ಅಪರಾಧಗಳ ತಡೆಗೆ ಪೊಲೀಸರೊಂದಿಗೆ ಜನರ ಸಹಕಾರ ಮುಖ್ಯ; ಡಿವೈಎಸ್ಪಿ ಕೃಷ್ಣಪ್ಪ

KannadaprabhaNewsNetwork |  
Published : Jan 04, 2025, 12:30 AM IST
1ಕೆಎಂಎನ್ ಡಿ16 | Kannada Prabha

ಸಾರಾಂಶ

ಅಪರಾದ ಕೃತ್ಯಗಳು ನಡೆಯದಂತೆ ಪೊಲೀಸರ ಜೊತೆ ಸಾರ್ವಜನಿಕರು ಕೈಗೂಡಿಸಿದರೆ ಮಾತ್ರ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದು.ಸಾರ್ವಜನಿಕರು ಸಾಧ್ಯವಾದ ಮಟ್ಟಿಗೆ ಹೆಚ್ಚಿನ ಆಭರಣ ಮತ್ತು ನಗದನ್ನು ಮನೆಯಲ್ಲಿ ಇಡದೇ ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಅಪರಾಧಗಳ ತಡೆಗೆ ಪೊಲೀಸರ ಜೊತೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಮಳವಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಸಮೀಪದ ಕಾಡುಕೊತ್ತನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಬೀಟ್ ಪೊಲೀಸ್ ಸಿಬ್ಬಂದಿಯಿಂದ ಅಪರಾಧ ತಡೆ ಮಾಸಾಚಾರಣೆ ಅಂಗವಾಗಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅಪರಾಧ ಪ್ರಕರಣಗಳ ಕಡಿವಾಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಪರಾಧಗಳು ನಡೆದಾಗ ತನಿಖೆ ನಡೆಸುವುದಕ್ಕಿಂತ ಅಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ. ಯಾವುದೇ ಅಪರಾಧ ಕಂಡಾಗ ಯಾರೇ ಆದರೂ ಧೈರ್ಯವಾಗಿ ಸಾಕ್ಷಿ ಹೇಳಬೇಕು. ಇಲ್ಲದಿದ್ದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದರು.

ಅಪರಾದ ಕೃತ್ಯಗಳು ನಡೆಯದಂತೆ ಪೊಲೀಸರ ಜೊತೆ ಸಾರ್ವಜನಿಕರು ಕೈಗೂಡಿಸಿದರೆ ಮಾತ್ರ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದು.ಸಾರ್ವಜನಿಕರು ಸಾಧ್ಯವಾದ ಮಟ್ಟಿಗೆ ಹೆಚ್ಚಿನ ಆಭರಣ ಮತ್ತು ನಗದನ್ನು ಮನೆಯಲ್ಲಿ ಇಡದೇ ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡಬೇಕು ಎಂದು ಸಲಹೆ ನೀಡಿದರು. ಚಿನ್ನಾಭರಣ ಧರಿಸಿ ಒಂಟಿಯಾಗಿ ಮಹಿಳೆಯರು ಓಡಾಡಬಾರದು, ಆಟೋರಿಕ್ಷಾ ಅಥವಾ ಟ್ಯಾಕ್ಷಿಯಲ್ಲಿ ತೆರಳುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕು. ನಿರ್ಜನ ರಸ್ತೆಯಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿದ್ದರೆ ಜಾಗರೂಕರಾಗಿ, ಸಮಸ್ಯೆ ಎದುರಾದಾಗ ವಾಹನದ ನೋಂದಣಿ ಸಂಖ್ಯೆ ಬರೆದುಕೊಂಡು ಕೂಡಲೇ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು.

ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್ ಮಾತನಾಡಿ, ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿ, ನಾಲ್ಕು ಚಕ್ರ ವಾಹನಗಳ ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಂಡು ಸಂಚಾರಿ ನಿಯಮ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಯುವಂತೆ ಕೋರಿದರು.

ದೂರವಾಣಿ ಅಥವಾ ಇ- ಮೇಲ್ ಮೂಲಕ ಯಾರಾದರೂ ತಾವು ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿ ನಿಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಪಿನ್ ನಂಬರ್, ಕಾರ್ಡ್ ನಂಬರ್ ಕೇಳಿದರೆ ಯಾರಿಗೂ ತಿಳಿಸಬಾರದು. ಸುರಕ್ಷತಾ ದೃಷ್ಟಿಯಿಂದ ಪೇಸ್‌ಬುಕ್ ಮತ್ತು ಇ- ಮೇಲ್ ಪಾಸ್‌ವರ್ಡ್‌ಗಳನ್ನು ಆಗಿದಾಂಗ್ಗೆ ಬದಲಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ವಕೀಲ ಶ್ರೀಕಂಠಸ್ವಾಮಿ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷಿತಾ, ಗ್ರಾಪಂ ಪಿಡಿಒ ಅಶ್ವಿನಿ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಪ್ರಸನ್ನ, ಬೀಟ್ ಪೊಲೀಸ್ ಸಿಬ್ಬಂದಿ ಆರ್. ಪ್ರಭುಸ್ವಾಮಿ, ವಿ.ಸುಬ್ರಮಣ್ಯ, ಗುತ್ತಿಗೆದಾರ ಕೆ.ಸಿ. ಮಹದೇವು, ಕೆ.ಕೆ. ಹಳ್ಳಿ ನಂದೀಶ್, ಚಿಂದಬರ ಮೂರ್ತಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