ಡೆಂಘೀ ತಡೆಗೆ ಜನರ ಸಹಕಾರ ಮುಖ್ಯ: ಡಿಸಿ ಡಾ. ವಿಜಯಮಹಾಂತೇಶ

KannadaprabhaNewsNetwork | Published : May 17, 2025 1:19 AM

ಡೆಂಘೀ ರೋಗಕ್ಕೆ ನಿಗದಿತ ಚಿಕಿತ್ಸೆ ಇಲ್ಲ. ಜ್ವರ ಕಾಣಿಸಿಕೊಂಡ ತಕ್ಷಣ ನಿರ್ಲಕ್ಷ್ಯ ಮಾಡದೇ ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದಲ್ಲಿ ಬೇಗ ಗುಣಮುಖರಾಗಬಹುದು ಹಾಗೂ ಸಾವು- ನೋವುಗಳನ್ನು ತಪ್ಪಿಸಬಹುದು.

ಹಾವೇರಿ: ಡೆಂಘೀ ಈಡಿಸ್ ಇಜಿಪ್ಟ್ ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆಯಾಗಿದ್ದು, ಡೆಂಘೀ ತಡೆಗೆ ಆರೋಗ್ಯ ಇಲಾಖೆ ಜತೆಗೆ ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರ ಕಚೇರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೀ ದಿನ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ಆಯೋಜಿಸಿದ್ದ ಕೀಟಜನ್ಯ ರೋಗಗಳ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಡೆಂಘೀ ರೋಗಕ್ಕೆ ನಿಗದಿತ ಚಿಕಿತ್ಸೆ ಇಲ್ಲ. ಜ್ವರ ಕಾಣಿಸಿಕೊಂಡ ತಕ್ಷಣ ನಿರ್ಲಕ್ಷ್ಯ ಮಾಡದೇ ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದಲ್ಲಿ ಬೇಗ ಗುಣಮುಖರಾಗಬಹುದು ಹಾಗೂ ಸಾವು- ನೋವುಗಳನ್ನು ತಪ್ಪಿಸಬಹುದು. ಡೆಂಘೀ ನಿಯಂತ್ರಣಕ್ಕೆ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಮಾತನಾಡಿ, ಡೆಂಘೀ ಮಾರಣಾಂತಿಕ ಕಾಯಿಲೆ ಅಲ್ಲ, ಆದರೆ ನಿರ್ಲಕ್ಷ್ಯ ಮಾಡಿದರೆ ಮರಣ ಸಾಧ್ಯತೆ ಇರುತ್ತದೆ. ಹಾಗಾಗಿ 24 ಗಂಟೆಯೊಳಗೆ ಜ್ವರ ಕಡಿಮೆಯಾಗದಿದ್ದರೆ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕು. ಡೆಂಘೀ ಪರೀಕ್ಷೆಗೆ ಎಲ್ಲ ಆಸ್ಪತ್ರೆಗಳಲ್ಲಿ ರ‍್ಯಾಪಿಟ್ ಕಿಟ್ ವ್ಯವಸ್ಥೆ ಮಾಡಲಾಗಿದೆ. ಮೂರಕ್ಕಿಂತ ಅಧಿಕ ಡೆಂಘೀ ಪ್ರಕರಣಗಳು ಕಂಡುಬಂದ ಪ್ರದೇಶದಲ್ಲಿ ಫಿವರ್ ಕ್ಲಿನಿಕ್ ಆರಂಭಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸರಿತಾ ಮಾತನಾಡಿ, ಕಳೆದ ಜನವರಿಯಲ್ಲಿ ಡೆಂಘೀ ನಿಯಂತ್ರಣ ಕುರಿತು ಜಿಲ್ಲೆಯ 345 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಕಳೆದ ಸಾಲಿನ ಏಪ್ರಿಲ್‌ನಲ್ಲಿ 64 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು. ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ 20 ಪ್ರಕರಣಗಳು ಪತ್ತೆಯಾಗಿದೆ. ಜ್ವರ ಬಂದರೆ ಉದಾಸೀನ ಮಾಡದೇ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಡಾ. ನಿಲೇಶ, ಡಾ. ಚನ್ನಬಸಯ್ಯ ವಿರಕ್ತಮಠ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಸುರೇಶ ಇತರರು ಇದ್ದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಚನ್ನಪ್ಪ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ಖುಷ ಅವರು ನಿರೂಪಿಸಿ, ವಂದಿಸಿದರು.ಸಮನ್ವಯದಿಂದ ಕೆಲಸ ಮಾಡಿ..ಕಳೆದ ವರ್ಷ ರಾಜ್ಯದಲ್ಲಿ 33 ಸಾವಿರ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, 18 ಮರಣಗಳು ಸಂಭವಿಸಿದೆ. ಜಿಲ್ಲೆಯಲ್ಲಿ 800 ಪ್ರಕರಣಗಳಲ್ಲಿ ಎರಡು ಮರಣ ಸಂಭವಿಸಿದ ವರದಿಯಾಗಿದೆ. ಕಳೆದ ಸಾಲಿನ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿದ್ದವು. ಆಗಸ್ಟ್‌ನಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರು ಸೇರಿದಂತೆ ಎಲ್ಲರೂ ಯುದ್ಧೋಪಾದಿಯಲ್ಲಿ ಉತ್ತಮ ಕೆಲಸ ಮಾಡಿದ್ದೀರಿ. ಅದೇ ರೀತಿ ವರ್ಷ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ, ಜವಾಬ್ದಾರಿ ಹಾಗೂ ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.