ಕಮಲನಗರ ತಾಲೂಕಿನ ಚಿಮ್ಮೇಗಾಂವ ಗ್ರಾಮದ ಹನುಮಾನ ಮಂದಿರದಲ್ಲಿ ಹಮ್ಮಿಕೊಂಡಿದ್ದ ನಮ್ಮ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಗ್ರಾಮಸ್ತರಿಂದ ರಸ್ತೆ, ಸ್ವಚ್ಛತೆ, ನೀರಿನ ಸಮಸ್ಯೆಗಳ ದೂರು.ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಹೆಚ್ಚು ಅಧಿಕಾರ ನೀಡಿದ್ದು, ಸಮಸ್ಯೆಗಳನ್ನು ತ್ವರಿತವಾಗಿ ಪಿಡಿಒಗಳು ಬಗೆಹರಿಸಬೇಕು. ಸ್ವಚ್ಛತೆ, ಆರೋಗ್ಯ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ಡಾ.ಗಿರೀಶ ಬದೋಲೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಮಲನಗರ
ನಮ್ಮ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು 22 ಅರ್ಜಿಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ ಸ್ವೀಕರಿಸಿ 8 ದಿನದೊಳಗೆ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಪಂ ಸಿಇಒ ಡಾ.ಗಿರೀಶ ಬದೋಲೆ ಸೂಚನೆ ನೀಡಿದರು.
ತಾಲೂಕಿನ ಚಿಮ್ಮೇಗಾಂವ ಗ್ರಾಮದ ಹನುಮಾನ ಮಂದಿರದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ “ನಮ್ಮ ನಡೆ ಹಳ್ಳಿ ಕಡೆಗೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಹೆಚ್ಚು ಅಧಿಕಾರ ನೀಡಿದ್ದು, ಸಮಸ್ಯೆಗಳನ್ನು ತ್ವರಿತವಾಗಿ ಪಿಡಿಒಗಳು ಬಗೆಹರಿಸಬೇಕು. ಸ್ವಚ್ಛತೆ, ಆರೋಗ್ಯ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಆದ್ಯತೆ ನೀಡಬೇಕೆಂದರು.
ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅಭಿವೃದ್ಧಿ ಕುರಿತು ನಾಗರಿಕರು ನೀಡುವ ಸಲಹೆಗಳನ್ನು ಗೌರವಿಸಿ ವಾರದೊಳಗೆ ಸೂಕ್ತ ಪರಿಹಾರ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಪಿಡಿಒ ಸೇರಿ ತಾಲೂಕು ಪಂಚಾಯಿತಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದಲ್ಲಿ ಅಂಥಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿದರು.
ವಾಯಾ ಚಿಮ್ಮೆಗಾಂವ, ಹಂದಿಕೇರಾ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ದುರಸ್ತಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಗ್ರಾಮದ ಪ್ರಶಾಂತ ಬಾಲಾಜಿ ಬಿರಾದಾರ ತಿಳಿಸಿದರು.
ಚಿಮ್ಮೇಗಾಂವ ಗ್ರಾಮದ ವಿವಿಧ ವಾರ್ಡ್‌ಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗು ಮನೆಗಳಿಗೆ ನೀರು ಸರಬರಾಜಾಗುತ್ತಿಲ್ಲ ಎಂದು ಗ್ರಾಮದ ಅನೀಲ ಬಿರಾದಾರ ಸೇರಿ ಗ್ರಾಮಸ್ಥರು ದೂರು ನೀಡಿದರು.
ಡಾ.ಅಂಬೇಡ್ಕರ ಸಮುದಾಯ ಭವನ, ತೆರೆದ ಬಾವಿ, ಹಿರಿಯ ಆರೋಗ್ಯ ಸಹಾಯಕಿ ಕಟ್ಟಡ ಮುಂತಾದೆಡೆಗಳಲ್ಲಿ ಸಂಚರಿಸಿ ಮಾಹಿತಿ ಪಡೆದರು. ಸಮಗ್ರ ಕ್ರಿಯಾ ಯೋಜನೆ ತಯಾರಿಸುವಂತೆ ಮತ್ತು ನೀಡಿರುವ ಮನವಿಗಳನ್ನು ವಾರದೊಳಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ 22 ಅಹವಾಲುಗಳನ್ನು ಸ್ವೀಕರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಧೋಂಡುಬಾಯಿ ವಿಲಾಸ ವಹಿಸಿದರು. ಉಪಾಧ್ಯಕ್ಷ ತುಕಾರಾಮ ಪಾಟೀಲ್, ಮನೋಜ ನವಾಡೆ, ತಾಪಂ ಇಒ ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ವೆಂಕಟ ಸಿಂಧೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನೀಲಕುಮಾರ ಮೇಲೊಡೆ, ಡಾ. ಪವನ ಕುಮಾರ, ಕಿರಿಯ ಅಭಿಯಂತರ ರಾಜಕುಮಾರ ಉದಗಿರೆ, ಪಿಡಿಒ ತಾನಾಜಿ ಪಾಟೀಲ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.