ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿಸುವೆ: ಎ.ಮಂಜುನಾಥ್

KannadaprabhaNewsNetwork | Published : Apr 11, 2025 12:32 AM

ಸಾರಾಂಶ

ಬೆಳಗ್ಗೆಯಿಂದ ಸಂಜೆವರೆಗೆ ಫುಟ್ ಪಾತ್ ಮೇಲೆ ವ್ಯಾಪಾರ ಮಾಡಿದರಷ್ಟೇ ಇವರೆಲ್ಲರ ಜೀವನ ಸಾಗುತ್ತದೆ. ಇಲ್ಲಿದ್ದರೆ ಉಪವಾಸ ಬೀಳುತ್ತಾರೆ. ಇದನ್ನು ಶ್ರೀಮಂತ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಆಡಳಿತ ಮಾಡುವವರಿಗೆ ತಾಯಿ ಹೃದಯ ಇರಬೇಕು.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಪಟ್ಟಣದಲ್ಲಿ ಒತ್ತುವರಿ ತೆರವು ಹೆಸರಿನಲ್ಲಿ ಸರ್ಕಾರಿ ಜಾಗ ಹಾಗೂ ಮುಖ್ಯರಸ್ತೆಯ ಫುಟ್ ಪಾತ್ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಿರುವ ಪುರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜನರಿಂದಲೇ ತಕ್ಕ ಶಾಸ್ತಿ ಮಾಡಿಸುತ್ತೇನೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ಬಿಡದಿ ಪಟ್ಟಣದ ಸರ್ಕಾರಿ ಜಾಗ ಹಾಗೂ ಮುಖ್ಯರಸ್ತೆಯಲ್ಲಿ ಫುಟ್ ಪಾತ್ ಒತ್ತುವರಿ ತೆರವು ಮಾಡಿರುವುದನ್ನು ವೀಕ್ಷಿಸಿದ ಮಂಜುನಾಥ್ ರವರು, ನಿವಾಸಿಗಳು, ಅಂಗಡಿ ಮಾಲೀಕರು ಹಾಗೂ ಫುಟ್ ಪಾತ್ ವ್ಯಾಪಾರಿಗಳಿಂದ ಅಹವಾಲು ಆಲಿಸಿ ಪುರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಬಿಡದಿ ಪುರಸಭೆಯಾದ ಮೇಲೆ ಸಾಕಷ್ಟು ಮಂದಿ ಅಧ್ಯಕ್ಷರಾಗಿ ಆಡಳಿತ ನೆಡಸಿದ್ದಾರೆ. ಈಗಿನವರಂತೆ ಜನ ವಿರೋಧಿಯಾಗಿ ನಡೆದುಕೊಳ್ಳಲಿಲ್ಲ. ಶಾಸಕ ಬಾಲಕೃಷ್ಣರವರ ತಲೆಯಲ್ಲಿ ಏನಿದೆಯೊ ಗೊತ್ತಿಲ್ಲ. ಅವರು ಯಾವತ್ತಿದ್ದರೂ ಬಡವರ ವಿರುದ್ಧವೇ ಇರುತ್ತಾರೆ. ನಮ್ಮ ಶಾಸಕರ ಆದೇಶದಂತೆ ಕಾರ್ಯಾಚರಣೆ ನಡೆಸಿರುವುದಾಗಿ ಮಹಾನ್ ನಾಯಕರೊಬ್ಬರು ಹೇಳಿದ್ದಾರೆ. ಆ ಶಾಸಕರು ಏನು ಆದೇಶ ಮಾಡಿದ್ದಾರೆ ಅಂತ ಗೊತ್ತಾಗಿದೆ ಎಂದು ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮತ್ತು ವಿಪಕ್ಷ ನಾಯಕ ಸಿ.ಉಮೇಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಫುಟ್ ಪಾತ್ ಮೇಲೆ ವ್ಯಾಪಾರ ಮಾಡಲು ಸುಪ್ರಿಂಕೋರ್ಟ್ ಹಾಗೂ ಕೇಂದ್ರ ಸರ್ಕಾರವೇ ಅಧಿಕಾರ ನೀಡಿದೆ.

