ಸರ್ಕಾರಿ ಇಲಾಖೆಗಳನ್ನು ಒಗ್ಗೂಡಿಸಿ ಜನ ಸಂಪರ್ಕ ಸಭೆ: ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ವಿಕ್ರಂ ಅಮಟೆ

KannadaprabhaNewsNetwork |  
Published : Jul 01, 2024, 01:45 AM IST
ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್ ಭಪನದಲ್ಲಿ ನಡೆದ ತಾಲೂಕು ಮಟ್ಟದ ದಲಿತ ಕುಂದು, ಕೊರತೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಂ ಅಮಟೆ, ತಹಶೀಲ್ದಾರ್ ತನುಜ ಟಿ.ಸವದತ್ತಿ ಮತ್ತಿತರರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಮುಂದಿನ ದಿನಗಳಲ್ಲಿ ಎನ್‌.ಆರ್‌.ಪುರ ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಜನ ಸಂಪರ್ಕ ಸಭೆ ನಡೆಸುತ್ತೇನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಭರವಸೆ ನೀಡಿದರು.

ಅಂಬೇಡ್ಕರ್‌ ಭವನದಲ್ಲಿ ತಾಲೂಕು ಮಟ್ಟದ ದಲಿತರ ಕುಂದು ಕೊರತೆ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮುಂದಿನ ದಿನಗಳಲ್ಲಿ ಎನ್‌.ಆರ್‌.ಪುರ ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಜನ ಸಂಪರ್ಕ ಸಭೆ ನಡೆಸುತ್ತೇನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಭರವಸೆ ನೀಡಿದರು.

ಭಾನುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಮಟ್ಟದ ದಲಿತರ ಕುಂದು ಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೊಲೀಸ್‌ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಇರುವ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಮಸ್ಯೆಗಳನ್ನು ಆಯಾ ಇಲಾಖೆ ಮುಖ್ಯಸ್ಥರಿಗೆ ಕಳುಹಿಸಿ ಬಗೆಹರಿಸಲು ಮನವಿ ಮಾಡುತ್ತೇನೆ. ಚಿಕ್ಕಮಗಳೂರಿನಲ್ಲೂ ದಲಿತರ ಕುಂದು ಕೊರತೆ ಸಭೆ ನಡೆಸಲಾಗಿದ್ದು ನಿಮ್ಮ ತಾಲೂಕಿನ ಮುಖಂಡರು ಸಹ ಭಾಗವಹಿಸಿದ್ದಾರೆ ಎಂದರು.

ನಿಮ್ಮ ತಾಲೂಕಿಗೆ ಬಂದು ನಿಮ್ಮೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ. ದಲಿತ ಕೇರಿಗಳಲ್ಲೂ ಸಭೆ ನಡೆಸಿ ಎಂಬ ಸಲಹೆ ಬಂದಿದ್ದು ಮುಂದೆ ದಲಿತ ಕೇರಿಗಳಲ್ಲೂ ಸಭೆ ನಡೆಸುತ್ತೇನೆ ಎಂಬ ಭರವಸೆ ನೀಡಿದರು.

ಕೆಲವು ಮುಖಂಡರು ಸರ್ಕಾರಿ ಶಾಲೆಗಳಲ್ಲಿ ಫೀಸು ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ಕೆಲವು ಗ್ರಾಮಗಳಲ್ಲಿ ದಲಿತರಿಗೆ ನಲ್ಲಿ ನೀರು ಕೊಡುತ್ತಿಲ್ಲ. ಹಕ್ಕುಪತ್ರ ಸಿಕ್ಕಿಲ್ಲ. ಸ್ಮಶಾನ ಭೂಮಿ ಮಂಜೂರಾಗಿಲ್ಲ ಎಂಬ ದೂರುಗಳು ಬಂದಿದ್ದು ಈ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜತೆ ಚರ್ಚಿಸುತ್ತೇನೆ ಎಂದರು.

ಸಭೆಯಲ್ಲಿ ತಹಸೀಲ್ದಾರ್‌ ತನುಜ ಸವದತ್ತಿ, ಸರ್ಕಲ್‌ ಇನ್ಸಪೆಕ್ಟರ್‌ ಗುರುದತ್‌ ಕಾಮತ್, ಠಾಣಾಧಿಕಾರಿ ನಿರಂಜನ ಗೌಡ, ಬಾಳೆಹೊನ್ನೂರು ಪೊಲೀಸ್ ಠಾಣಾಧಿಕಾರಿ ರವಿ ಇದ್ದರು.

