ಕನ್ನಡಪ್ರಭ ವಾರ್ತೆ ಲಿಂಗಸುಗೂರು
ರಾತ್ರಿಯಿಡಿ ಮಳೆ ಸುರಿದ ಪರಿಣಾಮ ಲಿಂಗಸುಗೂರು ಪಟ್ಟಣದ ಪಿಂಚಣಿಪುರದಲ್ಲಿನ ಮನೆಗಳಿಗೆ ನುಗ್ಗಿದ ಹಳ್ಳದ ನೀರಿನಿಂದ ನಾಗರೀಕರಿಗೆ ತೀವ್ರ ತೊಂದರೆ ಉಂಟುಮಾಡಿದೆ. ಮನೆಯಲ್ಲಿದ್ದ ದವಸ-ದಾನ್ಯಗಳು, ಆಹಾರ ಪದಾರ್ಥಗಳು ಮಳೆ ನೀರಿನಲ್ಲಿ ತೇಲಾಡಿದ್ದು, ಚರಂಡಿಗಳು ಬಂದ್ ಆಗಿದ್ದರಿಂದ ಮಳೆ ನೀರು ರಸ್ತೆಗಳಲ್ಲಿ ನಿಂತ ಪರಿಣಾಮ ಜನರು ಮನೆಯಿಂದ ಹೊರ ಬರಲು ಭಯದ ವಾತಾವರಣ ನಿರ್ಮಾಣವಾಗಿತ್ತು.
ಮಹಿಳೆಯರು, ಮಕ್ಕಳು ಸೇರಿದಂತೆ ತೀವ್ರ ಸಂಕಷ್ಟಕ್ಕೀಡಾದರು ಮನೆಗೆ ನೀರು ನುಗ್ಗಿ ಬದುಕು ನೀರಿಗೆ ಹರಿದುಕೊಂಡು ಹೋದರು ಸಹಿತ ನೆರವಿಗೆ ಯಾರು ಬಂದಿಲ್ಲ. ನಾವು ದುಡಿದು ತಿನ್ನುವ ಜನರು, ಮಳೆಯ ನೀರು ಸಮರ್ಪಕವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೇ ಇರುವುದರಿಂದ ಹಿಟ್ಟು, ಖಾರ, ಸೇರಿ ಜೀವನಾವಶ್ಯಕ ವಸ್ತುಗಳು ನೀರಿನಲ್ಲಿ ಹರಿದು ಹೋಗಿವೆ. ವಾರದ ಸಂತೆಗೆ 15 ದಿನಗಳು ದುಡಿದರೆ ಊಟ ಸಿಗುತ್ತದೆ. ಈಗ ಮಳೆಗೆ ವಸ್ತುಗಳೆಲ್ಲ ಹರಿದು ಹೋಗಿದೆ. ಹೀಗಾದರೇ ನಾವು ಹೇಗೆ ಜೀವನ ಮಾಡಬೇಕು ಎಂದು ಪಿಂಚಣಿಪುರದ ನಿವಾಸಿಗಳಾದ ಶಾಂತಮ್ಮ ಹಾಗೂ ಹುಸೇನಬಿ ಹತಾಶೆಯಿಂದ ಹೇಳಿದರು.ಸುರಿದ ಮಳೆ ನೀರು ಪಟ್ಟಣದ ಡಿವೈಎಸ್‌ಪಿ ಕಚೇರಿ ಎದುರಿನ ಕೆರೆಗೆ ಹರಿದು ಹೋಗುತ್ತದೆ. ಆದರೆ ಮಳೆಯ ನೀರಿನ ಹರಿವಿಗೆ ಅಡ್ಡಲಾಗಿ ಉದ್ಯಾನವನ ನಿರ್ಮಿಸಿದ್ದರಿಂದ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೇ ಕಾರಣ ಹೆದ್ದಾರಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಪರಿಣಾಮ ಮಹಿಳೆಯರು ವಾಹನಗಳನ್ನು ತೆಗದುಕೊಂಡು ಹೋಗಲು ಹರಸಾಹಸಪಟ್ಟರು.
ವರದಿಯ ಪ್ರಕಾರ ಲಿಂಗಸುಗೂರಲ್ಲಿ ಅತೀ ಹೆಚ್ಚು 98.4 ಮಿಮೀ, ಹಟ್ಟಿ 89 ಮಿಮೀ, ಗುರುಗುಂಟಾ 53 ಮಿಮೀ, ಮುದಗಲ್ 23.4 ಮಿಮೀ ಮಳೆ ಆಗಿದೆ.