ಎಸ್ಸೆನ್ ಸ್ಮಾರಕ ಬಳಿ ಜನಪ್ರತಿನಿಧಿ ತರಬೇತಿ ಕೇಂದ್ರ: ಹೆಚ್.ಹನುಮಂತಪ್ಪ

KannadaprabhaNewsNetwork | Published : Jun 3, 2024 12:30 AM
Follow Us

ಸಾರಾಂಶ

ಚಿತ್ರದುರ್ಗ ಹೊರವಲಯ ಸೀಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಸ್ಮಾರಕದ ಆವರಣದಲ್ಲಿ ಮಾಜಿ ಸಂಸದ ಹೆಚ್.ಹನುಮಂತಪ್ಪ ಸಸಿ ನೆಟ್ಟು ಮಾತನಾಡಿ, ನೆಟ್ಟ ಸಸಿಗಳ ಪೋಷಣೆ ಸರಿಯಾದ ಕ್ರಮದಲ್ಲಿ ಆಗದೆ ಬರಿ ದಿನಾಚರಣೆಗಳು ಬರೀ ನೆಪಕ್ಕೆ ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಸ್ಮಾರಕದ ಸಮೀಪ ಜನಪ್ರತಿನಿಧಿಗಳಿಗೆ ತರಬೇತಿ ಕೇಂದ್ರವೊಂದನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಜಿ ಸಂಸದ ಹಾಗೂ ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಗೌರವ ಕಾರ್ಯದರ್ಶಿ ಹೆಚ್.ಹನುಮಂತಪ್ಪ ಹೇಳಿದರು.

ಚಿತ್ರದುರ್ಗ ಹೊರವಲಯ ಸೀಬಾರದ ಬಳಿ ಇರುವ ಎಸ್ಸೆನ್ ಸ್ಮಾರಕದಲ್ಲಿ ಭಾನುವಾರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿಜಲಿಂಗಪ್ಪನವರ ಬಗೆಗೆ ಈಗಿನ ಜನಪ್ರತಿನಿಧಿಗಳಿಗೆ ಅಷ್ಟಾಗಿ ಪರಿಚಯವೇ ಇಲ್ಲ. ಅಂಥವರ ಆದರ್ಶ ರಾಜಕೀಯ ಜೀವನದ ಅರಿವು ಇಂದಿನ ಮತ್ತು ಮುಂದಿನ ರಾಜಕಾರಣಿಗಳಿಗೆ ಸಿಗಲಿ ಎನ್ನುವ ಕಾರಣಕ್ಕೆ ಸ್ಮಾರಕ ಸಮೀಪದ ಜಾಗದಲ್ಲಿ ಜನಪ್ರತಿನಿಧಿಗಳಿಗಾಗಿ ಒಂದು ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು. ಅಲ್ಲಿ ತರಬೇತಿ ಹೊಂದಿದವರೆಲ್ಲರೂ ಆದರ್ಶ ನಡೆ-ನುಡಿಗಳಾಗಿರಬೇಕೆಂದೇನೂ ಇಲ್ಲ. ಒಂದು ಸಾವಿರದಲ್ಲಿ ಒಬ್ಬರಾದರೂ ಆ ರೀತಿಯ ನಡೆ ರೂಢಿಸಿಕೊಂಡರೆ ಶ್ರಮ ಸಾರ್ಥಕವಾಗಲಿದೆ ಎಂದರು.

ಕಳೆದ ಐವತ್ತು ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ವನ ಮಹೋತ್ಸವದ ಹೆಸರಿನಲ್ಲಿ ಸಸಿ ನೆಡುತ್ತಲೇ ಬಂದಿದ್ದೇವೆ. ನೆಟ್ಟ ಸಸಿಗಳು ಉಳಿದಿದ್ದರೆ, ಮರಗಳಾಗಿದ್ದರೆ ನಾವಿಂದು ಕಾಲಿಡಲು ಜಾಗ ಆಗುತ್ತಿರಲಿಲ್ಲ. ಎಲ್ಲ ಕಡೆ ಸಸ್ಯ ಸಂಪತ್ತು ರಾರಾಜಿಸಬೇಕಾಗಿತ್ತು. ಆದರೆ ಹಾಗಾಗಿಲ್ಲ. ನೆಟ್ಟ ಸಸಿಗಳ ಪೋಷಣೆ ಸರಿಯಾದ ಕ್ರಮದಲ್ಲಿ ಆಗದೆ ಬರಿ ದಿನಾಚರಣೆ ಗಳು ನೆಪಕ್ಕೆ ಮಾತ್ರ ಎನ್ನುವಂತಾಗಿದೆ ಎಂದರು.

