ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ದೇಶದಲ್ಲಿ ಬಾಲ್ಯ ವಿವಾಹ ಒಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರೂ ಮುಂದಾಗಬೇಕು. ಆಗ ಮಾತ್ರ ಈ ಪಿಡುಗನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಮುನಿರಾಜು ಅಭಿಪ್ರಾಯಪಟ್ಟರು.ಅವರು ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ಸಿಡಿಪಿಒ ಇಲಾಖೆ ಹಾಗೂ ಶಿಕ್ಷಣ ಇಲಾಖೆವತಿಯಿಂದ ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆಗಳ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಗ್ರಾಮೀಣ ಭಾಗದಲ್ಲೇ ಹೆಚ್ಚು
ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ಯಾವುದೇ ಹೆಣ್ಣು ಮಗು ೧೫ ದಿನಗಳಿಂದ ಶಾಲೆಗೆ ಗೈರಾದರೆ ಅವರ ಬಗ್ಗೆ ಮಾಹಿತಿ ಕಲೆ ಹಾಕಿದರೆ ಸತ್ಯಾಂಶ ಬಯಳಿಗೆ ಬರುವುದು ಎಂದು ಸಲಹೆ ನೀಡಿದರು.ಹಲವು ಕಠಿಣ ಕಾನೂನು ಜಾರಿಯಲ್ಲಿದ್ದರೂ ಸಹ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದೆ,ಗ್ರಾಮೀಣ ಭಾಗದಲ್ಲಿ ಕಾನೂನು ಅರಿವು ಬಗ್ಗೆ ಮಾಹಿತಿ ಕೊರತೆಯಿಂದ ಅಪರಾಧಗಳು ನಡೆಯುತ್ತಿದೆ, ಆದ್ದರಿಂದ ಗ್ರಾಮಗಳಲ್ಲಿ ಶಿಬಿರಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ದೂರು ನೀಡಲು ಹಿಂಜರಿಕೆ ಬೇಡವಕೀಲರ ಸಂಘದ ಉಪಾಧ್ಯಕ್ಷ ಆನಂದ್ ಮಾತನಾಡಿ ಇಂದಿನ ಆಧುನಿಕ ಜಗದಲ್ಲಿ ಅದರಲ್ಲಿಯೂ ಹೆಣ್ಣಿನ ಮೇಲೆ ಯಾವುದೇ ರೀತಿ ಲೈಂಗಿಕ ಕಿರುಕುಳ ದೌರ್ಜನ್ಯ ನಡೆದರೆ ಶಿಕ್ಷಿಸುವ ಕಠಿಣ ಕಾನೂನಿದ್ದರೂ ಕೆಲವರು ದೂರು ನೀಡಲು ಹಿಂಜರಿಯುತ್ತಾರೆ. ಇದರಿಂದ ಮತ್ತಷ್ಟು ಅಪರಾಧಗಳನ್ನು ನಡೆಯಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.
ಈ ವೇಳೆ ವಕೀಲರ ಸಂಘದ ಮಾಜಿ ಅಧ್ಯಕ್ಷ ರಮೇಶ್, ಸಂತೋಷ್, ವಕೀಲರಾದ ಗೀತಾ, ಸವಿತ, ಪುರುಶೋತ್ತಮ್,ಶಿಕ್ಷಣ ಇಲಾಖೆ ಸಂಯೋಜಕ ವಾಜಿದ್, ಶಿಕ್ಷಕರಾದ ಅಶೋಕ್, ಶ್ರೀನಾಥ್, ಸೀತಾರಾಮ್, ರುದ್ರೇಗೌಡ, ಶಾಂತಕುಮಾರಿ, ಸೌಮ್ಯ ಇದ್ದರು.