ಜನರ ಜ್ಞಾನವೇ ಜಾನಪದ: ಉಪನ್ಯಾಸಕ ಚಂದ್ರಪ್ಪ ಸೊಬಟಿ

KannadaprabhaNewsNetwork | Published : Mar 29, 2025 12:32 AM

ಸಾರಾಂಶ

ಮನುಷ್ಯ ಸಂಕುಲದಿಂದ ಹಿಡಿದು ಪ್ರಾಣಿ ಪಕ್ಷಿ, ಜಲಚರ ಜೀವಿಗಳಿಗಳಿಗೂ ರಕ್ಷಣೆ ಇಲ್ಲದೇ ಇರುವುದರಿಂದ ನಮ್ಮಲಿನ ಸಂಸ್ಕೃತಿ ನಶಿಸುವ ಹಂತ ತಲುಪಿದ ನಂತರ ಅದರ ರಕ್ಷಣೆಗೆ ಧಾವಿಸುತ್ತಿರುವುದು ಬೇಸರ ಸಂಗತಿಯಾಗಿದೆ.

ಸವಣೂರು: ಭಾರತೀಯ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಇದರ ಅರ್ಥವೆಂದರೆ ಭಾರತದಲ್ಲಿ ಒಂದೊಂದು ಪ್ರಾಂತಕ್ಕೂ ವಿಶಿಷ್ಟ ಜೀವನ ವಿಧಾನವಿದೆ. ಆ ವಿಶಿಷ್ಟ ಸಂಸ್ಕೃತಿಯನ್ನು ಗುರುತಿಸುವುದು, ಪ್ರೀತಿಸುವುದು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆಯೇ ಎಂದು ಜಾನಪದ ವಿಶ್ವವಿದ್ಯಾಲಯದ ಉಪನ್ಯಾಸಕ ಚಂದ್ರಪ್ಪ ಸೊಬಟಿ ತಿಳಿಸಿದರು.ಪಟ್ಟಣದ ಹೊರವಲಯದ ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಧ್ಯೇಯವಾಕ್ಯದೊಂದಿಗೆ ಜರುಗಿದ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮನುಷ್ಯ ಸಂಕುಲದಿಂದ ಹಿಡಿದು ಪ್ರಾಣಿ ಪಕ್ಷಿ, ಜಲಚರ ಜೀವಿಗಳಿಗಳಿಗೂ ರಕ್ಷಣೆ ಇಲ್ಲದೇ ಇರುವುದರಿಂದ ನಮ್ಮಲಿನ ಸಂಸ್ಕೃತಿ ನಶಿಸುವ ಹಂತ ತಲುಪಿದ ನಂತರ ಅದರ ರಕ್ಷಣೆಗೆ ಧಾವಿಸುತ್ತಿರುವುದು ಬೇಸರ ಸಂಗತಿಯಾಗಿದೆ. ಜನರ ಜ್ಞಾನವೇ ಜಾನಪದ. ಜಾನಪದ ಎನ್ನುವಂತದ್ದು ಪ್ರಯೋಗಾಲಯ, ವಸ್ತು ಸಂಗ್ರಹಾಲಯದಲ್ಲಿ ಇಡುವಂಥ, ಸಂಭ್ರಮಿಸುವಂಥ ವಸ್ತುವಲ್ಲ. ಪ್ರಭುತ್ವ ಕೇಂದ್ರಿತವಾದ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆ, ಶೋಷಣೆಯ ಪರಿಕಲ್ಪನೆಯಿಂದ ಮುಕ್ತವಾಗಬೇಕಿದೆ ಎಂದರು.ಉಪನ್ಯಾಸಕ ಕಾಂತೇಶ ರೆಡ್ಡಿ ಮಾತನಾಡಿ, ಸಂಪ್ರದಾಯದ ಅಧ್ಯಯನ ಮತ್ತು ಅದರ ವಿಧಿ ವಿಧಾನಗಳೆ ಜನಪದ. ಜನಪದ ಕಲೆ ಜನರಿಂದ ಬಂದ ವಿಜ್ಞಾನ. ಆದ್ದರಿಂದ ಜನಪದ ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರ ಪ್ರಯತ್ನ ಅವಶ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಎಂ.ಎಚ್. ಹೆಬ್ಬಳ ಮಾತನಾಡಿ, ನಮ್ಮ ಜನಪದ ಕಲೆಯನ್ನು ಪಾಶ್ಚಾತಿಕರಣ, ಬಂಡವಾಳಶಾಹಿ, ಆಧುನಿಕರಣ, ಜಾಗತಿಕರಣದ ಹೇಳಿಕೆಗಳಿಂದ ಜನಪದ ಪದಗಳನ್ನು ಮರೆಯುತ್ತಿದ್ದೇವೆ. ಜಾನಪದ ಎನ್ನುವಂತದ್ದು ಜನರ ಬಾಯಿಂದ ಬಂದಂಥ ಹಲವಾರು ವೈಚಾರಿಕ ವಿಚಾರಗಳು ಜಾನಪದವಾಗಿದೆ ಎಂದರು.ಉಪನ್ಯಾಸಕ ಗಂಗಾನಾಯಕ್ ಎಲ್. ಪ್ರಾಸ್ತಾವಿಕವಾಗಿ, ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಪ್ರವೀಣ ಮಹಾಬಲೇಶ್ವರ ಆನಂದಕಂದ ವಹಿಸಿ ಮಾತನಾಡಿದರು.ಕಾರ್ಯಕ್ರಮವದಲ್ಲಿ ವಿದ್ಯಾರ್ಥಿಗಳು ಸಾಂಪ್ರಾದಾಯಕ ಉಡುಗೆಗಳನ್ನು ಧರಿಸಿದರೆ, ಯುವಕರು ಎತ್ತು ಚಕ್ಕಡಿಯನ್ನು ಅಲಂಕರಿಸಿ ಉತ್ಸವ ರೂಪದಲ್ಲಿ ಕಾಲೇಜು ಆವರಣಕ್ಕೆ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗೋಪೂಜೆ, ರಾಶಿ, ಕುಟ್ಟುವ ಮತ್ತು ಬೀಸುವ ಕಲ್ಲುಗಳ ಪೂಜೆಯನ್ನು ವಿಧಿ ವಿಧಾನಗಳ ಮೂಲಕ ನೆರವೇರಿಸಿದರೆ, ವಿದ್ಯಾರ್ಥಿಗಳು ಜಾನಪದ ನೃತ್ಯ, ಮತ್ತು ಜಾನಪದ ಕಲೆಗಳನ್ನು ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಚಂದ್ರಕಾಂತ ಶಿರಗುಂಪಿ, ವಿಶ್ವನಾಥ ಯತ್ನಳ್ಳಿ, ಪ್ರವೀಣಕುಮಾರ ಎಸ್.ಬಿ., ಪ್ರಿಯದರ್ಶಿನಿ ಪಾಟೀಲ, ರವಿಶಂಕರ, ಮಾಲತೇಶ ಕುತನಿ, ಎಫ್.ಬಿ. ನಾಯ್ಕರ ಇತರರು ಇದ್ದರು. ಕಾರ್ಯಕ್ರಮವನ್ನು ಪ್ರೊ. ದಿವ್ಯಾಶ್ರೀ, ವಿದ್ಯಾರ್ಥಿ ವೈಶಾಲಿ ಮಂತ್ರೋಡಿ ನಿರ್ವಹಿಸಿದರು.

Share this article