳೆಯೊಂದಿಗೆ ಬೀಸಿದ ರಭಸದ ಗಾಳಿಗೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಇಲ್ಲಿನ ಶಿವಪುತ್ರ ನಗರದಲ್ಲಿರುವ ಮೆಹಬೂಬ ಸುಬಾನಿ ದರ್ಗಾದ ಮೇಲೆ 100 ವರ್ಷಕ್ಕೂ ಹಳೆಯದಾದ ಬೃಹತ್ ಮರ ಬಿದ್ದು ದರ್ಗಾ ಹಾಗೂ ಅಕ್ಕಪಕ್ಕದ ಮನೆಗಳು, ವಾಹನಗಳಿಗೆ ಹಾನಿಯನ್ನುಂಟು ಮಾಡಿದೆ. ಸಿದ್ದೇಶ್ವರ ಪಾರ್ಕಿನ ಭಾರತಿ ಕಾಲನಿಯಲ್ಲಿ ವಿದ್ಯಾತ್ ಕಂಬದ ಮೇಲೆ ಮರಬಿದ್ದು ಅಪಾರ ಹಾನಿಯಾಗಿದೆ. ಆನಂದ ನಗರದ ಸಂಗಮ ಕಾಲನಿಯ ಮುಖ್ಯರಸ್ತೆಯ ಮೇಲೆ ಬೃಹತ್ ಮರಬಿದ್ದು ಸಂಚಾರಕ್ಕೆ ತೊಂದರೆಯಾಯಿತು. ಜತೆಗೆ ಮಂಜುನಾಥ ನಗರ, ಸನ್ಮಾನ ಕಾಲನಿ, ಪ್ರಿಯದರ್ಶಿನಿ ಕಾಲನಿ, ಸುರಭಿ ನಗರ, ನವನಗರ, ಅಧ್ಯಾಪಕ ನಗರ, ಶಿರೂರ ಪಾರ್ಕ, ಕಾಳಿದಾಸ ನಗರ, ಭಾಗ್ಯಲಕ್ಷ್ಮೀ ನಗರ, ಬಾಪೂಜಿ ಕಾಲನಿ, ತಿಮ್ಮಸಾಗರ ರಸ್ತೆ ಸೇರಿದಂತೆ ಹಲವು ಕಡೆ ಮರಗಳು ನೆಲಕ್ಕುರುಳಿರುವುದು ಕಂಡುಬಂದಿತು.ಆನಂದನಗರ ರಸ್ತೆಯ ಗಣೇಶ ನಗರ, ಪಡದಯ್ಯನ ಹಕ್ಕಲ, ದಾಜಿಬಾನ ಪೇಟೆ, ಮಹಾವೀರ ಗಲ್ಲಿ, ಕೋಯಿನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಕಿತ್ತೂರ ಚೆನ್ನಮ್ಮ ವೃತ್ತ, ಹಳೇಹುಬ್ಬಳ್ಳಿ, ಆನಂದನಗರ, ಬಾಣಂತಿ ಕಟ್ಟಿ, ಆರ್.ಎನ್. ಶೆಟ್ಟಿ ರಸ್ತೆ, ನೇಕಾರನಗರ, ಉಣಕಲ್ಲ ಕ್ರಾಸ್, ಶ್ರೀನಗರ ಕ್ರಾಸ್ ಸೇರಿದಂತೆ ಹಲವು ಕಡೆ ಅಪಾರ ಪ್ರಮಾಣದ ನೀರು ನಿಂತಿರುವ ಕುರಿತು ವರದಿಯಾಗಿದೆ. ಇದಲ್ಲದೇ ನಗರದ ಹಲವು ಕಡೆ ಮನೆಗಳಿಗೆ ನೀರು ನುಗ್ಗಿರುವ ಕುರಿತು ಸಹ ವರದಿಯಾಗಿದೆ.
ಇನ್ನು ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲೂ ಅಪಾರ ಪ್ರಮಾಣದ ಮಳೆಯಾಗಿರುವ ಕುರಿತು ವರದಿಯಾಗಿದ್ದು, ಗ್ರಾಮೀಣ ಭಾಗದ ಕೆಲವು ಕಡೆ ಶೆಡ್‌ಗಳ ಮೇಲೆ ಹಾಕಿರುವ ತಗಡುಗಳು ಹಾರಿ ಹೋಗಿರುವ ಕುರಿತು ವರದಿಯಾಗಿವೆ.ಧಾರವಾಡದಲ್ಲಿ ಉತ್ತಮ ಮಳೆ
ಇನ್ನು, ಮಳೆ ಹಾಗೂ ಗಾಳಿಯಿಂದಾಗಿ ನಗರದ ವಿವೇಕಾನಂದ ವೃತ್ತ ಹಾಗೂ ಇತರೆಡೆ ಮರೆಗಳು ಧರೆಗೆ ಉರುಳಿವೆ. ಹಾಗೆಯೇ, ಬಿಆರ್‌ಟಿಎಸ್ ರಸ್ತೆಯಲ್ಲಿ ಎಂದಿನಂತೆ ನಾಲ್ಕೈದು ಅಡಿ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.