ಪಾಲಿಕೆಯಲ್ಲಿ ಲಂಚ ಕೊಡದೆ ಜನರ ಕೆಲಸಗಳೇ ಆಗುತ್ತಿಲ್ಲ: ಕೆ.ಬಿ.ಪ್ರಸನ್ನಕುಮಾರ್ ಆರೋಪ

KannadaprabhaNewsNetwork |  
Published : May 08, 2026, 01:45 AM IST
ಪೋಟೋ: 07ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಂಚ ಕೊಡದೆ ಜನಸಾಮಾನ್ಯರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಂಚ ಕೊಡದೆ ಜನಸಾಮಾನ್ಯರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯವರು ಜನಸ್ನೇಹಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಆರು ವಲಯಗಳನ್ನು ಮಾಡಿದೆ. ಆದರೆ ಅಧಿಕಾರಿಗಳು-ಸಿಬ್ಬಂದಿಗಳ ಲಂಚಾವತಾರಕ್ಕೆ ಜನರು ಹೈರಾಣಾಗಿದ್ದಾರೆ ಎಂದು ಆರೋಪಿಸಿದರು.

ಹಣಕೊಡದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಫೈಲುಗಳು ಅಲ್ಲೇ ಉಳಿದುಕೊಳ್ಳುತ್ತಿವೆ. ಯಾರಾದರು ಅಧಿಕಾರಿಗಳು ಮೂರು-ನಾಲ್ಕು ದಿನ ರಜೆಹಾಕಿ ಹೋದರೆ ಅವರ ಬದಲು ಬೇರೆಯವರು ಕೆಲಸವನ್ನು ಮಾಡುವುದಿಲ್ಲ, ಅವರೇ ಬರಬೇಕು. ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಇದರ ಜೊತೆಗೆ ಪಾಲಿಕೆಯ ಸಮಸ್ಯೆಗಳು ಕೂಡ ಮಿತಿಮೀರಿವೆ. ಅಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದೆ. 24 ಗಂಟೆ ಇರಲಿ, ಅರ್ಧಗಂಟೆಯೂ ನೀರು ಬರುವುದಿಲ್ಲ. ವಿದ್ಯುತ್ ದೀಪಗಳದ್ದು ಮತ್ತೊಂದು ಸಮಸ್ಯೆ ಹೀಗಾಗಿ ಪಾಲಿಕೆ ಸಮಸ್ಯೆಗಳ ಆಗರವಾಗಿದೆ ಎಂದು ದೂರಿದರು.

ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಬಗ್ಗೆ ಚರ್ಚೆ ನಡೆಯುತ್ತಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಸಂಚಾರಿ ಪೀಠ ಸ್ಥಾಪನೆಗೆ ಯೋಗ್ಯವಾದ ಸ್ಥಳ. ಮಧ್ಯ ಕರ್ನಾಟಕದ ಜನತೆಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಹೈಕೋರ್ಟ್ ಸಂಚಾರಿಪೀಠ ಶಿವಮೊಗ್ಗದಲ್ಲಿಯೇ ಆಗಬೇಕೆಂಬುದು ನಮ್ಮ ಪಕ್ಷದ ಒತ್ತಾಯವಾಗಿದೆ. ಯಾವುದೇ ಕಾರಣಕ್ಕೂ ಮಂಗಳೂರಿನಲ್ಲಿ ಆಗುವುದು ಬೇಡ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ವಕೀಲರ ಸಂಘದಿಂದ ಹೈಕೋರ್ಟ್ ಪೀಠಕ್ಕೆ ಹೋರಾಟ ನಡೆಯುತ್ತಿದೆ. ನಾವು ಕೂಡ ಇದಕ್ಕೆ ಬೆಂಬಲ ನೀಡುತ್ತೇವೆ ಎಂದರು.

ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ದಿ.ಬಂಗಾರಪ್ಪನವರ ಹೆಸರಿಟ್ಟಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಕೇವಲ ಹೆಸರಿಟ್ಟರೆ ಸಾಲದು ಸಚಿವ ಮಧುಬಂಗಾರಪ್ಪ ಅವರು ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಗೋವಿಂದಾಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹಣ ಕಟ್ಟಿದ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಬೇಕು. ಬಹಳ ಬೇಗ ಇದಕ್ಕೆ ಇತೀಶ್ರೀ ಹಾಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿ, ನಾನು ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಇಡೀ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದೇನೆ. ಮತ್ತು ಜಿಲ್ಲೆ, ತಾಲೂಕು, ಗ್ರಾಮಾಂತರ ಮಟ್ಟದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದೇನೆ. ವಿಧಾನಸಭಾ ಕ್ಷೇತ್ರಕ್ಕೂ ಕೂಡ ಸಮಿತಿ ಮಾಡಿದ್ದು, ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ. ವಿವಿಧ ವಿಭಾಗಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಸುಮಾರು 74ಕ್ಕೂ ಹೆಚ್ಚು ವಿವಿಧ ವಿಭಾಗಗಳಲ್ಲಿ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರಲ್ಲದೆ, ಪಟ್ಟಿ ಬಿಡುಗಡೆ ಮಾಡಿದರು. ಮುಖ್ಯವಾಗಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ದಾದಾಪೀರ್ ಹಾರ್‍ನಹಳ್ಳಿ, ನರಸಿಂಹ ಗಂಧದ ಮನೆ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಆರ್.ತ್ಯಾಗರಾಜ್, ಖಜಾಂಚಿಯಾಗಿ ರಮೇಶ್ ಬಿ.ನಾಯಕ್ ಆಯ್ಕೆಯಾಗಿದ್ದಾರೆ.

ಉಳಿದಂತೆ ಹಿರಿಯ ಉಪಾಧ್ಯಕ್ಷರನ್ನಾಗಿ 11 ಜನರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರನ್ನಾಗಿ 15 ಜನರನ್ನು ನೇಮಕ ಮಾಡಲಾಗಿದ್ದು, ಸುಮಾರು 14 ಜನರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಸಂಘಟನಾ ಕಾರ್ಯದರ್ಶಿಯಾಗಿ 10 ಜನರ ನೇಮಕವಾಗಿದೆ. ಕಾರ್ಯದರ್ಶಿಯಾಗಿ ಇಬ್ಬರನ್ನು ನೇಮಕ ಮಾಡಲಾಗಿದ್ದು, ಇದರ ಜೊತೆಗೆ ವಿವಿಧ ವಿಭಾಗಗಳ ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರನ್ನಾಗಿ ಸುಮಾರು 13 ಜನರನ್ನು ನೇಮಕ ಮಾಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಗೀತಾ ಸತೀಶ್, ಕಡಿದಾಳ್ ಗೋಪಾಲ್, ಎಚ್.ಆರ್.ತ್ಯಾಗರಾಜ್, ರಾಕೇಶ್ ಡಿಸೋಜಾ, ಗಂಧದಮನೆ ನರಸಿಂಹ, ಎಚ್.ಎಂ.ಸಂಗಯ್ಯ, ಉಮಾಶಂಕರ ಉಪಾಧ್ಯಾಯ, ಲೋಹಿತ್, ಪ್ರಜ್ವಲ್ ಸೇರಿದಂತೆ ಮೊದಲಾದವರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೃಹದಾಕಾರವಾಗಿ ಬೆಳೆದ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ: ಬೆಮ್ಮನೆ ದಯಾನಂದ್
ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಿ