ಕಾಂಗ್ರೆಸ್ ಕಚೇರಿಗಳಿಂದಲೇ ಕೋಮುವಾದ ಜನ್ಮ । ಕಾಂಗ್ರೆಸ್ ಸರ್ಕಾರದ ಪತನ ಆರಂಭ
ಕಾಂಗ್ರೆಸ್ ಸರ್ಕಾರ ಧರ್ಮ, ದೇಶ, ಸಂವಿಧಾನಕ್ಕೆ ನಿರಂತರವಾಗಿ ಅಪಚಾರ ಮಾಡುತ್ತಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಜನರೇ ಸರ್ಕಾರದ ವಿರುದ್ಧ ದಂಗೆಯೇಳುವ ಕಾಲ ದೂರವಿಲ್ಲ ಎಂದು ಬಿಜೆಪಿ ಮುಖಂಡ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಘಟನೆಗೆ ಕಾರಣರಾದ ಮುಸ್ಲಿಂ ಗೂಂಡಾಗಳ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು. ಇದೀಗ ಹೈಕೋರ್ಟ್ ಈ ರೀತಿ ವಾಪಸ್ ತೆಗೆದುಕೊಂಡಿರುವ ಸಚಿವ ಸಂಪುಟದ ತೀರ್ಮಾನ ಸರಿಯಲ್ಲ ಎಂದು ಛೀಮಾರಿ ಹಾಕಿದೆ ಎಂದು ಕುಟುಕಿದರು.ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ಮಾಡಿದಂತಹ ಮುಸ್ಲಿಂ ಗೂಂಡಾಗಳ ಪರ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದೇ ತಪ್ಪು. ಸಚಿವ ಸಂಪುಟ ಸಭೆ ಎಂದರೆ ಮಕ್ಕಳು ಗೋಲಿ ಆಟವಾಡುವ ಜಾಗವಲ್ಲ. ಈಗ ಹೈಕೋರ್ಟ್ ಈ ತೀರ್ಮಾನದ ವಿರುದ್ಧ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಇದು ಮುಸ್ಲಿಂ ಗೂಂಡಾಗಳನ್ನು ರಕ್ಷಿಸುವ ತೀರ್ಮಾನವಾಗಿದೆ. ಅಲ್ಲದೇ, ಸಂವಿಧಾನಬಾಹಿರ ಕೂಡ. ಇನ್ನಾದರೂ ಕಾಂಗ್ರೆಸ್ ಸರ್ಕಾರ ಪಾಠ ಕಲಿಯಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕನ ಕೊಲೆಯಾಗಿದೆ. ಇದು ತಪ್ಪು. ಇದನ್ನು ಯಾರೂ ಒಪ್ಪುವುದಿಲ್ಲ. ಆದರೆ, ಈ ಹಿಂದೆ ಹಿಂದೂಗಳ ಕೊಲೆಗಳು ನಡೆದವಲ್ಲ, ಆಗ ಹೋರಾಟ ಮಾಡಿದವರೆಲ್ಲ ಎಲ್ಲಿ ಹೋಗಿದ್ದರು? ಮುಸ್ಲಿಂ ಮುಖಂಡರು ಈಗ ತಾವು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ಕೊಡುತ್ತೇವೆ ಎಂದ ಮೇಲೆ ಸರ್ಕಾರಕ್ಕೆ ಬುದ್ದಿ ಬರುತ್ತದೆಯೇ? ಹಿಂದೂಗಳ ಹತ್ಯೆಯಾದಾಗ ಇವರೆಲ್ಲ ಎಲ್ಲಿ ಹೋಗಿದ್ದರು? ಇದೆಲ್ಲಾ ಬಹಳ ದಿನ ಉಳಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದಲ್ಲಿ ಈಗ ಗೊಂದಲಗಳು ಆರಂಭವಾಗಿವೆ. ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಡಿಸಿಎಂ ಮಧ್ಯೆ ಭಿನ್ನಾಭಿಪ್ರಾಯಗಳು ಬಯಲಾಗಿವೆ. ಇದು ಕಾಂಗ್ರೆಸ್ ಪತನದ ಪ್ರಥಮ ಹೆಜ್ಜೆಯಾಗಿದೆ ಎಂದರು.
ಸರ್ಕಾರ ಯಾವಾಗ ಪತನ ಆಗುತ್ತೋ ಗೊತ್ತಿಲ್ಲ?