-- ಬಾಕ್ಸ್‌ --

ಮುಖಂಡರಿಂದ ಸಮಸ್ಯೆಗಳ ಮಾಹಿತಿ:

ದಲಿತ ಮುಖಂಡರು ಅನೇಕ ಸಭೆಗಳಲ್ಲಿ ಸಮಸ್ಯೆ ತಿಳಿಸಿದರೂ ಈವರೆಗೂ ಬಗೆಹರಿದಿಲ್ಲ. ಇದಕ್ಕೆ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯ ಕಾರಣ. ಎಸ್ಸಿ,ಎಸ್ಟಿ ಯವರಿಗೆ ಸರ್ಕಾರದ ಸೌಲಭ್ಯ ತಲುಪುತ್ತಿಲ್ಲ. ಮದ್ಯವರ್ತಿಗಳ ಕಾಟ ಹೆಚ್ಚಿದೆ. ಆದರೆ, ಪ್ರಸ್ತುತ ದಲಿತರ ಮೇಲೆ ದೌರ್ಜನ್ಯ ಕಡಿಮೆಯಾಗಿದೆ. ದಲಿತ ಯುವಕರು ವೈಚಾರಿಕತೆ ಬೆಳೆಸಿ ಕೊಂಡಿದ್ದಾರೆ ಎಂದು ಡಿಎಸ್‌ಎಸ್‌ ಮುಖಂಡ ಎಚ್‌.ಎಂ.ಶಿವಣ್ಣ ಹೇಳಿದರು.

ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಡಿ.ರಾಮು ಮಾತನಾಡಿ, ಸೂಸಲವಾನಿ ಗ್ರಾಮದಲ್ಲಿ ಎಸ್ಸಿಯವರು ನೂರಾರು ವರ್ಷ ಗಳಿಂದ ವಾಸವಾಗಿದ್ದಾರೆ. ಅವರಿಗೆ ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. 1993ರಲ್ಲಿ ಆದಿ ಕರ್ನಾಟಕ ಜಾತಿಯನ್ನು ಪುಲಿಯನ್‌ ಜಾತಿ ಎಂದು ತಪ್ಪಾಗಿ ನಮೂದಿಸಿದ್ದು ಇದರಿಂದ 2013ರ ನಂತರ ಸರ್ಕಾರ ಇವರ ಜಾತಿ ಪ್ರಮಾಣ ಪತ್ರ ನವೀಕರಿಸದೆ ಕಡೆಗಣಿಸಲಾಗಿದೆ. ಇದನ್ನು ಸರಿಪಡಿಸಬೇಕು ಎಂದರು. ಅರಳಿಕೊಪ್ಪ ಗ್ರಾಮದ ಬಸವನಗದ್ದೆ ಯಲ್ಲಿ ಅಂಬೇಡ್ಕರ್‌ ಭವನಕ್ಕೆ 1 ಎಕರೆ ಜಾಗ, 50 ಲಕ್ಷ ಮಂಜೂರಾಗಿದೆ. ಇದರಲ್ಲಿ ತಳಪಾಯ ಮಾತ್ರ ಆಗಿದೆ. ಉಳಿದ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಹಣ ಬಿಡುಗಡೆ ಮಾಡಿಸುವಂತೆ ಹೇಳಿದರು.

ಡಿಎಸ್‌ಎಸ್‌ ಜಿಲ್ಲಾ ಕಾರ್ಯದರ್ಶಿ ಎಸ್‌.ಮಂಜುನಾಥ್‌ ಮಾತನಾಡಿ, ದಲಿತರ ಮನೆಗಳಿಗೆ ಕುಡಿವ ನೀರಿನ ಪೈಪ್‌ , ನಲ್ಲಿ ಹಾಕಿಸಬೇಕು ಎಂಬ ನಿಯಮವಿದ್ದರೂ ಕೆಲವು ಗ್ರಾಪಂಗಳಲ್ಲಿ ಈ ನಿಯಮ ಪಾಲಿಸಿಲ್ಲ. ತಾಲೂಕಿನ ಕೆಲವು ಗ್ರಾಮಗಳಲ್ಲಿ 1930ರ ದಾಖಲೆ ಇಟ್ಟುಕೊಂಡು ಎಲ್ಲಾ ಪಹಣಿಯಲ್ಲಿ ಅರಣ್ಯ ಎಂದು ನಮೂದಿಸಲಾಗಿದೆ. ಹಕ್ಕು ಪತ್ರ ಸಿಕ್ಕುತ್ತಿಲ್ಲ. ಆದ್ದರಿಂದ ಇದನ್ನು ಸರಿಪಡಿಸಿ ನಮಗೆ ಫಾರಂ ನಂ 53,54 ,94 ಸಿ,94 ಸಿಸಿ ಯ ಸರ್ಕಾರಿ ಆದೇಶದ ಪತ್ರ ನೀಡಿ ಎಂದು ಒತ್ತಾಯಿಸಿದರು.