ಬೆಳಗ್ಗೆಯಿಂದ ಸಂಜೆವರೆಗೆ ಫುಟ್ ಪಾತ್ ಮೇಲೆ ವ್ಯಾಪಾರ ಮಾಡಿದರಷ್ಟೇ ಇವರೆಲ್ಲರ ಜೀವನ ಸಾಗುತ್ತದೆ. ಇಲ್ಲಿದ್ದರೆ ಉಪವಾಸ ಬೀಳುತ್ತಾರೆ. ಇದನ್ನು ಶ್ರೀಮಂತ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಆಡಳಿತ ಮಾಡುವವರಿಗೆ ತಾಯಿ ಹೃದಯ ಇರಬೇಕು ಎಂದರು.

ಫುಟ್ ಪಾತ್ ವ್ಯಾಪಾರಿಗಳಿಂದ ತೊಂದರೆಯಾಗುತ್ತಿದ್ದರೆ ಅವರಿಗೆ ತಿಳಿ ಹೇಳಬೇಕಿತ್ತು. ಇಲ್ಲವೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರ ಮಾಡಬೇಕು. ಶಾಸಕರು ಒಂದು ಬಾರಿಯೂ ಫುಟ್ ಪಾತ್ ವ್ಯಾಪಾರಿಗಳ ಸಭೆ ನಡೆಸಲಿಲ್ಲ. ಅವರ ಅಹವಾಲು ಆಲಿಸಲಿಲ್ಲ. ಆದರೀಗ ಅಂಗಡಿಗಳನ್ನು ನೆಲಸಮ ಮಾಡಿದ್ದಾರೆ. ಇಲ್ಲಿ ಅವರು ತಮ್ಮ ಸಮಾಧಿಗಳನ್ನು ಕಟ್ಟಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ನಾನು ಊರಲ್ಲಿ ಇಲ್ಲದಿದ್ದಾಗ ಮಧ್ಯಾಹ್ನದೊಳಗೆ ತೆರವು ಕಾರ್ಯಾಚರಣೆ ಮುಗಿಸಿದ್ದಾರೆ. ಬಿಡದಿ ಮುಖ್ಯ ರಸ್ತೆಯಲ್ಲಿ ಚರಂಡಿಯಿಂದ ಒಳಗಿರುವ ಮನೆಗಳ ಮೆಟ್ಟಿಲುಗಳನ್ನು ಧ್ವಂಸ ಮಾಡಿದ್ದಾರೆ. ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಎಲ್ಲವನ್ನೂ ಕಡಿತಗೊಳಿಸಿದ್ದಾರೆ. ಚರಂಡಿ ಮತ್ತು ಫುಟ್ ಪಾತ್ ನಿರ್ಮಿಸಿದರೆ ಹಣ ಸಿಗುತ್ತದೆ ಅಂತ ಬಂದಿದ್ದಾರೆ. ಪುರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜನರ ಮುಂದೆ ತಕ್ಕ ಶಾಸ್ತಿ ಮಾಡಿಸುತ್ತೇನೆ ಎಂದು ಎಚ್ಚರಿಸಿದರು.

ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್ ಮಾತನಾಡಿ, ಸ್ಥಾಯಿ ಸಮಿತಿ ಸಭೆಯಲ್ಲಿ ರಸ್ತೆಗೆ ಬಂದಿರುವ ಮನೆ ಮುಂಭಾಗದ ಮೇಲ್ಚಾವಣಿಯನ್ನಷ್ಟೆ ತೆರವು ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಚರಂಡಿ ಮೇಲ್ಭಾಗದ ಸ್ಲ್ಯಾಬ್‌ಗಳನ್ನು ಸಹ ತೆಗೆಯಲು ತೀರ್ಮಾನಿಸಿರಲಿಲ್ಲ, ಕೆಲವು ಮನೆಗಳ ಮುಂದೆ ಸಂಪೂರ್ಣವಾಗಿ ಒತ್ತುವರಿ ತೆರವಾಗಿದ್ದರೆ, ಮತ್ತೆ ಕೆಲವು ಮನೆಗಳ ಮುಂದೆ ಯಥಾಸ್ಥಿತಿ ಇದೆ. ಮಾಜಿ ಶಾಸಕರೊಂದಿಗೆ ಅಧ್ಯಕ್ಷರು ಮತ್ತು ನಾವು ಚರ್ಚೆ ನಡೆಸಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರಿಗೆ ಅನ್ಯಾಯವಾಗದಂತೆ ಕ್ರಮ ವಹಿಸುತ್ತೇವೆ ಎಂದರು.

ಪುರಸಭೆ ಅಧ್ಯಕ್ಷ ಎಂ.ಎನ್,ಹರಿಪ್ರಸಾದ್, ಸದಸ್ಯರಾದ ಸೋಮಶೇಖರ್, ದೇವರಾಜು, ರಮೇಶ್, ನಾಗರಾಜು, ರಾಕೇಶ್, ಮುಖಂಡರಾದ ಶೇಷಪ್ಪ, ಬಾನಂದೂರು ಜಗದೀಶ್, ರಾಮಣ್ಣ, ಬಸವರಾಜು, ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ಬಸವಣ್ಣ, ಖಲೀಲ್ , ರಮೇಶ್ , ಸೋಮಶೇಖರ್ ಮತ್ತಿತರರು ಮಾಜಿ ಶಾಸಕರ ಜೊತೆಗಿದ್ದು ಸಾಥ್ ನೀಡಿದರು.

ಸ್ಥಳಕ್ಕಾಗಿಮಿಸಿದ ಮಾಜಿ ಶಾಸಕ ಎ.ಮಂಜುನಾಥ್ ಅವರಿಗೆ ಬೀದಿ ಬದಿ ವ್ಯಾಪಾರಿಗಳು ನಮಗೆ ಪ್ರತ್ಯೇಕವಾದ ಸ್ಥಳ ನೀಡಿ ವ್ಯಾಪಾರ ನಡೆಸಲು ಕ್ರಮ ವಹಿಸಿ, ಜೊತೆಗೆ ನಮಗೆ ಆಗಿರುವ ನಷ್ಟವನ್ನು ಪುರಸಭೆ ವತಿಯಿಂದ ಭರಿಸಿಕೊಡುವಂತೆ ಮನವಿ ಮಾಡಿಕೊಂಡು ಅಳಲು ತೋಡಿಕೊಂಡರು.

ಬಿಡದಿ ಪುರಸಭೆ ಅಧ್ಯಕ್ಷರಿಗೆ ತಕ್ಕ ಶಾಸ್ತಿ ಮಾಡಿದ್ದೇನೆ. ತೆರವು ಕಾರ್ಯಾಚರಣೆ ವೇಳೆ ಹಾನಿಯಾಗಿರುವುದಕ್ಕೆ ಪುರಸಭೆಯಿಂದಲೇ ಪರಿಹಾರ ನೀಡಬೇಕು. ಫುಟ್ ಪಾತ್ ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಸೂಚನೆ ನೀಡಿದ್ದೇನೆ.ಇಲ್ಲಿ ಯಾರೂ ದೊಡ್ಡವರಲ್ಲ, ಫುಟ್ ಪಾತ್ ವ್ಯಾಪಾರಿಗಳು ದೊಡ್ಡವರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು.

- ಎ.ಮಂಜುನಾಥ್ , ಮಾಜಿ ಶಾಸಕರು.

Share this article