ಮಾದಕ ವಸ್ತು ವಿರುದ್ಧ ಜನತೆಗೆ ಅರಿವು ಮೂಡಿಸಬೇಕು

KannadaprabhaNewsNetwork | Published : Jun 30, 2025 12:34 AM

ಯುವಜನತೆ ದೇಶದ ಆಸ್ತಿ. ಆದರೆ ಇಂದಿನ ಯುವಜನತೆ ತಪ್ಪು ಹಾದಿಗಳನ್ನು ಹಿಡಿದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಗಳಲ್ಲಿ ಅನೇಕ ವಿಧಗಳಿವೆ. ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಾದ ತಾವು ಅರಿವು ಪಡೆದುಕೊಂಡು ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಇಂದಿನ ಯುವಜನತೆ ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದರಿಂದ ಆರೋಗ್ಯಕ್ಕೆ ಹಾನಿಯ ಜೊತೆಗೆ ಇಡೀ ಕುಟುಂಬದ ಸ್ವಾಸ್ಥ್ಯವೇ ಹಾಳಾಗುತ್ತದೆ ಎಂದು ಗುಡಿಬಂಡೆ ಜೆಎಂಎಫ್‌ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಗೆ ಚಾಲನೆ ನೀಡಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಜನತೆಗೆ ಅರಿವು ಮೂಡಿಸಿ

ಯುವಜನತೆ ದೇಶದ ಆಸ್ತಿ. ಆದರೆ ಇಂದಿನ ಯುವಜನತೆ ತಪ್ಪು ಹಾದಿಗಳನ್ನು ಹಿಡಿದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಗಳಲ್ಲಿ ಅನೇಕ ವಿಧಗಳಿವೆ. ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಾದ ತಾವು ಅರಿವು ಪಡೆದುಕೊಂಡು ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ಅಕ್ಷಯ್ ಮಾತನಾಡಿ, ಮಾದಕ ವಸ್ತುಗಳು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಯುವಜನತೆ ಮಾದಕ ವಸ್ತುಗಳ ಚಟಕ್ಕೆ ಬಿದ್ದು ತಮ್ಮ ಉಜ್ವಲವಾದ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ದೇಶದ ಅಭಿವೃದ್ದಿಗೆ ಮಾರಕ ಎಂದು ಎಚ್ಚರಿಸಿದರು.

ಆರೋಗ್ಯವಂತ ಸಮಾಜ ನಿರ್ಮಿಸಿ

ಈ ನಿಟ್ಟಿನಲ್ಲಿ ಸರ್ಕಾರಗಳು ಈಗಾಗಲೇ ಮಾದಕ ವಸ್ತುಗಳ ಸೇವನೆಯ ಕುರಿತು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿವೆ. ಜನರು ಸಹ ಈ ಕುರಿತು ಅರಿವು ಪಡೆದುಕೊಂಡು ಜಾಗೃತರಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಎಲ್ಲರ ಜೊತೆಗೆ ಕೈಜೋಡಿಸಬೇಕು ಎಂದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಅಶ್ವತ್ಥರೆಡ್ಡಿ, ಕಾಲೇಜಿನ ಪ್ರಾಂಶುಪಾಲ ರವೀಂದ್ರ, ಪೊಲೀಸ್ ಪಿಎಸ್‌ಐ ಗಣೇಶ್, ಆರೋಗ್ಯ ನಿರೀಕ್ಷಕ ನರಸಿಂಹಯ್ಯ ಸೇರಿದಂತೆ ವಕೀಲರು ಕಾಲೇಜಿನ ಸಿಬ್ಬಂದಿ ವರ್ಗ ಹಾಜರಿದ್ದರು.