ಎಸ್ಸೆನ್ ಅವರಿಗೆ ಅವರ ಸಮಾಧಿ ಸ್ಮಾರಕವಾಗಿ ಉಳಿಯಬೇಕೆಂಬ ಅಪೇಕ್ಷೆ ಏನೂ ಇರಲಿಲ್ಲ. ಅವರೊಬ್ಬ ನಿಸ್ವಾರ್ಥ, ಆದರ್ಶ ವ್ಯಕ್ತಿತ್ವದ ಅಪಾರ ದೇಶಪ್ರೇಮವುಳ್ಳ ರಾಜಕಾರಣಿ. ಕರ್ನಾಟಕ ಏಕೀಕರಣ ಮತ್ತು ಭಾಷಾವಾರು ಪ್ರಾಂತ ರಚನೆಯ ಪರವಾಗಿದ್ದ ಅವರಿಂದ ಕೊಡುಗೆ ಬಹಳಷ್ಟು ಆಗಿದೆ. ಚಿತ್ರದುರ್ಗ ನೆಲದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿರಲಿ ಮತ್ತು ಅವರ ಜೀವನ ಮುಂದಿನ ಪೀಳಿಗೆಗೂ ಗೊತ್ತಾಗಲಿ ಎಂಬ ಆಶಯದಿಂದ ಈ ಸ್ಮಾರಕ ನಿರ್ಮಾಣಕ್ಕೆ ಕೈ ಹಾಕಲಾಯಿತು ಎಂದರು.

ಜಗದ್ಗುರು ಮುರುಘಾ ರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಈಗಾಗಲೇ ಮುರುಘಾಮಠ ಸಾವಿರಾರು ಸಸಿ ನೆಟ್ಟಿದೆ. ಅದರ ನಿರಂತರತೆಗಾಗಿ ಈ ಪ್ರಯತ್ನ. ಲಕ್ಷ, ಸಾವಿರ ಅಥವ ಒಂದೇ ಗಿಡ ನೆಟ್ಟರೂ ಅದು ಉಳಿಯಬೇಕು ಮತ್ತು ಬೆಳೆಸಬೇಕು ಅಂತಹ ಸಂಕಲ್ಪ ಶ್ರೀಮಠಕ್ಕಿದೆ ಎಂದರು.

ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮಿಗಳು, ನಿಪ್ಪಾಣಿ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟಿನ ಧರ್ಮದರ್ಶಿ ಎಸ್.ಷಣ್ಮುಖಪ್ಪ, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಗುತ್ತಿನಾಡು ಪ್ರಕಾಶ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಪಿ.ಬಿ ನಿರ್ಮಲ, ಜಿಲ್ಲಾ ಶಿವಸಿಂಪಿ ಸಮಾಜದ ಅಧ್ಯಕ್ಷೆ ಅನಿತಾ ಮುರುಘೇಶ್, ಕಾರ್ಯದರ್ಶಿ ಕವಿತಾ, ಮಾಜಿ ಅಧ್ಯಕ್ಷೆ ಶೈಲಜಾ ವಿಜಯಕುಮಾರ್, ಸಮಾಜ ಸೇವಕರಾದ ಎಚ್.ಬಾಲಚಂದ್ರಪ್ಪ, ನಾಗರಾಜ ಸಂಗಂ, ವೀರಶೈವ ಮಹಾಸಭಾದ ಮಂಜಣ್ಣ, ಎಸ್.ಜೆಎಂ. ವಿದ್ಯಾಪೀಠದ ನಿವೃತ್ತ ಸಿಬ್ಬಂದಿಗಳಾದ ಎಂ.ಎಸ್ ಮೃತ್ಯುಂಜಯ, ಡಿ.ವಿ.ಮುರುಗೇಶ್, ಎನ್.ತಿಪ್ಪಣ್ಣ ಇದ್ದರು.