ಜಿಲ್ಲಾಸ್ಪತ್ರೆಯಲ್ಲಿ ಡಿಸಿ ಸ್ವಾಗತಿಸಿದ ಇಲಿ, ಸೊಳ್ಳೆ

KannadaprabhaNewsNetwork |  
Published : Jul 23, 2024, 12:32 AM IST
ಡಿಸಿ ಜಿಲ್ಲಾಸ್ಪತ್ರೆಗೆ ಭೇಟಿ | Kannada Prabha

ಸಾರಾಂಶ

ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಬಳಿಯಿರುವ ಶೌಚಗೃಹದಲ್ಲಿ ರಾಶಿ ರಾಶಿ ಕಸದ ಮೂಟೆಯನ್ನು ಕಂಡ ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಬಳಿಯಿರುವ ಶೌಚಗೃಹದಲ್ಲಿ ರಾಶಿ ರಾಶಿ ಕಸದ ಮೂಟೆಯನ್ನು ಕಂಡ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೂಡಲೇ ಕಸದ ಮೂಟೆಯನ್ನು ತೆರವುಗೊಳಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್‌ಗೆ ಎಚ್ಚರಿಕೆ ನೀಡಿದರು. ನಗರದ ಜಿಲ್ಲಾಸ್ಪತ್ರೆಯ ಮಕ್ಕಳ, ಡೆಂಘೀ ಚಿಕಿತ್ಸೆ, ನವಜಾತ ಶಿಶು ವಿಭಾಗ, ಹೆರಿಗೆ ಕೊಠಡಿ, ಮಹಿಳಾ ವಿಭಾಗ, ಪ್ರಸವಪೂರ್ವ ಆರೈಕೆ ಕೊಠಡಿ, ಆರ್‌ಒಪಿ ಕೊಠಡಿ, ಡಾಟಾ ಎಂಟ್ರಿ ಆಪರೇಟರ್ ಕೊಠಡಿಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಅನೈರ್ಮಲ್ಯವನ್ನು ಕಂಡು ಆಸ್ಪತ್ರೆ ಸಿಬ್ಬಂದಿ, ವೈದ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಡಾಟಾ ಎಂಟ್ರಿ ಆಪರೇಟರ್ ಕೊಠಡಿಯಂತೂ ಕೆಟ್ಟ ವಾಸನೆ, ಕತ್ತಲೆಯಿಂದ ಕೂಡಿದೆ. ಸಿಬ್ಬಂದಿ ಕೊಠಡಿಗಳಲ್ಲೇ ಶುಚಿಯಾಗಿಲ್ಲ. ರೋಗಿಗಳ ವಾರ್ಡ್‌ಗಳನ್ನು ಇನ್ನೆಷ್ಟರ ಮಟ್ಟಿಗೆ ಸ್ವಚ್ಛವಾಗಿಡುತ್ತೀರಾ? ಭಾನುವಾರ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ರೋಗಿಯೊಬ್ಬರು ಮಾಡಿದ್ದ ವಾಂತಿ ಹಾಗೆ ಇದೆ. ಪ್ರತೀ ದಿನ ಸ್ವಚ್ಛಗೊಳಿಸುವುದಿಲ್ಲವೇ? ಈ ಕೂಡಲೇ ಗಂಟೆಯೊಳಗೆ ಜಿಲ್ಲಾಸ್ಪತ್ರೆ ಎಲ್ಲ ವಾರ್ಡ್‌, ಶೌಚಗೃಹ, ಆಸ್ಪತ್ರೆ ಸುತ್ತ-ಮುತ್ತ ಸ್ವಚ್ಛತೆ ಮಾಡದಿದ್ದಲ್ಲಿ ಸೇವೆಯಿಂದ ವಜಾ ಮಾಡಲಾಗುವುದೆಂದು ಗ್ರೂಪ್ ಡಿ ನೌಕರರ ಮೇಲೆ ಸಿಡಿಮಿಡಿಗೊಂಡರು.ಮಕ್ಕಳ ವಿಭಾಗದಲ್ಲಿದ್ದ ತ್ಯಾಜ್ಯ ವಸ್ತುಗಳನ್ನು ತಮ್ಮ ಸಮ್ಮುಖದಲ್ಲೇ ತೆರವು ಮಾಡಲು ಸೂಚಿಸಿದರು. ತ್ಯಾಜ್ಯ ತೆರವು ಸಂದರ್ಭದಲ್ಲಿ ಗುಂಪು-ಗುಂಪಾಗಿ ಸೊಳ್ಳೆಗಳು, ಇಲಿಗಳು ಹೊರಬಂದಿದ್ದನ್ನು ಕಂಡ ಜಿಲ್ಲಾಧಿಕಾರಿಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ಬಿಟ್ಟು ಇಲಿ, ಸೊಳ್ಳೆಯನ್ನು ಸಾಕಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಧೂಮೀಕರಣಕ್ಕೆ ಕ್ರಮ ಕೈಗೊಂಡು ಸ್ವಚ್ಛಗೊಳಿಸಬೇಕೆಂದು ತಾಕೀತು ಮಾಡಿದರು.ಸಿಬ್ಬಂದಿ ಆಸ್ಪತ್ರೆಯನ್ನು ಮನೆಯಂತೆ ಸ್ವಚ್ಛವಾಗಿಡಬೇಕು. ರೋಗಿಗಳನ್ನು ಮನೆಯವರಂತೆ ಕಾಣಬೇಕು. ಪ್ರತಿ ದಿನ ನೆಲ ಒರೆಸಬೇಕು. ಸಿಬ್ಬಂದಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಸರ್ಕಾರದಿಂದ ಅನುದಾನ ಲಭ್ಯವಿದ್ದರೂ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಖಾಸಗಿ ಆಸ್ಪತ್ರೆಯನ್ನು ಒಮ್ಮೆ ನೋಡಿ ಬನ್ನಿ. ರೋಗಿಗಳಿಗೆ ಖಾಸಗಿಗಿಂತ ಉತ್ತಮ ವಾತಾವರಣ, ನೈರ್ಮಲ್ಯ, ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವಂತಾಗಬೇಕೆಂದು ಖಡಕ್ ಸೂಚನೆ ನೀಡಿದರು.ಅನುಪಯುಕ್ತ ವೈದ್ಯಕೀಯ ಸಲಕರಣೆಗಳನ್ನು ವೈಜ್ಞಾನಿಕವಾಗಿ ಕೂಡಲೇ ವಿಲೇವಾರಿ ಮಾಡಬೇಕು. ಆಸ್ಪತ್ರೆ ಹೊರಾಂಗಣದಲ್ಲಿ ಬೆಳೆದಿರುವ ಹುಲ್ಲು, ಕಳೆಗಿಡಗಳನ್ನು ತೆರವುಗೊಳಿಸಬೇಕು. ಜಿಲ್ಲಾಸ್ಪತ್ರೆಯು ಸೊಳ್ಳೆ, ಇಲಿಗಳ ತಾಣವಾಗದೆ ಗಾಯಾಳು ಹಾಗೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ತಾಣವಾಗಿ ಮಾರ್ಪಾಡಾಗಬೇಕೆಂದು ಆಸ್ಪತ್ರೆ ಅಧಿಕಾರಿ-ಸಿಬ್ಬಂದಿಗೆ ನಿರ್ದೇಶನ ನೀಡಿದರು. ಡಾ. ಸಂತೋಷ್, ಡಿಎಂಒ ಡಾ. ಚೇತನ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