ಜನಪ್ರತಿನಿಧಿಗಳಿಗೆ ತಮ್ಮ ಕಾರ್ಯದ ಕುರಿತು ಆತ್ಮಾವಲೋಕನ ಅಗತ್ಯ

KannadaprabhaNewsNetwork |  
Published : Jul 23, 2024, 12:32 AM IST
೨೨ಬಿಹೆಚ್‌ಆರ್ ೧: ಬಾಳೆಹೊನ್ನೂರು ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಎಂ.ವಿ.ಶ್ರೀನಿವಾಸಗೌಡ ನಿರ್ಗಮಿತ ಅಧ್ಯಕ್ಷ ಎಂ.ಡಿ.ಶಿವರಾಮ್ ಅವರಿಂದ ಅಧಿಕಾರ ಸ್ವೀಕರಿಸಿದರು. ತಾರಾನಾಥ್, ಕೆ.ಎನ್.ರುದ್ರಪ್ಪ, ಎಂ.ನಾರಾಯಣ, ಶರತ್‌ಕುಮಾರ್ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿರುವ ಶಾಸಕ, ಜನಪ್ರತಿನಿಧಿಗಳು ನಾವು ಸಮಾಜಕ್ಕಾಗಿ ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದರು.

ಪಟ್ಟಣದ ಲಯನ್ಸ್ ಕ್ಲಬ್ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿರುವ ಶಾಸಕ, ಜನಪ್ರತಿನಿಧಿಗಳು ನಾವು ಸಮಾಜಕ್ಕಾಗಿ ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದರು.

ಪಟ್ಟಣದ ಲಯನ್ಸ್ ಕ್ಲಬ್ ಭಾನುವಾರ ಆಯೋಜಿಸಿದ್ದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜಕಾರಣ ವ್ಯವಸ್ಥೆ ಇಂದು ಸಾಕಷ್ಟು ಬದಲಾವಣೆ ಕಾಣಬೇಕಿದ್ದು, ರಾಜಕಾರಣಿಗಳು ಸಾಮಾಜಿಕ ಸಂಘ, ಸಂಸ್ಥೆಗಳ ಮೂಲಕ ಹಲವು ವಿಷಯಗಳನ್ನು ಕಲಿತು ಆತ್ಮಾವಲೋಕನ ಮಾಡಿಕೊಳ್ಳ ಬೇಕಿದೆ. ಸೇವೆ ಎಂದರೆ ಏನು ಎನ್ನುವುದನ್ನು ರಾಜಕಾರಣಿಗಳು ಅಗತ್ಯವಾಗಿ ಕಲಿಯಬೇಕಿದೆ.

ಜನಸಾಮಾನ್ಯರು, ಬಡವರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮನೋಭಾವವನ್ನು ಸಂಘ ಸಂಸ್ಥೆಗಳ ಮೂಲಕ ರಾಜಕಾರಣಿಗಳು ಅರ್ಥೈಸಿಕೊಳ್ಳಬೇಕಿದೆ. ಸರ್ಕಾರದ ಯೋಜನೆಗಳನ್ನು ಜನರು ಇಂದು ಗುಮಾನಿಯಲ್ಲಿಯೇ ನೋಡುವ ಪರಿಸ್ಥಿತಿ ಎದುರಾಗಿದ್ದು, ಸರ್ಕಾರದ ಭಾಗವಾದ ಆಡಳಿತ ಪಕ್ಷಗಳು ಘೋಷಿಸುವ ಯೋಜನೆಗಳು ಸ್ವಾರ್ಥದಿಂದಲೇ ಕೂಡಿವೆ ಎಂಬುದು ಜನರಿಗೆ ಅರ್ಥವಾಗಿದೆ.

ರಾಜಕಾರಣಿಗಳು ಅವರ ಕ್ಷೇತ್ರಗಳಲ್ಲಿ ಮಾಡುವ ಎಲ್ಲಾ ಸೇವೆಗಳು ಸ್ವಾರ್ಥದಿಂದಲೇ ಕೂಡಿದ್ದು, ಕೇವಲ ಪ್ರಚಾರ, ಸ್ವಾರ್ಥ ಮನೋಭಾವದಿಂದಲೇ ಸೇವೆ ಮಾಡುತ್ತಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸೇವೆಯ ಮೌಲ್ಯ ಇಂದು ತನ್ನ ಅರ್ಥ ಕಳೆದುಕೊಂಡಿದೆ.

ವಿಧಾನಸಭೆ, ಪರಿಷತ್ ಕಲಾಪಗಳಲ್ಲಿ ಹಲವು ನಿಯಮಾವಳಿಗಳು ಇವೆ. ಆದರೆ ಅವುಗಳ ಪಾಲನೆ ಸಮರ್ಪಕವಾಗಿ ಆಗುತ್ತಿಲ್ಲ. ಇವುಗಳನ್ನು ಲಯನ್ಸ್, ರೋಟರಿಯಂತಹ ಸಂಸ್ಥೆಗಳಿಂದ ಕಲಿಯಬೇಕು ಎಂದರು.

ಲಯನ್ಸ್ ಜಿಲ್ಲೆ 317ರ ಉಪ ರಾಜ್ಯಪಾಲ ಎಚ್.ಎಂ.ತಾರಾನಾಥ್ ಮಾತನಾಡಿ, ಸೇವೆಯಿಂದ ದೊರೆಯುವ ಆತ್ಮ ತೃಪ್ತಿ ಬೇರೊಂದು ಇಲ್ಲ. ಜೀವನದಲ್ಲಿ ಸಂತೋಷವಾಗಿರಲು ವರ್ತಮಾನ ಅನುಭವಿಸಬೇಕಿದೆ.

ಲಯನ್ಸ್ ಸಂಸ್ಥೆ ಈ ನಿಟ್ಟಿನಲ್ಲಿ ಸದಸ್ಯರನ್ನು ಒಗ್ಗೂಡಿಸಿಕೊಂಡು ಸಮಾಜಮುಖಿ ಕಾರ್ಯ ಮಾಡುತ್ತ ಆತ್ಮತೃಪ್ತಿಯನ್ನು ಕಂಡು ಕೊಳ್ಳುತ್ತಿದೆ ಎಂದರು.

ಶಿವಮೊಗ್ಗ ಡಿವಿಎಸ್ ಕಾಲೇಜಿನ ಅಧ್ಯಕ್ಷ ಕೆ.ಎನ್.ರುದ್ರಪ್ಪ ಮಾತನಾಡಿ, ಸಮಾಜ ಸೇವೆಯಲ್ಲಿ ಲಯನ್ಸ್ ಸಂಸ್ಥೆ ಸದಾ ಮುಂಚೂಣಿಯಲ್ಲಿದ್ದು, ಆರೋಗ್ಯ ಶಿಬಿರ, ಮತ್ತಿತರರ ಸಮಾಜಮುಖಿ ಕಾರ್ಯಗಳ ಮೂಲಕ ಆಶಾದಾಯಕವಾಗಿ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಲಯನ್ಸ್ ಸಂಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಉರಗ, ಮುಳುಗು ತಜ್ಞ ಪೀಟರ್ ಅಬ್ರಾಹಂ, ಮೆಸ್ಕಾಂ ಲೈನ್‌ಮೆನ್ ಕಾಂತರಾಜ್, ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ಅಂಕಗಳಿಸಿದ ರಾಜೇಶ್ವರಿ ಮೇಲ್ಪಾಲ್ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಚೇತನ ಶಿಕ್ಷಕ ಎಚ್.ಮಂಜುನಾಥ್ ಅವರಿಗೆ ಧನ ಸಹಾಯ ನೀಡಲಾಯಿತು.

ನೂತನ ಅಧ್ಯಕ್ಷರಾಗಿ ಎಂ.ವಿ.ಶ್ರೀನಿವಾಸಗೌಡ ನಿರ್ಗಮಿತ ಅಧ್ಯಕ್ಷ ಎಂ.ಡಿ.ಶಿವರಾಮ್ ಅವರಿಂದ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಕಾರ್ಯದರ್ಶಿ ವಿಲಿಯಂ ಡಯಾಸ್, ನೂತನ ಕಾರ್ಯದರ್ಶಿ ಎಂ.ನಾರಾಯಣ, ಖಜಾಂಚಿ ಸಿ.ಎ.ಶರತ್‌ಕುಮಾರ್, ಕೆ.ನಾರಾಯಣಶೆಟ್ಟಿ ತುಪ್ಪೂರು, ಸುಮಾ, ಸವಿತಾ, ಗೋಪಾಲಗೌಡ, ಮಂಜುನಾಥ್ ತುಪ್ಪೂರು, ಜ್ಯೋತಿ ಮತ್ತಿತರರು ಇದ್ದರು.೨೨ಬಿಹೆಚ್‌ಆರ್ ೧: ಬಾಳೆಹೊನ್ನೂರು ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಎಂ.ವಿ.ಶ್ರೀನಿವಾಸಗೌಡ ನಿರ್ಗಮಿತ ಅಧ್ಯಕ್ಷ ಎಂ.ಡಿ.ಶಿವರಾಮ್ ಅವರಿಂದ ಅಧಿಕಾರ ಸ್ವೀಕರಿಸಿದರು. ತಾರಾನಾಥ್, ಕೆ.ಎನ್.ರುದ್ರಪ್ಪ, ಎಂ.ನಾರಾಯಣ, ಶರತ್‌ಕುಮಾರ್ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