ಕಾವೇರಿ ಬೃಂದಾವನದಲ್ಲಿ ಅಮ್ಯೂಸ್‌ ಮೆಂಟ್ ಪಾರ್ಕ್ ನಿರ್ಮಾಣ: ಡಿಸಿಎಂ ಡಿ.ಕೆ.ಶಿವಕುಮಾರ್

KannadaprabhaNewsNetwork | Updated : Jul 23 2024, 01:20 PM IST

ಸಾರಾಂಶ

ಕಾವೇರಿ ಬೃಂದಾವನವನ್ನು ಅಮ್ಯೂಸ್‌ಮೆಂಟ್ ಪಾರ್ಕ್ ಹೆಸರಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

 ಮಂಡ್ಯ : ಕಾವೇರಿ ಬೃಂದಾವನವನ್ನು ಅಮ್ಯೂಸ್‌ಮೆಂಟ್ ಪಾರ್ಕ್ ಹೆಸರಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ಭರ್ತಿಯ ಹಂತದಲ್ಲಿರುವ ಕೃಷ್ಣರಾಜಸಾಗರ ಜಲಾಶಯಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನಮ್ಮ ‘ಬ್ರಾಂಡ್ ನೇಮ್’. ಅದನ್ನು ಉಳಿಸಿಕೊಂಡು ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ನೀಡಿ ಸುಮಾರು ೧೦ ಸಾವಿರ ಪ್ರವಾಸಿಗರಿಗೆ ಅಗತ್ಯವಿರುವ ಮನರಂಜನೆ, ವಸತಿ, ಪಾರ್ಕಿಂಗ್ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು ಹತ್ತು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.

ಕೆಆರ್‌ಎಸ್‌ ಅಣೆಕಟ್ಟೆ ಹಾಗೂ ಕಾವೇರಿ ಬೃಂದಾವನವು ರಾಜಧಾನಿ ಬೆಂಗಳೂರಿನಿಂದ ಸುಮಾರು 150 ಕಿ.ಮೀ. ದೂರವಿದ್ದು, ಕೇವಲ ಒಂದೂವರೆ ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾಗಿದೆ. ಕೆಆರ್‌ಎಸ್, ರಂಗನತಿಟ್ಟು, ಮೈಸೂರು ಹಾಗೂ ನೆರೆಯ ಊಟಿ ಸೇರಿದಂತೆ ಹಲವಾರು ಪ್ರವಾಸೋದ್ಯಮ ಸ್ಥಳಗಳನ್ನು ಸಂಪರ್ಕಿಸುವ ಕೇಂದ್ರ ಸ್ಥಾನವಾಗಿ ಹೊರಹೊಮ್ಮಲಿದೆ ಎಂದು ವಿವರಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಅಮ್ಯೂಸ್ ಮೆಂಟ್ ಪಾರ್ಕ್ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆ ಕಾರ್ಯಗತಗೊಳಿಸಲು ಸ್ಥಳೀಯವಾಗಿ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಇಲ್ಲಿರುವ ಸರ್ಕಾರಿ ಜಮೀನು ಸಾಕು. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಡಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಟ್ರಯಲ್ ಬ್ಲಾಸ್ಟ್‌ಗೆ ಸರ್ಕಾರದಿಂದ ಯಾವುದೇ ಅನುಮತಿ, ಅವಕಾಶ ನೀಡುವುದಿಲ್ಲ. ನಮಗೆ ಕಲ್ಲು ಗಣಿಗಾರಿಕೆಗಿಂತಲೂ ಅಣೆಕಟ್ಟು ಸುರಕ್ಷತೆಯೇ ಮುಖ್ಯ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವರೆಲ್ಲರ ಸಭೆ ಕರೆತು ಆ ವಿಷಯವಾಗಿ ತೀರ್ಮಾನಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದರು.

ರೈತರ ಹಿತ ಕಾಪಾಡಿದ್ದೇವೆ:

ವರುಣನ ಕೃಪೆ, ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಈ ಬಾರಿ ಉತ್ತಮ ಮಳೆಯಾಗಿದೆ. ನಾವೆಲ್ಲಾ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಶುಭದಿನ ಬಂದಿದೆ. ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ರೈತರ ಹಿತ ಕಾಪಾಡುವ ಕೆಲಸ ಮಾಡಿದ್ದೇವೆ. ಆ ಸಮಯದಲ್ಲಿ ೨೦೦ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿದ್ದವು ಎಂದರು.

ಈ ಬಾರಿಯೂ ಮಳೆ ಬರುವ ಮುನ್ನ ಕಾವೇರಿ ನೀರು ನಿರ್ವಹಣಾ ಸಮಿತಿಯವರು 40 ಟಿಎಂಸಿ ನೀರು ಹರಿಸಲು ಶಿಫಾರಸು ಮಾಡಿತು. ಆದರೂ ರೈತರು, ಜನರ ಹಿತದೃಷ್ಟಿಯಿಂದ ನಾವು ನೀರು ಬಿಡಲಿಲ್ಲ. ಕೆಲವರು ಬಿಟ್ಟಿದ್ದಾರೆಂದು ವಾದ ಮಾಡಿದರು. ನಾವೆಲ್ಲರೂ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಿ ರೈತರ ಹಿತ ಕಾಯುವ ಕೆಲಸ ಮಾಡಿರುವುದಾಗಿ ಹೇಳಿದರು.

