ಕಂದಾಯ ಸಚಿವ ಕೃಷ್ಣ ಬೈರೇಗೌಡ
ಕನ್ನಡಪ್ರಭ ವಾರ್ತೆ ಹಾವೇರಿಕಂದಾಯ ದಾಖಲೆಗಳ ಡಿಜಿಟಲೀಕರಣ, ತಾಲೂಕು ಕಚೇರಿಗಳಲ್ಲಿ ಇ ಆಫೀಸ್ ಅನುಷ್ಠಾನ, ತಹಸೀಲ್ದಾರ್ ಹಾಗೂ ಎಸಿ ಕೋರ್ಟ್‌ಗಳಲ್ಲಿನ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ಅಭಿಯಾನ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಜನಪರ ಆಡಳಿತ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿನ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ. ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಐದಾರು ವರ್ಷಗಳಾದರೂ ಇತ್ಯರ್ಥವಾಗದೆ ಬಾಕಿ ಉಳಿದಿದ್ದವು. ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಸುಮಾರು 80 ಸಾವಿರ ಪ್ರಕರಣಗಳು ಬಾಕಿ ಉಳಿದಿದ್ದವು. ಅವುಗಳಲ್ಲಿ 32,787 ಪ್ರಕರಣಗಳು ಐದು ವರ್ಷ ಮೀರಿದ್ದವು. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಾಲ್ಕು ತಿಂಗಳಲ್ಲಿ 20,500 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಉಳಿದ ಪ್ರಕರಣಗಳ ಇತ್ಯರ್ಥಕ್ಕೆ ನ.20ರ ಗಡುವು ನೀಡಲಾಗಿದೆ ಎಂದು ತಿಳಿಸಿದರು.ಅರ್ಜಿ ವಿಲೇವಾರಿ ವಿಳಂಬವಾಗುವುದನ್ನು ತಪ್ಪಿಸಲು ತಾಲೂಕು ಕಚೇರಿಗಳಲ್ಲಿ ಹಂತ–ಹಂತವಾಗಿ ಇ–ಆಫೀಸ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಪಾರದರ್ಶಕ ವ್ಯವಸ್ಥೆಯಲ್ಲಿ ಕಡತಗಳು ಯಾವ ಹಂತದಲ್ಲಿವೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅರ್ಜಿ ವಿಲೇವಾರಿಗೆ ಅನಗತ್ಯ ವಿಳಂಬ ಮಾಡಿದರೆ, ಸಿಸ್ಟಂನಲ್ಲೇ ಸಂಬಂಧಿಸಿದ ಅಧಿಕಾರಿಗೆ ನೋಟಿಸ್ ಜಾರಿಯಾಗಲಿದೆ ಎಂದು ಹೇಳಿದರು.
ಟಪಾಲು ವ್ಯವಸ್ಥೆಯಲ್ಲಿ ಅಧಿಕಾರಿಗಳು ತಮಗೆ ಬೇಕಾದವರ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡುತ್ತಿದ್ದರು. ಕೆಲವು ಅರ್ಜಿಗಳು ಕಚೇರಿಯಿಂದ ಕಚೇರಿಗೆ ಹೋಗಲು, ಪಕ್ಕದ ಟೇಬಲ್‌ಗೆ ಹೋಗಲು ತಿಂಗಳುಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದ್ದವು. ಇದನ್ನು ತಪ್ಪಿಸಲು ಇ–ಆಫೀಸ್ ಅನುಷ್ಠಾನ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದರು.ದಾಖಲೆಗಳ ಡಿಜಿಟಲೀಕರಣ:
ನೂರಾರು ವರ್ಷ ಹಳೆಯ ಕಂದಾಯ ದಾಖಲೆಗಳು ಹಾಳಾಗುವುದು, ಕಳೆದು ಹೋಗುವುದು, ಪೋರ್ಜರಿಯಾಗುವುದನ್ನು ತಪ್ಪಿಸಲು ದಾಖಲೆಗಳನ್ನು ಸ್ಕ್ಯಾನ್ ಮಾಡಿಸಿ, ಗಣಕೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ದಾಖಲೆಗಳು ಶಾಶ್ವತವಾಗಿ ಉಳಿಯಬೇಕು ಮತ್ತು ತಿದ್ದಲು, ಕಳೆದು ಹಾಕಲು ಸಾಧ್ಯವಿಲ್ಲದಂತೆ ನೇರವಾಗಿ ಸಾರ್ವಜನಿಕ ವಲಯಕ್ಕೆ ಡಿಜಿಟಲ್ ಪ್ರತಿಗಳನ್ನು ಬಿಡುತ್ತೇವೆ ಎಂದು ತಿಳಿಸಿದರು.ಗ್ರಾಮ ಲೆಕ್ಕಾಧಿಕಾರಿಗಳು ಜನರಿಗೆ ಸಿಗುತ್ತಿಲ್ಲ ಎಂಬ ಆರೋಪವಿದೆ. ಶಾಸಕರೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಕ್ಕಾಗಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ವಿಎಗಳು ಸಿಗುವಂತೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ದೇಶದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರವನ್ನು ಬರಪರಿಹಾರ ಬಿಡುಗಡೆ ಮಾಡಿ ಎಂದು ಕೇಳುವುದು ನಮ್ಮ ಹಕ್ಕು. ಬಿಜೆಪಿಯ 26 ಸಂಸದರಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ರಾಜ್ಯದ ಜನತೆಗೆ ಪರಿಹಾರ ಕೊಡಿಸುವ ಇಚ್ಛಾಶಕ್ತಿಯಿಲ್ಲ. ಕೇಂದ್ರವನ್ನು ಒತ್ತಾಯಿಸುವ ಧೈರ್ಯ ಇವರಿಗಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ ಅವರು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟಕ್ಕೆ ಸಂಬಂಧಿಸಿದಂತೆ ₹5,300 ಕೋಟಿ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ₹17,700 ಕೋಟಿ ಪರಿಹಾರವನ್ನು ಕೇಳಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.