ತಾಲೂಕು ಡಿಎಸ್‌ಎಸ್‌ ಮುಖಂಡ ಡಿ.ರಾಮು, ಮಹಿಳಾ ಸಂಚಾಲಕಿ ಪವಿತ್ರ, ಎಸ್‌.ಮಂಜು,ಎಚ್‌.ಎಂ.ಶಿವಣ್ಣ ಮತ್ತಿತರರು ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಫೀಸು ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಡಿಎಸ್‌ಎಸ್‌ ಮುಖಂಡ ಶೆಟ್ಟಿಕೊಪ್ಪ ಮಹೇಶ್ ಮಾತನಾಡಿ, ಕಳೆದ 15 ವರ್ಷದಲ್ಲಿ ತಾಲೂಕಿನಲ್ಲಿ ದಲಿತರಿಗೆ ಹಕ್ಕು ಪತ್ರ ನೀಡಿಲ್ಲ, ಹಣ ಕೊಟ್ಟವರಿಗೆ ನೀಡುತ್ತಾರೆ ಎಂದು ಆರೋಪಿಸಿದರು. ಪಟ್ಟಣದ ಮೇದರ ಬೀದಿಯಲ್ಲಿ ಸ್ಮಶಾನ ಭೂಮಿಗೆ ಹೋರಾಟ ಮಾಡುತ್ತಾ ಬಂದಿದ್ದೇವೆ. ದಾಖಲೆ ಇದೆ. ಆದರೂ ಮಂಜೂರು ಮಾಡಿಲ್ಲ ಎಂದರು.

ಡಿಎಸ್‌ಎಸ್‌ ಮುಖಂಡ ಬೈರಾಪುರ ಚಿತ್ರಪ್ಪ ಯರಬಾಳ್‌ ಮಾತನಾಡಿ, ನನ್ನ ವಿರುದ್ದ ಅರಣ್ಯ ಇಲಾಖೆಯವರು ವೈಯ್ಯಕ್ತಿಕ ಸೇಡಿನಿಂದ ಶಿವಮೊಗ್ಗ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ 2.50 ಎಕ್ರೆ ಗೇರು ತೋಟ ನಾಶ ಮಾಡಿದ್ದಾರೆ. ಜೊತೆಗೆ ಆನೆಗಳ ಕಾಟದಿಂದ ಜಮೀನಿನ ಫಸಲು ಹಾಳಾಗುತ್ತಿದೆ. ನನ್ನ ಜಮೀನಿಗೆ ಅರಣ್ಯ ಭೂಮಿ ಎಂದು ಹಕ್ಕುಪತ್ರ ನೀಡಿಲ್ಲ. ಆದರೆ, ನನ್ನ ಪಕ್ಕದ ರೈತರ ಜಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್‌ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ನಮಗೆ ಹಕ್ಕು ಪತ್ರ ನೀಡಿಲ್ಲ. ಎಸ್‌.ಟಿ ಹಾಗೂ ಎಸ್.ಸಿ ಜನಾಂಗದವರಿಗೆ ಯಾವುದೇ ಸರ್ಕಾರಿ ಇಲಾಖೆ ಸ್ಪಂದಿಸುತ್ತಿಲ್ಲ. ಬನ್ನೂರು ಗ್ರಾಮದಲ್ಲಿ ಗಿರಿಜನರಿಗೆ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಸಿದರು. ವಾಲ್ಮೀಕಿ ಸಂಘದ ತಾಲೂಕು ಕಾರ್ಯದರ್ಶಿ ನಾಗರಾಜ್‌ ಮಾತನಾಡಿ ವಾಲ್ಮೀಕಿ ಸಂಘಕ್ಕೆ ಭವನ ಕಟ್ಟಲು ನಿವೇಶನ ಕೇಳಿ 5 ವರ್ಷವಾದರೂ ಇನ್ನೂ ನಿವೇಶನ ನೀಡಿಲ್ಲ. ಕರ್ಕೇಶ್ವರ ಗ್ರಾಮ ಪಂಚಾಯಿತಿಯಲ್ಲಿ ದಲಿತ ಮಹಿಳೆಯೊಬ್ಬರ ಮನೆ ಕುಸಿತ ಕಂಡಿದೆ. ಮನೆ ಕಟ್ಟಲು ಸರ್ಕಾರ 1.20 ಲಕ್ಷ ನೀಡಿದೆ. ಆದರೆ ಮನೆ ಕಟ್ಟಲು ಆ ಹಣ ಸಾಕಾಗುವುದಿಲ್ಲ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