ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಎಸ್.ಎಸ್.ಪುರಂನ 6ನೇ ಕ್ರಾಸ್ ನಲ್ಲಿರುವ ಮಯೂರ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಪುನಿತ್ ರಾಜಕುಮಾರ್ ಅವರ 50ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಬಲಗೈನಿಂದ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು ಎಂಬ ಗಾದೆ ಇದೆ. ಇದಕ್ಕೆ ಅನ್ವಯಿಸುವಂತೆ ಪುನಿತ್‌ರಾಜ್ ಕುಮಾರ್ ಬದುಕಿದ್ದರು. ಅವರು ಸಾಯುವವರೆಗೂ ಮಾಡಿದ ದಾನ,ಧರ್ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇಡಿ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ. ಅವರ ಹಳೆಯ ಸಿನಿಮಾಗಳ ರೀ ರಿಲೀಸ್‌ನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿರುವುದೇ ಅವರ ಜನಪ್ರಿಯತೆಗೆ ನಿರ್ದೇಶನ ಎಂದರು.ಓರ್ವ ಕಲಾವಿದರಾಗಿ, ಸಮಾಜ ಸೇವಕರಾಗಿ ಪುನಿತ್ ರಾಜ್ ಕುಮಾರ್ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟು ಹೋಗಿದ್ದಾರೆ. ಕಲೆಯಲ್ಲಿಯೂ ಸಹ ಬಾಲನಟನಾಗಿ ಪ್ರವೇಶ ಮಾಡಿ, ಒಳ್ಳೆಯ ಸಾಮಾಜಿಕ ಸಂದೇಶ ಗಳಿರುವ ಸಿನಿಮಾ ಮಾಡಿ, ತಂದೆಯನ್ನು ಮೀರಿ ಬೆಳೆದರು. ಮನೆಮಂದಿಯೆಲ್ಲಾ ಕುಳಿತು ನೋಡುವಂತಹ ಸಾಂಸಾರಿಕ ಚಿತ್ರಗಳನ್ನು ಮಾಡಿದ್ದರು. ಪ್ರತಿ ಸಿನಿಮಾದಲ್ಲಿಯೂ ಹೊಸತನವನ್ನು ಕಾಣಬಹುದಾಗಿತ್ತು. ಅವರ ಸಾಮಾಜಿಕ ಸೇವೆಯನ್ನು ಅವರ ಕುಟುಂಬ ಮುಂದುವರೆಸಿಕೊಂಡು ಹೋಗುವ ಮೂಲಕ ಅವರನ್ನು ಮತ್ತಷ್ಟು ಜೀವಂತವಾಗಿಡಲು ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿಯೇ ಅಲ್ಲದೆ ವಿಶ್ವದಲ್ಲಿಯೇ ಪುನಿತ್ ರಾಜ್‌ಕುಮಾರ್ ಫ್ಯಾನ್‌ಗಳಿದ್ದಾರೆ. ಇಂತಹ ಸಾರ್ಥಕ ಬದುಕು ಬದುಕಿದ ಡಾ.ಪುನಿತ್ ರಾಜ್‌ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದ ಆತ್ಮಸ್ಥೈರ್ಯ ಮತ್ತಷ್ಟ ಹೆಚ್ಚಲಿ ಎಂಬ ಆಶಯವನ್ನು ಶಾಸಕ ಜಿ.ಜಿ.ಜೋತಿಗಣೇಶ್ ವ್ಯಕ್ತಪಡಿಸಿದರು.
ಮಯೂರ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಆರ್.ಸ್ವಾಮಿ ಮಾತನಾಡಿ, ನಮ್ಮ ವೇದಿಕೆ ಆರಂಭದಿಂದಲೂ ಡಾ.ರಾಜಕುಮಾರ್, ಪುನಿತ್ ರಾಜಕುಮಾರ್ ಅವರ ಹುಟ್ಟು ಹಬ್ಬ, ಪುಣ್ಯಸ್ಮರಣೆ ಕಾರ್ಯಕ್ರಮಗಳ ಜೊತೆಗೆ, ಅವರ ಚಲನಚಿತ್ರಗಳು ವಿಜಯೋತ್ಸವಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಡಾ.ಪುನಿತ್‌ರಾಜಕುಮಾರ್ ಅವರ 50ನೇ ಹುಟ್ಟು ಹಬ್ಬದ ಅಂಗವಾಗಿ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ, ಇನ್ನಿತರ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಬಂದ ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಸ್ತೂರ ಬಾ ಆಸ್ಪತ್ರೆಯ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ಬಿ.ಪಿ, ಶುಗರ್ ತಪಾಸಣೆ ನಡೆಸಲಾಯಿತು. ಈ ವೇಳೆ ಮಯೂರು ಯುವ ವೇದಿಕೆ ಅಧ್ಯಕ್ಷ ಪಿ.ಸದಾಶಿವಯ್ಯ, ಕಾರ್ಯದರ್ಶಿ ಎನ್.ಆರ್.ಸ್ವಾಮಿ,ಸಿ.ಬಿ.ಜಗದೀಶ್, ರಾಜಕುಮಾರ್ ಗುಪ್ತ, ರವಿ ಚಂಗಾವಿ,ವಿನಯ್ ಜೈನ್, ಚಂದ್ರು, ದಾಸಣ್ಣ,ಮನೋಹರಬಾಬು, ದಿನೇಶಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.