ಹಳಿಯಾಳ: ಜನತೆ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ, ಪ್ರೀತಿ ಕೊಟ್ಟು ಬೆಳೆಸಿದ್ದಾರೆ. ನನ್ನನ್ನು ಹಾಗೂ ನನ್ನ ಪಕ್ಷವನ್ನು ಬೆಂಬಲಿಸಿ ಮತ ಚಲಾಯಿಸಿದ ಗ್ರಾಮಗಳಲ್ಲಿ ನಾನು ಅತಿ ಹೆಚ್ಚು ಅಭಿವೃದ್ಧಿ ಮಾಡಲಿದ್ದೇನೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.ಮಂಗಳವಾರ ತಾಲೂಕಿನ ಕಾವಲವಾಡ ಜಿಪಂ ಕ್ಷೇತ್ರ ವ್ಯಾಪ್ತಿಯ ವಾಟ್ನಾಳ ಹಾಗೂ ಕಾವಲವಾಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಯಾರು ನನ್ನ ಪರವಾಗಿ, ನನ್ನ ಪಕ್ಷದ ಪರವಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆಯೊ ಅವರ ಕೈಹಿಡಿದು ಬೆಂಬಲಿಸುತ್ತೆನೆ ಎಂದರು.ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಪರಿಣಾಮ ಹಾಗೂ ಮತದಾರರ ಆಶೀರ್ವಾದದ ಬಲದಿಂದ ನಾನು ಒಂಬತ್ತು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಅದಕ್ಕಾಗಿ ಚಿರಋಣಿ ಎಂದರು. ಗ್ರಾಮದ ಜಾತ್ರೆಗೆ, ಗುಡಿ ಕಟ್ಟಲು ಹಾಗೂ ಎಲ್ಲದಕ್ಕೂ ದೇಶಪಾಂಡೆ ಬೇಕು, ಆದರೆ ಮತ ಚಲಾಯಿಸುವಾಗ ದೇಶಪಾಂಡೆ ಬೇಡವೆಂಬ ಮನಸ್ಥಿತಿ ಸರಿಯಲ್ಲ ಎಂದರು. ಶಾಲಾ ಕೊಠಡಿ ಉದ್ಘಾಟನೆ: ವಾಟ್ನಾಳ ಗ್ರಾಮದಲ್ಲಿ 2022- 23ನೇ ಸಾಲಿನ ವಿವೇಕ ಯೋಜನೆಯಡಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಕೊಠಡಿಯನ್ನು ಉದ್ಘಾಟಿಸಿದ ದೇಶಪಾಂಡೆಯವರು, ಸೇನೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ಮರಳಿರುವ ನಿವೃತ್ತ ಸುಬೇದಾರ ಬಾಬಾಸಾಬ ಇಬ್ರಾಹಿಂಸಾನ ಗಡಾದ ಅವರನ್ನು ಸನ್ಮಾನಿಸಿದರು.
ಉದ್ಘಾಟನೆ: ಕಾವಲವಾಡ ಗ್ರಾಮದಲ್ಲಿ ಸುರಿಯುವ ಮಳೆಯಲ್ಲಿಯೇ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಯಲ್ಲಿ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶಾಲಾ ಕೊಠಡಿಯನ್ನು ಉದ್ಘಾಟಿಸಿದರು. ಕಾವಲವಾಡ ಕ್ರಾಸದಿಂದ ಜನಗಾ ಕ್ರಾಸ್‌ವರೆಗೆ ರಸ್ತೆ ಡಾಂಬರೀಕರಣಕ್ಕೆ ₹10 ಕೋಟಿ ಮಂಜೂರು ಮಾಡಿರುವುದಾಗಿ ದೇಶಪಾಂಡೆ ತಿಳಿಸಿದರು. ಬಿಇಒ ಪ್ರಮೋದ ಮಹಾಲೆ ಮಾತನಾಡಿದರು. ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಮುಖಂಡರಾದ ಅಜರ್ ಬಸರಿಕಟ್ಟಿ, ರವಿ ತೋರಣಗಟ್ಟಿ, ಫಯಾಜ್ ಶೇಖ್, ರಾಮಕೃಷ್ಣ ಗುನಗಾ, ಸಂಜು ಮಿಶಾಳೆ, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ಪ್ರಭಾರೆ ಇಒ ಸತೀಶ್ ಆರ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ಕುಮಾರ ಇದ್ದರು.