- ಹೊನ್ನಾಳಿಯಲ್ಲಿ ಬಾಲರಾಜ್ ಘಾಟ್ ಪ್ರದೇಶ, ಇತರೆಡೆ ಮುಳುಗಡೆ ಸಂತ್ರಸ್ತರೊಂದಿಗೆ ಚರ್ಚೆ ನಡೆಸಿದ ಮಾಜಿ ಸಚಿವ - - -
ಕನ್ನಡಪ್ರಭ ವಾರ್ತೆ ಹೊನ್ನಾಳಿಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಜನರ ಸಂಕಷ್ಟ ಪರಿಸ್ಥಿತಿಗಳಲ್ಲಿ ಅವರೊಂದಿಗೆ ಮಾನವೀಯತೆಯಿಂದ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರದ ದರ್ಪ ತೋರಿಸಬಾರದು. ಏಕೆಂದರೆ, ಇಡೀ ಆಡಳಿತ ವ್ಯವಸ್ಥೆಗಳು ಜನರು ಪಾವತಿಸುವ ತೆರಿಗೆ ಹಣದಲ್ಲಿ ನಡೆಯುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಅತಿವೃಷ್ಟಿಯಿಂದ ತುಂಗಭದ್ರಾ ನದಿ ನೀರಿನಮಟ್ಟದಲ್ಲಿ ಏರಿಕೆಯಾಗಿ ಪಟ್ಟಣದ ಬಾಲರಾಜ್ ಘಾಟ್ ಪ್ರದೇಶದ ಜನವಸತಿ ಪ್ರದೇಶಗಳ ಅತಿ ಸಮೀಪಕ್ಕೆ ನದಿನೀರು ನುಗ್ಗಿದೆ. ಈ ಹಿನ್ನೆಲೆ ಸೋಮವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಸ್ಥಳಕ್ಕೆ ಭೇಟಿ ನೀಡಿ, ಅವಲೋಕನ ನಡೆಸಿ, ಸ್ಥಳೀಯರೊಂದಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.ಮನೆಗಳ ಕೆಡವುವ ಬೆದರಿಕೆ:
ತಾಲೂಕು ಆಡಳಿತ ನೀರಿನಮಟ್ಟ ಏರಿಯಾಗುತ್ತದೆ ಎಂಬ ಕಾರಣಕ್ಕೆ ಏಕಾಎಕಿಯಾಗಿ ಜುಲೈ 16ರಂದು ಮಂಗಳವಾರ ರಾತ್ರಿನದಿ ದಡದಲ್ಲಿದ್ದ ಹಲವಾರು ಕುಟುಂಬಗಳ ಮನೆಗಳನ್ನು ಖಾಲಿ ಮಾಡಿಸಿದೆ. ಅಲ್ಲದೇ, ವಿದ್ಯುತ್ ಸಂಪರ್ಕ ಕೂಡ ಕಡಿತಗೊಳಿಸಿದ್ದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಇದೀಗ ನದಿನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದು, ಪುನಃ ತಮ್ಮ ಮನೆಗಳಿಗೆ ಬಂದಿದ್ದೇವೆ. ಆದರೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆಗಳೇ ಇಲ್ಲದೇ ತೊಂದರೆಯಾಗುತ್ತಿದೆ, ಹಾಗೂ ಕೆಲ ಅಧಿಕಾರಿಗಳು ತಮ್ಮ ಮನೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ಕೆಡುವುದಾಗಿ ಕೂಡ ಧಮಕಿ ಹಾಕಿದ್ದರು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಳಿ ಅಳಲನ್ನು ತೋಡಿಕೊಂಡರು.ಇದರಿಂದ ಅಸಮಾಧಾನಗೊಂಡ ರೇಣುಕಾಚಾರ್ಯ ಅವರು, ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರು. ಇಲ್ಲಿಯ ಸ್ಥಳಯರಿಗೆ ಕೂಡಲೇ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ನದಿನೀರು ಮನೆಯೊಳಗೆ ನುಗ್ಗುವಂತಿದ್ದರೆ ಕುಟುಂಬಗಳನ್ನು ಊಟ, ವಸತಿ ಸೌಲಭ್ಯಗಳೊಂದಿಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಆದರೆ ಪರ್ಯಾಯ ವ್ಯವಸ್ಥೆಗಳನ್ನು ಮಾಡದೇ ಕುಟುಂಬಗಳನ್ನು ಸ್ಥಳಾಂತರಿಸುವುದು ಸಮಂಜಸವಲ್ಲ. ಇಲ್ಲಿನ ಮನೆಗಳನ್ನು ಕೆಡುವಲು ತಾನು ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ದೂರವಾಣಿಯಲ್ಲಿ ಖಾರವಾಗಿ ನುಡಿದರು.
