ಖಾಜು ಸಿಂಗೆಗೋಳ
ನಗರ ಸಾರಿಗೆ ಸೇವೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ನಗರ ಪ್ರದೇಶದ ಮೂರು ಮಾರ್ಗಗಳಲ್ಲಿ ಆರಂಭಿಸಿರುವ ಬಸ್ ಸೇವೆಯು ಜನಪ್ರಿಯತೆ ನಡುವೆ ಆದಾಯವನ್ನು ತಂದುಕೊಡುತ್ತಿದೆ. ನಗರ ಸಾರಿಗೆ ಪ್ರಾರಂಭಿಸಿ ಈಗ 8 ತಿಂಗಳು ಕಳೆಯುತ್ತಿದೆ. ಪ್ರಾರಂಭದ ದಿನದಿಂದಲೇ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ನಗರ ಪ್ರದೇಶಗಳಲ್ಲಿ ದಿನನಿತ್ಯ 2 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಇದರಿಂದ ಖಾಸಗಿ ಬಸ್, ಟಂಟಂ, ಟೆಂಪೋ ಟ್ರಾವೆಲರ್‌ಗಳಿಗೆ ಅಲ್ಪಮಟ್ಟಿಗೆ ಪೆಟ್ಟುಬಿದ್ದಿದ್ದು, ಖಾಸಗಿ ವಾಹನಗಳ ಓಡಾಟ ಸಂಖ್ಯೆ ಕುಸಿದಿದೆ. ಸಾರ್ವಜನಿಕರು ಖಾಸಗಿ ವಾಹನಗಳತ್ತ ಮುಖ ಮಾಡುವುದು ಕಡಿಮೆಯಾಗಿದ್ದು, ನಗರ ಸಾರಿಗೆ ಬಸ್ಸಿಗಾಗಿ ಕಾಯುತ್ತಿದ್ದಾರೆ.
ಇನ್ನೂ ಬೇಕಿವೆ ಹೆಚ್ಚಿನ ಬಸ್‌ಗಳು:ಪ್ರತಿ ದಿನ ಮೂರು ಮಾರ್ಗಗಳಲ್ಲಿ ನಗರ ಸಾರಿಗೆಯ 2 ಬಸ್ ಓಡಿಸಲಾಗುತ್ತಿದೆ. ಸದ್ಯ ಜನಪ್ರಿಯತೆ ಹೆಚ್ಚಾದಂತೆ ಹೆಚ್ಚಿನ ಬಸ್‌ಗಳ ಬೇಡಿಕೆಯೂ ಜೋರಾಗಿದೆ. ನಗರ ಬಸ್ ನಿಲ್ದಾಣದಿಂದ ಸರ್ಕಾರಿ ವಿಜಯಪುರ ರಸ್ತೆಯ ಆಸ್ಪತ್ರೆ, ಕೆಇಬಿ, ಚರ್ಚ್, ಆದರ್ಶ ಶಾಲೆ, ವಾಟರ್ ಟ್ಯಾಂಕ್ (ಸೇವಾಲಾಲ ಸರ್ಕಲ್), ಸಿಂದಗಿ ರಸ್ತೆಯ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ, ವೀರ ಭಾರತಿ ಶಾಲೆ, ಧನಶೆಟ್ಟಿ ತಾಂಡಾ, ಸಾಲೋಟಗಿ ಹಾಗೂ ರೈಲು ನಿಲ್ದಾಣ ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು, ಪ್ರತಿ 20 ನಿಮಿಷಕ್ಕೊಮ್ಮೆಯಾದರೂ ಈ ಮಾರ್ಗದಲ್ಲಿ ಬಸ್ ಓಡಿಸುವುದು ನಗರ ನಿವಾಸಿಗಳ ಬೇಡಿಕೆಯಾಗಿದೆ.
ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ಯುವಕರು ಸೇರಿದಂತೆ ಸಾಮಾನ್ಯ ಸಾರ್ವಜನಿಕರಿಗೆ ಈ ನಗರ ಸಾರಿಗೆ ಸೇವೆ ಹೆಚ್ಚು ಉಪಯುಕ್ತವಾಗಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ನಗರ ಸಾರಿಗೆಯಿಂದ ಸಂಸ್ಥೆಗೂ ಹಾನಿಯಿಲ್ಲ. ನಗರ ಸಾರಿಗೆ ಬಸ್ ಓಡಾಟಕ್ಕೂ ಕಿಮೀಗೂ ಹೊಂದಾಣಿಕೆಯಿದೆ. ಶಾಸಕರು ಇನ್ನೂ ಮೂರು ಬಸ್‌ಗಳ ಬೇಡಿಕೆ ಇಟ್ಟಿದ್ದಾರೆ. ಅವು ಸದ್ಯದಲ್ಲಿ ಬರಲಿವೆ ಎನ್ನುತ್ತಾರೆ ಅಧಿಕಾರಿಗಳು.ಏಪ್ರಿಲ್‌ನಲ್ಲಿ ಆರಂಭವಾದ ಸಾರಿಗೆ:
2025ರ ಏಪ್ರಿಲ್‌ನಲ್ಲಿ ಆರಂಭವಾದ ನಗರ ಸಾರಿಗೆ ಸೇವೆಗೆ ಅಂದಿನಿಂದ ಇಂದಿನವರೆಗೆ ಉತ್ತಮ ಜನಸ್ಪಂದನೆ ದೊರೆಯುತ್ತಿದೆ. ಸಾರ್ವಜನಿಕರು ನಗರ ಸಾರಿಗೆಯ ನಿರಂತರತೆ ಕಾಪಾಡುವತ್ತ ಆಶಾವಾದಿ ದೃಷ್ಟಿಯಿಂದ ನೋಡುತ್ತಿದ್ದಾರೆ.ನಮಗೆ ನಗರ ಸಾರಿಗೆ ವ್ಯವಸ್ಥೆಯಾಗಬೇಕೆಂದು ಬೇಡಿಕೆಯಾಗಿತ್ತು. ಆದರೆ ಶಾಸಕ ಯಶವಂತರಾಯಗೌಡ ಪಾಟೀಲರು ಬೇಡಿಕೆ ಬರುವುದಕ್ಕಿಂತ ಮುಂಚೆಯೇ ಈಡೇರಿಸಿದ್ದಾರೆ. ನಗರದಲ್ಲಿ ಆಟೋಗಳಿಗೆ ಕನಿಷ್ಠ ₹50 ರಿಂದ ₹100 ನೀಡಬೇಕಿತ್ತು. ಆಟೋ ಪ್ಯಾಜೋಗಳಿಗೆ ₹20 ನೀಡಬೇಕಿತ್ತು. ಆದರೆ ನಗರ ಸಾರಿಗೆಯಿಂದ ಪ್ರತಿ ಕಿ.ಮೀಗೆ ₹6 ರಿಂದ ₹10 ತಗಲುತ್ತದೆ. ನಗರದ 23 ವಾರ್ಡ್‌ಗಳಿಗೆ ಸಾರಿಗೆ ಸಂಚಾರ ವ್ಯವಸ್ಥೆ ಆಗಬೇಕು. ನಗರದ ಸುತ್ತ ವರ್ತುಲ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಎಪಿಎಂಸಿ ಮಾರುಕಟ್ಟೆ, ರೇವಪ್ಪನ ಮಡ್ಡಿ, ಇಂಗಳಗಿ ತಾಂಡಾದವರೆಗಿನ ಮಾರ್ಗಗಳಲ್ಲಿ ಬಸ್ ಸಂಚಾರ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇಂಡಿ ನಗರಕ್ಕೆ ಜಿಲ್ಲಾ ಸ್ಥಾನಮಾನ ದೊರಕಿಸಿಕೊಡಬೇಕು. ಜಿಲ್ಲೆಯಲ್ಲಿನ ಎಲ್ಲ ಸೌಲಭ್ಯಗಳು ಇಂಡಿಯಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಮಿನಿ ವಿಧಾನಸೌಧ ಸೇರಿದಂತೆ ಹಲವು ಸೌಲಭ್ಯಗಳ ಜೊತೆಗೆ ನಗರ ಸಾರಿಗೆ ಬಸ್ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಸದ್ಯ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ಬಸ್‌ಗಳ ಸಂಖ್ಯೆ ಹೆಚ್ಚಿಗೆ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗುತ್ತದೆ.ಯಶವಂತರಾಯಗೌಡ ಪಾಟೀಲ, ಶಾಸಕರು, ಇಂಡಿನಗರ ವ್ಯಾಪ್ತಿಯಲ್ಲಿ ಎರಡು ನಗರ ಸಾರಿಗೆ ಬಸ್‌ಗಳು ಓಡಾಡುತ್ತಿವೆ. ಇದರಿಂದ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪ್ರಯಾಣಿಕರಿಂದ ನಗರ ಸಾರಿಗೆ ಬಸ್‌ಗಳ ಬೇಡಿಕೆಯಿದೆ. ಹೊಸ ಬಸ್‌ಗಳು ಬಂದ ಮೇಲೆ ನಗರ ಸಾರಿಗೆ ಹೆಚ್ಚಿನ ಬಸ್ ಓಡಿಸಲಾಗುತ್ತದೆ.
ರೇವಣಸಿದ್ದಪ್ಪ ಖೈನೂರ, ಘಟಕ ವ್ಯವಸ್ಥಾಪಕರು, ಇಂಡಿನಗರ ಸಾರಿಗೆ ಬಸ್ಸಿನಿಂದ ಶಾಲೆ, ಕಾಲೇಜಿಗೆ ಹೋಗಲು ಅನುಕೂಲವಾಗಿದೆ. ನಗರ ಸಾರಿಗೆ ಬಸ್ ಇಲ್ಲದಿದ್ದಾಗ ಬಸ್ಸಿಗಾಗಿ ಕಾಯುತ್ತಾ ನಿಲ್ಲಬೇಕಾಗುತಿತ್ತು. ಕಾಲೇಜು ಅವಧಿ ಮುಗಿದ ಮೇಲೆ ಹೋಗಬೇಕಾಗಿತ್ತು. ಸದ್ಯ ನಗರ ಸಾರಿಗೆಯಿಂದ ಅನುಕೂಲವಾಗಿದೆ.ಸಿದ್ದಾರ್ಥ, ವಿದ್ಯಾರ್ಥಿ