ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರ ಜೇಬಿಗೆ : ಶಾಸಕ ಎಂ. ಟಿ. ಕೃಷ್ಣಪ್ಪ ಆರೋಪ

KannadaprabhaNewsNetwork | Updated : Feb 06 2025, 12:40 PM IST

ಸಾರಾಂಶ

ರಾಜ್ಯದ ಜನತೆ ನೀಡುವ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರ ಜೇಬು ಸೇರುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ ಮಾಡಿದ್ದಾರೆ.

 ತುರುವೇಕೆರೆ : ರಾಜ್ಯದ ಜನತೆ ನೀಡುವ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರ ಜೇಬು ಸೇರುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ ಮಾಡಿದ್ದಾರೆ.

 ಪತ್ರಕಕರ್ತರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಚುನಾವಣೆಗೆ ಮೊದಲು ತಾನು ಅಧಿಕಾರಕ್ಕೆ ಬರಲು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಮತದಾರರಿಗೆ ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿತು. ಈಗ ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ರಾಜ್ಯಾದ್ಯಂತ ಸರ್ಕಾರ ತನ್ನ ಕಾರ್ಯಕರ್ತರನ್ನು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಮಾಡಿದೆ. ಈ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಮಾಸಿಕ ಗೌರವ ಧನ ನೀಡಲಾಗುತ್ತಿದೆ. ಇದು ಸಾರ್ವಜನಿಕರ ಹಣದ ದುರ್ಬಳಕೆಯಾಗುತ್ತಿದೆ ಎಂದು ಕೃಷ್ಣಪ್ಪ ಕಿಡಿಕಾರಿದರು.

ಸರ್ಕಾರ ಜಾರಿಗೆ ತರುವ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಿ ಅಧಿಕಾರಿಗಳು ಇದ್ದಾರೆ. ಅದಕ್ಕೆಂದೇ ಸರ್ಕಾರಗಳು ಸಂಬಳ ನೀಡುತ್ತಿದೆ. ಅದರ ಮಧ್ಯೆಯೂ ತಮ್ಮ ಪಕ್ಷದ ಕಾರ್ಯಕರ್ತರ ಜೇಬು ತುಂಬಿಸಲು ಅನುಷ್ಠಾನ ಸಮಿತಿ ಮಾಡಿರುವುದು ಕಾನೂನಾತ್ಮಕವಾಗಿ ತಪ್ಪು. ಸಾರ್ವಜನಿಕರ ಹಣ ಅನ್ಯಥಾ ವ್ಯಯ ಮಾಡುವುದು ಅಕ್ಷಮ್ಯ ಅಪರಾಧ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ಅಥವಾ ಇಡಿ ಇಲಾಖೆಯವರು ಸ್ವಯಂ ಪ್ರೇರಣೆಯಿಂದ ದಾಖಲಿಸಿಕೊಂಡು ತನಿಖೆ ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು. 

ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ಅಧಿಕ ಬಡ್ಡಿ ವಸೂಲು ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ತಾಲೂಕಿನಲ್ಲಿ ಯಾವುದೇ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾರ್ವಜನಿಕರಿಗೆ ಕಿರುಕುಳ ನೀಡಿದರೆ ಅಂತಹ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾವು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಪರಮೇಶ್, ಮಾದಿಹಳ್ಳಿ ಕಾಂತರಾಜ್, ಮುನಿಯೂರು ರಂಗಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕುಮಾರ್ ಉಪಸ್ಥಿತರಿದ್ದರು.

Share this article