ಕನ್ನಡಪ್ರಭ ವಾರ್ತೆ ಬೆಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ವಿವೇಕಾನಂದ ಅವರಿಗೆ ಬೆಂಗಳೂರು ಟರ್ಫ್ ಕ್ಲಬ್‌ನ ಸ್ವವರ್ಡ್ ಹುದ್ದೆಗೆ ನಿಯಮಬಾಹಿರ ನೇಮಕಾತಿ ಮಾಡಿರುವ ಪ್ರಕರಣ ಸಂಬಂಧ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಲೋಕಾಯುಕ್ತ ಪೊಲೀಸರ ಧೋರಣೆಗೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ಗರಂ ಆಗಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಲೋಕಾಯುಕ್ತ ಪೊಲೀಸರ ನಡೆಯನ್ನು ಎನ್.ಆರ್.ರಮೇಶ್ ಪ್ರಶ್ನಿಸಿದ್ದರಿಂದ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಮೊದಲಿನಿಂದ ಹೊಸದಾಗಿ ಪ್ರಾರಂಭಿಸಿ ಆರು ತಿಂಗಳೊಳಗಾಗಿ ಸಮರ್ಪಕವಾದ ಹೊಸ ತನಿಖಾ ವರದಿಯನ್ನು ಸಲ್ಲಿಸುವಂತೆ ಕಳೆದ ಫೆಬ್ರವರಿಯಲ್ಲಿ ಸೂಚನೆ ನೀಡಿತ್ತು.6 ತಿಂಗಳ ಗಡುವು ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಆರು ತಿಂಗಳ ಗಡುವು ಮುಗಿದರೂ ಹೊಸ ತನಿಖಾ ವರದಿಯನ್ನು ಸಲ್ಲಿಸದೇ ಇರುವುದಕ್ಕೆ ಲೋಕಾಯುಕ್ತ ಪರವಾದ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಮರು ತನಿಖೆಗೆ ಆದೇಶಿಸಿರುವ ವಿಷಯ ಲೋಕಾಯುಕ್ತದ ಎಡಿಜಿಪಿ ತಿಳಿದಿಲ್ಲದಿರುವುದರಿಂದ ಹೊಸದಾಗಿ ತನಿಖೆ ಪ್ರಾರಂಭವಾಗಿಲ್ಲ ಎಂಬ ವಿಷಯ ತಿಳಿದ ನ್ಯಾಯಾಲಯವು ಗರಂ ಆಯಿತು. ತಕ್ಷಣವೇ ಲೋಕಾಯುಕ್ತ ಎಡಿಜಿಪಿಗೆ ಈ ಸಂಬಂಧ ಕಾರಣ ಕೇಳಿ ನೋಟೀಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶ ನೀಡಿದೆ.