ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ವಿನೂತನ ಕಾರ್ಯಕ್ರಮ । ಸಮ್ಮರ್ ಕ್ಯಾಂಪ್ ಪರಿಕಲ್ಪನೆಯಡಿ ಬೇಸಿಗೆ ಬೆಸುಗೆ ।
ಕನ್ನಡಪ್ರಭ ವಾರ್ತೆ ಕಡೂರು
ನಗರ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸಮ್ಮರ್ ಕ್ಯಾಂಪ್ ಪರಿಕಲ್ಪನೆಯಡಿ ರಾಜ್ಯ ಸರ್ಕಾರ ಆಯೋಜಿಸಿರುವ ಮಹತ್ವಾಕಾಂಕ್ಷಿ ವಿನೂತನ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಶಾಲೆಗೆ ರಜೆ ಇರುವ ಸಮಯದಲ್ಲಿ ಮಕ್ಕಳನ್ನು ಹೆಚ್ಚು ಕ್ರೀಯಾಶೀಲವಾಗಿರಿಸಲು ಸಹಾಯಕವಾಗುವ ರೀತಿಯಲ್ಲಿ ಈ ಬೇಸಿಗೆ ಬೆಸುಗೆ ಎಂಬ ಕಾರ್ಯಕ್ರಮ ಆಯೋಜಿಸಿ ಮಕ್ಕಳು ಕಲಿತ ಶಿಕ್ಷಣ ಮರೆಯದಂತೆ ಮೊಬೈಲ್ ಮತ್ತು ಟಿ.ವಿ.ಯಿಂದ ದೂರವಿಡುವ ಸದುದ್ದೇಶಹೊಂದಿದೆ.ಈ ಶಿಬಿರದ ಮೂಲಕ ಕಲಿತ ಶಿಕ್ಷಣದ ಜೊತೆ ಗ್ರಾಮೀಣ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಿ ಸಾಂಪ್ರದಾಯಿಕ ಆಟೋಟ ಗಳನ್ನು ಆಡಿ ಖುಷಿ ಅನುಭವಿಸುವಂತೆ ಮಾಡಲು ಹಾಗೂ ಮುಂದಿನ ತಲೆಮಾರಿಗೂ ಇವುಗಳ ಮಹತ್ವ ತಿಳಿಸಿ, ಉಳಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮ ಮೆಚ್ಚುಗೆಗೂ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತೀ ಜಿಪಂ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಮೂಲಕ ಈ ಬೇಸಿಗೆ ಬೆಸುಗೆ ಶಿಬಿರ ಅನುಷ್ಟಾನ ಗೊಳಿಸುತ್ತಿದೆ. ಇದಕ್ಕೆ ಗ್ರಾಮಗಳಲ್ಲಿ ಮಕ್ಕಳಿಗೆ ಮನರಂಜನೆ ಜೊತೆ ಆಟಪಾಟಗಳನ್ನುಆಡಿಸಿ ಸಂತೋಷದಿಂದ ಕಾಲಕಳೆಯುವಂತೆ ರೂಪಿಸಲಾಗಿದೆ. ಈ ಮಾದರಿ ಕಾರ್ಯಕ್ರಮ ಕಡೂರು ತಾಲೂಕಿನಲ್ಲಿ ಯಶಸ್ವಿಯಾಗಿದೆ. ತಾಲೂಕಿನ ಪ್ರತೀ ಗ್ರಾಪಂ ಗ್ರಂಥಾಲಯದ ಅರಿವು ಕೇಂದ್ರಗಳಲ್ಲಿ ಈ ಶಿಬಿರ ನಡೆಯುತ್ತಿದ್ದು. ಏ.16ರಿಂದ ಆರಂಭವಾಗಿರುವ ಶಿಬಿರ ಮೇ 26 ರವರೆಗೆ ನಡೆಯಲಿದೆ. ಒಟ್ಟು 50 ದಿನಗಳ ಶಿಬಿರಇದಾಗಿದ್ದು. ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹಳ್ಳಿಗಾಡಿನ ಮಕ್ಕಳು ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಒಂದು ವೇಳೆ ಮಕ್ಕಳು ಅಜ್ಜಿಮನೆಗೆ ಎಂದು ಬೇರೆ ಗ್ರಾಮಕ್ಕೆ ಹೋದರು ಈ ಶಿಬಿರ ತಪ್ಪಿಸಿಕೊಳ್ಳುವ ಬೇಸರವೇ ಇಲ್ಲ. ತಮ್ಮ ಗ್ರಾಮದ ಶಿಬಿರದಿಂದ ಕೊಡುವ ಐಡಿ ತಂದರೆ ಇವರು ಬೇರೆ ಗ್ರಾಮದ ಶಿಬಿರದಲ್ಲೂ ಭಾಗವಹಿಸಲು ಅವಕಾಶವಿರುವುದು ಮಕ್ಕಳಿಗೆ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಿಲ್ಲ. ಈ ಮಕ್ಕಳಿಗೆ ಸಂಪನ್ನೂಲ ವ್ಯಕ್ತಿಗಳಿಂದ ಉಪನ್ಯಾಸ , ಕಲಿಕೆ, ಲಗೋರಿ, ಗೋಲಿ, ಚಿಣಿಮಣಿ, ಕಬ್ಬಡಿ,ಕೊಕೊ ಸೇರಿದಂತೆ ಹಿಂದಿನ ಆಟಗಳನ್ನು ಪರಿಚಯಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದಂತೆ ಕಡೂರು ತಾಲೂಕಿನ 60 ಗ್ರಾಮ ಪಂಚಾಯ್ತಿಗಳಲ್ಲೂ ಶಿಬಿರ ಅನುಷ್ಟಾನಗೊಂಡಿದೆ. ಪ್ರತೀ ಗ್ರಾಪಂ ಗ್ರಂಥಾಲಯಗಳ ಅರಿವು ಕೇಂದ್ರಗಳಲ್ಲಿ ಸ್ವಯಂ ಸೇವಕರು, ಶಿಕ್ಷಕರು, ನಿವೃತ್ತ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಅಂಕಿ ಸಂಖ್ಯೆ, ಸಂವಹನ, ಕೌಶಲ್ಯತೆ ಬಳಸಿ ಓದುವುದು, ಬರೆಯುವುದು, ನಾಯಕತ್ವ ಬೆಳೆಸಿಕೊಳ್ಳಲು ಶಿಬಿರ ಸಹಕಾರಿ. ಪರಿಸರ, ಸಾಮಾಜಿಕ ಕಾಳಜಿ, ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ,ಇತಿಹಾಸ ಮಕ್ಕಳಲ್ಲಿರುವ ಸೃಜನಾತ್ಮಕ ಗುಣ ಬೆಳೆಸುವುದು ಇದರ ಮೂಲ ಉದ್ದೇಶ. ತಾಲೂಕಿನಲ್ಲಿ ಈ ಶಿಬಿರ ಮೇ 26 ರವರೆಗೆ ನಡೆಯಲಿದೆ.
ತಾಲೂಕಿನಲ್ಲಿ 12 ಕ್ಲಸ್ಟರ್ ಗಳಿದ್ದು, 12 ವರ್ಷದ ಮಕ್ಕಳಿಗೆ ಛಾಯಾಚಿತ್ರ ಮತ್ತು ತರಬೇತಿಗೆ ಪ್ರತಿ ಗ್ರಾಪಂನಲ್ಲಿ 20 ರಿಂದ 80 ಮಕ್ಕಳು ಭಾಗವಹಿಸುತ್ತಿರುವುದು ವಿಶೇಷ. ದಾನಿಗಳ ಸಹಕಾರದಿಂದ ಊಟ ಮತ್ತು ಸ್ನಾಕ್ಸ್ ಕೂಡ ನೀಡಲಾಗುತ್ತಿದೆ. ಒಟ್ಟಾರೆ ರಾಜ್ಯ ಸರ್ಕಾರದ ಮಹ್ವಾಕಾಂಕ್ಷಿ ಯೋಜನೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. --ಹೇಳಿಕೆ-- ತಾಲೂಕಿನ ಪ್ರತಿ ಪಂಚಾಯ್ತಿಗಳ ಗ್ರಂಥಾಲಯದ ಅರಿವು ಕೇಂದ್ರಗಳಲ್ಲಿ ಶಿಬಿರ ನಡೆಯುತ್ತಿದೆ. ಶಿಬಿರ ಪ್ರವೇಶಕ್ಕೆ ಮಕ್ಕಳಿಗೆ ಐ.ಡಿ. ಕಾರ್ಡ್ ನೀಡುತಿದ್ದು, ಇದರಿಂದ ಮಕ್ಕಳು ಜಿಲ್ಲೆಯ ಯಾವುದೇ ಗ್ರಾ.ಪಂ.ಗಳ ಶಿಬಿರದಲ್ಲಿ ಸೇರಬಹುದಾಗಿದೆ. ವೇಳಾ ಪಟ್ಟಿಯಂತೆ ಅಜ್ಜಿಯಂದಿರು, ಹಾಡುಗಳು, ಕಥೆ, ಹೇಳುವುದು, ಜನಪದ ಕಲೆ, ಚಿತ್ರಕಲೆ, ಆರೋಗ್ಯ, ಶಿಕ್ಷಣ, ಪಶು ವೈದ್ಯಕೀಯ ಮತ್ತು ವಿವಿಧ ಇಲಾಖೆಯಿಂದ ಸ್ಥಳ ಭೇಟಿ, ದಿನಪತ್ರಿಕೆ, ಪುಸ್ತಕಗಳನ್ನು ಓದುವುದು ಹಾಗು ಮಕ್ಕಳ ಬುದ್ಧಿ ಮತ್ತೆ ಹೆಚ್ಚಲು ಶಿಬಿರ ಸಹಕಾರಿ ಆಗಲಿದೆ. -- ಸಿ.ಆರ್.ಪ್ರವೀಣ್ , ತಾ.ಪಂ. ಕಾರ್ಯ ನಿರ್ವಾಹಕ ಕಡೂರು. 7ಕೆಕೆಡಿಯು1.