ಈ ಸಂದರ್ಭ ಪುರಸಭೆ ಮಾಜಿ ಅಧ್ಯಕ್ಷ ಹೊಬಳದಾರ ಬಾಬು, ಮಹೇಶ್ ಹುಡೇದ್, ಪೇಟೇ ಪ್ರಶಾಂತ್ ಸೇರಿದಂತೆ ಅನೇಕ ಮುಖಂಡರು ಇದ್ದರು.- - -
ಬಾಕ್ಸ್* ಅಭಿವೃದ್ಧಿಗಳು ಬಿಜೆಪಿ ಸರ್ಕಾರದ ಕಾಲಕ್ಕೆ ಸೀಮಿತ
ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸರ್ಕಾರದ ಸಾಧನೆ ಶೂನ್ಯವಾಗಿದೆ. ಈ ಹಿಂದೆ ಅವಳಿ ತಾಲೂಕುಗಳ ಕೆರೆಗಳ ನೀರು ತಂಬಿಸಲು ಸುಮಾರು ₹519 ಕೋಟಿ ಹಣ ಮಂಜೂರು ಮಾಡಿಸಿದ್ದು, 5 ಏತನೀರಾವರಿ ಘಟಕಗಳಿಗೆ ಚಾಲನೆ ನೀಡಲಾಗಿತ್ತು, ಕೆಲವೊಂದು ವಿದ್ಯುತ್ ಸಂಪರ್ಕ ಬಾಕಿ ಕೆಲಸವಾಗಬೇಕಿದ್ದು, ತಾಲೂಕಿನ ಸುಮಾರು 130 ಕೆರೆ ತುಂಬಿಸುವ ಯೋಜನೆ ತಮ್ಮ ಅಧಿಕಾರವಾಧಿಯಲ್ಲಿ ಮಂಜೂರು ಮಾಡಿಸಲಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.ಹೊನ್ನಾಳಿ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ನೀರು ಸಂಗ್ರಹ ಟ್ಯಾಂಕ್‌ಗಳು ಸೇರಿದಂತೆ ಪೈಪ್ ಲೈನ್ ಮುಂತಾದ ಕಾಮಗಾರಿಗಳಿಗಾಗಿ ಒಟ್ಟು ₹37 ಕೋಟಿ ಬಿಜೆಪಿ ಸರ್ಕಾರದಿಂದ ಈ ಹಿಂದೆ ಅನುದಾನ ಮಂಜೂರು ಮಾಡಿಸಲಾಗಿತ್ತು, ಇದೇ ರೀತಿ ನ್ಯಾಮತಿ ತಾಲೂಕಿಗೆ ₹44 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಹಾಗೂ ₹30 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿಗಳಿಗಾಗಿ ತಮ್ಮ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಿಸಲಾಗಿತ್ತು, ನಗರೋತ್ಥಾನ ಯೋಜನೆಯಡಿ. ಹೊನ್ನಾಳಿಗೆ ₹11 ಕೋಟಿ ಹಾಗೂ ನ್ಯಾಮತಿ ತಾಲೂಕಿಗೆ ₹6 ಕೋಟಿ ಹೀಗೆ ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು ಎಂದು ವಿವರಿಸಿದರು.
- - --22ಎಚ್.ಎಲ್.ಐ1:
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ನೆರೆಪೀಡಿತ ಪಟ್ಟಣದ ಬಾಲರಾಜ್ ಘಾಟ್ ಪ್ರದೇಶಕ್ಕೆ ಭೇಟಿ ನೀಡಿ, ಕುಟುಂಬಗಳ ಪರಿಸ್ಥಿತಿ ಅವಲೋಕನ ನಡೆಸಿದರು.