ಕನ್ನಡಪ್ರಭ ವಾರ್ತೆ ಚಿಂಚೋಳಿ
ಜುಲೈ ತಿಂಗಳಲ್ಲಿ ದಿನ ಬಿಟ್ಟು ದಿನ ಭಾರಿ ಬಿರುಗಾಳಿ, ಸಿಡಿಲು, ಗುಡುಗು ಮಿಂಚಿನ ಭಾರಿ ಬಿರುಸಿನ ಮಳೆ ಆಗುತ್ತಿರುವುದರಿಂದ ರೈತರು ತಮ್ಮ ಹೊಲಗಳಿಗೆ ಹೋಗದಂತೆ ಆಗಿದೆ ಹೊಲದಲ್ಲಿ ಬೆಳೆದ ಬೆಳೆಗಳಲ್ಲಿ ಹುಲ್ಲು ಕೀಳಲು ಆಗುತ್ತಿಲ್ಲ ಕೀಟ ನಾಶಕ ಸಿಂಪರಣೆ ಆಗುತ್ತಿಲ್ಲ. ಮಳೆಯಿಂದ ಕೃಷಿ ಚಟುವಟಿಕೆಗಳ ಸ್ಥಗಿತಗೊಂಡಿವೆ.
ತಾಲೂಕಿನಲ್ಲಿ ಸತತವಾಗಿ ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಮಳೆ ಆಗುತ್ತಿರುವುದರಿಂದ ಪಟ್ಟಣ ಸೇರಿದಂತೆ ಸುಲೇಪೇಟ, ಚಿಮ್ಮನಚೋಡ, ಕುಂಚಾವರಂ, ಐನಾಪೂರ, ನಿಡಗುಂದಾ, ಕೋಡ್ಲಿ ಕಿರಾಣಿ ವ್ಯಾಪಾರ ವಹಿವಾಟು ಮತ್ತು ಚಹಾ ಅಂಗಡಿ ಪಾನಪುರಿ, ಖಾನಾವಳಿಗಳಲ್ಲಿ ಗಿರಾಕಿಗಳು ತುಂಬಾ ವಿರಳ ಕಂಡು ಬರುತ್ತಿರುವುದರಿಂದ ವ್ಯಾಪಾರ ಮೇಲೆ ಪರಿಣಾಮ ಬೀರಿದೆ.ತಾಲೂಕಿನಲ್ಲಿ ಎಡಬಿಡದೇ ಜಿಟಿಜಿಟಿ ಆಗುತ್ತಿರುವುದರಿಂದ ಸುಲೇಪೇಟ, ಕುಂಚಾವರಂ, ಚಿಂಚೋಳಿ ನಗರ ಪ್ರದೇಶಗಳಿಗೆ ವಿವಿಧ ಗ್ರಾಮಗಳಿಂದ ದಿನನಿತ್ಯ ತರಕಾರಿ ವ್ಯಾಪಾರಿಗಳು ಟೊಮೆಟೋ, ಹಿರೇಕಾಯಿ, ಕುಂಬಳಕಾಯಿ, ಬೀನ್ಸ್, ಚವಳಿಕಾಯಿ, ಅವರೇ ಕಾಯಿ ತರುತ್ತಿದ್ದಾರೆ. ಆದರೆ ಖರೀದಿಸಲು ಜನರು ಬಾರದೇ ಇರುವುದರಿಂದ ತರಕಾರಿ ವ್ಯಾಪಾರಿಗಳು ಮಳೆಯಲ್ಲಿ ಛತ್ರಿ ಹಿಡಿದು ಗಿರಾಕಿಗಾಗಿ ಕಾಯುವಂತಾಗಿದೆ.
ತಾಲೂಕಿನಲ್ಲಿ ಮಳೆ ಸುರಿಯುತ್ತಿರುವದರಿಂದಾಗಿ ಪಟ್ಟಣ ಸೇರಿದಂತೆ ಅನೇಕ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ಹಾಜರಾಗಿ ಬಹಳ ಕಡಿಮೆ ಆಗಿದೆ ಇದರಿಂದಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದರು ಜನಜೀವನ ಅಸ್ತವ್ಯಸ್ತವಾಗಿದೆ.