ಕನ್ನಡಪ್ರಭ ವಾರ್ತೆ ವಿಜಯಪುರ
ಮನೆಗಳಿಗೆ ನುಗ್ಗಿದ ನೀರು:
ನಿರಂತರವಾಗಿ ರಾತ್ರಿಯಿಡಿ ಸುರಿದ ಮಳೆಗೆ ಮನೆಗಳಲ್ಲಿ ನೀರು ನುಗ್ಗಿದ್ದರಿಂದ, ನೀರು ಹೊರಹಾಕುವಲ್ಲಿ ಜನರು ಹರಸಾಹಸ ಪಡಬೇಕಾಯಿತು. ನಗರದ ಬಿಲಾಲ್ ನಗರ, ಶಾಹಿ ನಗರ, ಬಾಗವಾನ ಕಾಲೋನಿ, ರಹೀಂ ನಗರ, ಮುಜಾವರ್ ಪ್ಲಾಟ, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರ, ಕೆ.ಸಿ.ಮಾರುಕಟ್ಟೆಯ ರಸ್ತೆ ಜಲಾವೃತ, ಬ್ಯಾಂಕರ್ಸ್ ಕಾಲೋನಿಯ ಮನೆಗಳಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಸಂಕಷ್ಟ ಅನುಭವಿಸಬೇಕಾಯಿತು.ರಸ್ತೆಗಳು ಜಲಾವೃತ:
ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನೆಲೆ ರಸ್ತೆಗಳೆಲ್ಲ ಜಲಾವೃತವಾಗಿದ್ದವು. ಹುತಾತ್ಮ ಸರ್ಕಲ್, ನವಭಾಗ ರೋಡ್, ಗೋಳಗುಮ್ಮಟ ಏರಿಯಾ, ರೈಲ್ವೆ ಸ್ಟೇಷನ್ ಏರಿಯಾ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಗಳು ಜಲಾವೃತವಾಗಿದ್ದರಿಂದ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿತ್ತು. ಆಟೋ ಚಾಲಕರು, ಬೈಕ್ ಸವಾರರು, ವಾಹನಗಳೆಲ್ಲವೂ ನೀರು ತುಂಬಿದ ರಸ್ತೆಯಲ್ಲಿಯೇ ಸಂಚರಿಸಿದವು.ಎಲ್ಲೆ ಎಷ್ಟೆಷ್ಟು ಮಳೆ..?:
ವಿಜಯಪುರ ನಗರದಲ್ಲಿ 158.8, ಕೊಟ್ಯಾಳ ಭಾಗದಲ್ಲಿ 139, ವಿಜಯಪುರ ತಾಲೂಕಿನಲ್ಲಿ 112, ಉಕ್ಕಲಿ ಭಾಗದಲ್ಲಿ 112, ತಾಜಪುರ(ಹೆಚ್) ಭಾಗದಲ್ಲಿ 111, ತೊರವಿ ಭಾಗದಲ್ಲಿ 102, ಇಟಗಿ ಭಾಗದಲ್ಲಿ 101, ದಿಂಡವಾರ ಭಾಗದಲ್ಲಿ 100.5, ಸಿದ್ದಾಪುರ(ಕೆ) ಭಾಗದಲ್ಲಿ 93.5, ಕಾಳಗಿ ಭಾಗದಲ್ಲಿ 93.5 ಎಂಎಂ ಮಳೆಯಾಗಿರುವ ಕುರಿತು ವರದಿಯಾಗಿದೆ.ಮಳೆಗೆ ಉಕ್ಕಿದ ಡೋಣಿ ನದಿ
ಈ ಭಾರೀ ಮಳೆಗೆ ಡೋಣಿ ನದಿ ಉಕ್ಕಿ ಹರಿದಿದೆ. ನದಿಯ ನೀರು ಇಕ್ಕೆಲಗಳಲ್ಲಿರುವ ಜಮೀನುಗಳಿಗೂ ನುಗ್ಗಿದ್ದು, ಬೆಳೆಗಳೆಲ್ಲ ಜಲಾವೃತವಾಗಿವೆ. ತೊಗರಿ, ಶೇಂಗಾ, ಸಜ್ಜೆ ಸೇರಿದಂತೆ ಹಲವು ಬೆಳೆಗಳು ನೀರಲ್ಲಿ ಮುಳುಗಿವೆ. ಪ್ರಕೃತಿ ವಿಕೋಪದ ಹಿನ್ನೆಲೆ ಬೆಳೆ ನಾಶವಾಗಿರುವುದರಿಂದ ತಕ್ಷಣ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಸಂತ್ರಸ್ತರರಿಗೆ ಡಿಸಿ ಸಮಾಧಾನ:
ಭಾರಿ ಮಳೆಗೆ ತತ್ತರಿಸಿದ ನಗರದ ಜನತೆ ಮುಜಾವರ ರಸ್ತೆ ತಡೆಗೆ ಮುಂದಾಗಿದ್ದರು. ಈ ವೇಳೆ ಆಗಮಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಜನರ ಬಳಿಗೆ ಆಗಮಿಸಿ ಸಮಸ್ಯೆ ಆಲಿಸಿದರು. ಜಿಲ್ಲಾಧಿಕಾರಿ ಬಳಿ ಜನರು ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ಜನರಿಗೆ ಸಮಾಧಾನ ಮಾಡಿದ ಜಿಲ್ಲಾಧಿಕಾರಿ, ನೀರನ್ನು ತೆರವು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಭರವಸೆ ನೀಡಿದರು.----------
ಕೋಟ್.....ರಾತ್ರಿಯಿಡಿ ನಿರಂತರವಾಗಿ ಮಳೆ ಸುರಿದ ಪರಿಣಾಮ ನಗರದ ಹಲವು ಕಡೆಗಳಲ್ಲಿ ರಸ್ತೆಗಳ ಮೇಲೆ, ಮನೆಗಳಿಗೆ ನೀರು ನುಗ್ಗಿದೆ. ಮಳೆ ಕಡೆಮೆಯಾಗುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲೆಲ್ಲಿ ಸಮಸ್ಯೆ ಆಗಿದೆ ಅಲ್ಲಲ್ಲಿ ತೆರಳಿ ನೀರು ಸರಾಗವಾಗಿ ಸಾಗಲು ವ್ಯವಸ್ಥೆ ಮಾಡಿದ್ದಾರೆ. ನಾನೂ ಸಹ ಸ್ವತಃ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ.
- ಟಿ.ಭೂಬಾಲನ್, ವಿಜಯಪುರ ಡಿಸಿ