ನ್ಯಾಮತಿ: ಕೇಂದ್ರ ಸರ್ಕಾರ ಅನುದಾನ ನೀಡಿಕೆಯಲ್ಲಿ ಹೆಚ್ಚಳ ಮಾಡಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರದ ಮೇಲೆ ಹೊರೆ ಹೇರಲಾಗಿದೆ. ಕೇಂದ್ರ ಸರ್ಕಾರ ಅನುದಾನವನ್ನು ಹೆಚ್ಚಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ, ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸಾರ್ವಜನಿಕರು ದೇಗುಲಗಳ ನಿರ್ಮಾಣಕ್ಕೆ, ಜೀರ್ಣೋದ್ಧಾರಕ್ಕೆ ಎಂದು ಹಣ, ಅನುದಾನವನ್ನು ಕೇಳುವ ಬದಲು ಶಾಲಾ- ಕಾಲೇಜುಗಳ ಶೌಚಾಲಯ, ಸಾರ್ವಜನಿಕ ಗ್ರಂಥಾಲಯ ಕಟ್ಟಡಗಳ ನಿರ್ಮಾಣ, ಅಭಿವೃದ್ಧಿಗೆ ಕೇಳಿ ಬಳಸಿಕೊಳ್ಳಬೇಕು. ಇದರಿಂದ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದು ಸಲಹೆ ನೀಡಿದರು.ಯಾವುದೇ ಕೆಲಸ, ಕಾರ್ಯಗಳನ್ನು ಅಭಿವೃದ್ಧಿಪಡಿಸಬೇಕೆಂದರೆ ಜನರ ಸಹಕಾರ ಬಹಳ ಮಹತ್ವವಾಗಿರುತ್ತದೆ. ಅಂತಹ ಸಹಕಾರದಿಂದ ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡವು ನಿರ್ಮಾಣವಾಗಿದೆ. ಇದಕ್ಕೆ ₹15 ಲಕ್ಷಗಳ ಅನುದಾನವನ್ನು ನೀಡಲಾಗಿದೆ ಎಂದರು.
ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಜನವರಿ ತಿಂಗಳಿಗೆ ಅಂತ್ಯವಾಗಲಿದೆ. ಆದರೆ ಪಂಚಾಯಿತಿ ಚುನಾವಣೆಗಳ ನಡೆಸುವ ಬಗ್ಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಟೀಕಿಸಿದರು.ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಗುರುತಿಸಲಾಗಿದೆ. ಒಂದು ತಿಂಗಳಿನಲ್ಲಿ ಮಂಜೂರು ಮಾಡಲಾಗುವುದು. ಸದ್ಯಕ್ಕೆ ಕಾನೂನು ಪ್ರಕಾರ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸಲು ಬರುವುದಿಲ್ಲ ಎಂದು ಹೇಳಿದರು.
ಚಟ್ನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ರಂಗಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡೇರಿ ವಿಶ್ವನಾಥ್, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಗ್ರಾಪಂ ಮಾಜಿ ಅಧ್ಯಕ್ಷ ಚನ್ನಪ್ಪ, ಗ್ರಾಪಂ ಉಪಾಧ್ಯಕ್ಷ ನವೀನ್ ಎಂ.ಎಸ್., ಸದಸ್ಯ ಮಲ್ಲೇಶಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ನೇತ್ರಾವತಿ ಹೆಗ್ಗಪ್ಪ, ಶೃತಿ ರವಿಕುಮಾರ್, ವೀರೇಶ್, ನೀಲಾಬಾಯಿ ತತ್ಯಾನಾಯ್ಕ, ಶಾಂತಿ ಬಾಯಿ, ಉಮೇಶ್ ನಾಯ್ಕ, ಮಂಜಪ್ಪ, ರೇಖಾನಾಯ್ಕ, ತಾಪಂ ಇಒ ರಾಘವೇಂದ್ರ, ವಿಜಯಕುಮಾರ್, ಗ್ರಾಮಸ್ಥರು ಇದ್ದರು.
ಮಹಿಳೆಯರು ತಯಾರಿಸಿದ ದಿನನಿತ್ಯ ಬಳಕೆ ವಸ್ತುಗಳು, ಸಾಂಪ್ರದಾಯಿಕ ಆಹಾರ ಉತ್ಪನ್ನಗಳು, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಹಲವು ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನವನ್ನು ಸಂಸದೆ, ಶಾಸಕರು ಸೇರಿದಂತೆ ಗಣ್ಯರು, ಗ್ರಾಮಸ್ಥರು ವೀಕ್ಷಿಸಿದರು.