ಸಾಮಾನ್ಯ ದಿನಗಳಲ್ಲಿ ೪೦.೪೩ ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಈವರೆಗೆ 30 ಟಿಎಂಸಿ ನೀರು ನೆರೆ ರಾಜ್ಯಕ್ಕೆ ಹರಿದುಹೋಗಿದೆ. ಇನ್ನು ೧೦ ಟಿಎಂಸಿ ನೀರು ಬಿಡುಗಡೆ ಮಾಡಿದರೆ ನಮ್ಮ ಪಾಲಿನ ನೀರು ತಲುಪಲಿದೆ. ೫೦ ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯಬಿಟ್ಟಿದ್ದು, ೩೧ರಿಂದ ಇಲ್ಲಿವರೆಗೆ ನಾವು ಆದೇಶ ಪಾಲನೆ ಮಾಡಿದ್ದೇವೆ ಎಂದು ವಿವರಿಸಿದರು.

ಕೆರೆಗಳನ್ನು ತುಂಬಿಸಲು ಸೂಚನೆ:

ಕಾವೇರಿ ಜಲಾನಯನ ಪ್ರದೇಶದಲ್ಲಿ ೧೬೫೭ ಕೆರೆಗಳಿವೆ. ಆ ಎಲ್ಲಾ ಕೆರೆಗಳನ್ನ ತುಂಬಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಅದನ್ನು ಸಮರ್ಪಕವಾಗಿ ಕೆರೆ ತುಂಬಿಸುವ ಕೆಲಸವನ್ನುಉ ಅವರು ಮಾಡುತ್ತಾರೆ. ಜಿಲ್ಲೆಯ ೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದೇವೆ. ಅದಕ್ಕೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಇವೆ. ರೈತರಿಗೆ ಶೂನ್ಯ ಬಡ್ಡಿದರದ ಸಾಲ ವಿತರಣೆಗೂ ಸರ್ಕಾರ ಸಜ್ಜಾಗಿದ್ದು, ನಮ್ಮದು ರೈತರ ಪರ ಸರ್ಕಾರ. ಅವರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದರು.

ಪರಿಶೀಲನೆಯ ವೇಳೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸಾಮಿ, ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ, ಶಾಸಕರಾದ ಕೆ.ಎಂ.ಉದಯ್, ದರ್ಶನ್ ಪುಟ್ಟಣಯ್ಯ, ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಅಧೀಕ್ಷಕ ಎಂಜಿನಿಯರ್ ರಘುರಾಮ್ ಇತರರಿದ್ದರು.

‘ಯಾರಿಗೋ ಉತ್ತರ ಕೊಡುವ ಅವಶ್ಯಕತೆ ಇಲ್ಲ’ ಎಚ್‌ಡಿಕೆ ಕುರಿತು ಡಿ.ಕೆ.ಶಿವಕುಮಾರ್ ವ್ಯಂಗ್ಯ

ಯಾರೋ ಮಾತನಾಡುತ್ತಾರೆಂಬ ಕಾರಣಕ್ಕೆ ನಾನು ಮಾತನಾಡುವುದಿಲ್ಲ. ಕೆಲವರಿಗೆ ಪ್ರಚಾರ ಬೇಕು ಅದಕ್ಕೋಸ್ಕರ ಮಾತನಾಡುತ್ತಾರೆ. ನನಗೆ ಅದರ ಅವಶ್ಯಕತೆ ಇಲ್ಲ. ಹಾಗಾಗಿ ನಾನು ಯಾರಿಗೋ ಉತ್ತರ ಕೊಡುವ ಅಗತ್ಯವೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೆಸರೇಳದೆ ವ್ಯಂಗ್ಯವಾಡಿದರು.

ಸರ್ವಪಕ್ಷಗಳ ಸಭೆಗೂ ಮೊದಲೇ ಡ್ಯಾಂನಿಂದ ನೀರು ಬಿಡುಗಡೆ ಮಾಡಿರುವ ಕುರಿತು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ರೆಯೇ ಬರೋಲ್ಲ. ಏನು ಮಾಡೋದು. ಹಾಗಾಗಿ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಕರ್ತವ್ಯವೇನೆಂದು ನನಗೆ ಗೊತ್ತಿದೆ. ನಾನುಂಟು- ರೈತರುಂಟು, ನಾನುಂಟು-ರಾಜ್ಯವುಂಟು. ಮೇಕೆದಾಟು ಪ್ರಸ್ತಾವನೆ ಮುಂದುವರೆಸುವ ಬಗ್ಗೆ ಕಾಲ ಅದಕ್ಕೆ ಉತ್ತರಿಸುತ್ತದೆ. ಈಗ ಅದರ ಬಗ್ಗೆ ಮಾತನಾಡುವುದಿಲ್ಲ ಎಂದಷ್ಟೇ ಹೇಳಿದರು.

Share this article