ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀ ಕಾಲೇಜು ಗೇಟ್ ಸಮೀಪದ ಮೈದಾನದಲ್ಲಿ ಶನಿವಾರ ಸಿಪಿಐ (ಎಂ)ಯಿಂದ ಮಂಡ್ಯ ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕೇರಳ ರಾಜ್ಯದಲ್ಲಿ ಎಡಪಕ್ಷಗಳು ನಡೆಸುತ್ತಿರುವ ಅಧಿಕಾರದಿಂದ ರೈತರು, ಕಾರ್ಮಿಕರು, ಬಡವರು ಎಲ್ಲಾ ವಿಭಾಗ ಜನರಿಗೆ ಆರ್ಥಿಕ ಅಭಿವೃದ್ಧಿ ಸಿಕ್ಕಿದೆ ಎಂದರು.
ಕೇರಳ ರಾಜ್ಯದ ಜನರಿಗೆ ಆರೋಗ್ಯ, ಶಿಕ್ಷಣ, ಎಲ್ಲರಿಗೂ ತಲುಪಿಸಿ, ಕುಟುಂಬ ಸ್ತ್ರೀ ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರದ ಯೋಜನೆಗಳೆಲ್ಲವನ್ನು ಸ್ತ್ರೀಯರೇ ನಡೆಸುತ್ತಿದ್ದಾರೆ. ದೇಶದಲ್ಲೇ ಅಭಿವೃದ್ದಿ ವಿಚಾರದಲ್ಲಿ ಕೇರಳ ನಂಬರ್ 1 ಆಗಿದೆ ಎಂದರು.ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಂಡವಾಳಶಾಯಿ ಪರ ಆರ್ಥಿಕ ನೀತಿ ಜಾರಿ ಮಾಡಿದ್ದರಿಂದ ಇಂದು ಬಡ ಭಾರತವೇ ಕಣ್ಣಿಗೆ ರಾಚುತ್ತಿದೆ. ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ರೈತರಿಗೆ ಅವೈಜ್ಞಾನಿಕ ಬೆಲೆ, ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯಗಳು ಇಂದಿಗೂ ಮುಂದುವರೆಯುತ್ತಿದೆ. ಇದನ್ನು ಬಿಜೆಪಿ ಸರ್ಕಾರ ತೀವ್ರವಾಗಿ ಮುಂದುವರೆಸುತ್ತಿದೆ ಎಂದು ವಿಷಾದಿಸಿದರು.
ಬಡತನಕ್ಕೆ ದೇವರು ಕಾರಣವಲ್ಲ. ಸಮಾಜದಲ್ಲಿನ ವರ್ಗ ವಿಭಜನೇಯೇ ಬಡತನಕ್ಕೆ ಮೂಲ ಕಾರಣ. ಶೋಷಣೆಗೆ ಒಳಗಾಗುವವರೆಲ್ಲ ಬಡವರಾಗಿಯೇ ಉಳಿಯುತ್ತಾರೆ. ಕಾರ್ಲ್ ಮಾರ್ಕ್ಸ್ ಅವರು ಬಡತನಕ್ಕೆ ಶೋಷಣೆ ಮಾಡುವ ವರ್ಗ, ಒಳಗಾಗುವ ವರ್ಗ ಎಂಬ ಎರಡು ವರ್ಗಗಳಿವೆ. ಶೋಷಣೆಗೊಳಗಾಗುವವರು ಎಂದಿಗೂ ಬಡವರಾಗಿಯೇ ಇರುತ್ತಾರೆ ಎಂಬುದನ್ನು ಅರಿವು ಮಾಡಿಕೊಟ್ಟರು.
ಈಗ ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ನಾವಿದ್ದೇವೆ. ದೊಡ್ಡ ಬಂಡವಾಳಶಾಹಿ ವ್ಯವಸ್ಥೆಯು ಇಂದು ಸಾಮ್ರಾಜ್ಯಶಾಹಿ ಶಕ್ತಿಯಾಗಿ ರೂಪುಗೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳ ರೂಪದಲ್ಲಿ ಎಲ್ಲರನ್ನೂ ಶೋಷಿಸಿ ವಂಚಿಸುತ್ತಿವೆ. ಇದರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಿಪಿಐ(ಎಂ) ನೂರಾರು ಕಾರ್ಯಕರ್ತರು , ಮುಖಂಡರು ಮಂಡ್ಯ ರಸ್ತೆ, ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಜಾಥಾ ನಡೆಸಿದರು. ತುಂತುರು ಮಳೆಯಲ್ಲೂ 2 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಸಮಾವೇಶದಲ್ಲಿ ಪಾಲ್ಗೊಂಡರು.