ಜನರು ಸಂಸ್ಕಾರವಂತರಾಗಬೇಕು: ಡಾ. ನಿರ್ಮಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : May 12, 2026, 02:00 AM IST
ಪೊಟೋ೧೧ಸಿಪಿಟಿ೧:  ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ  ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು, ಚನ್ನಪಟ್ಟಣ ತಾಲೂಕಿನಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ  'ಸಾಮಾಜಿಕ-ಶೈಕ್ಷಣಿಕ-ಆಧ್ಯಾತ್ಮಕ-ಜಾಗೃತಿ ಅಭಿಯಾನ-೨೦೨೬ ತಾಲೂಕು ಪ್ರವಾಸ ಕಾರ್ಯಕ್ರಮವನ್ನು ತಿಟ್ಟಮಾರನಹಳ್ಳಿಯಲ್ಲಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದು ಒಕ್ಕಲಿಗ ಸಮುದಾಯ ಮತ್ತು ಆದಿಚುಂಚನಗಿರಿ ಮಠ ವಿಶ್ವವಿಖ್ಯಾತಿ ಪಡೆದಿದೆ ಎಂದರೆ ಅದಕ್ಕೆ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕರಾದ ಕೆ.ಎಚ್. ರಾಮಯ್ಯ, ತಾಯಿ ನಂಜಮ್ಮ ಅವರೇ ಮೂಲ ಕಾರಣ. ಅವರ ಪರಿಶ್ರಮದಿಂದ ಇಂದು ಒಕ್ಕಲಿಗ ಸಮುದಾಯದವರು ರಾಜಕೀಯ ಸೇರಿ ಎಲ್ಲಾ ರಂಗದಲ್ಲೂ ಹೆಸರು ಮಾಡಿದ್ದು ಶ್ರೀ ಮಠವು ಸಮುದಾಯಕ್ಕೆ ಆಧ್ಯಾತ್ಮಿಕ ಸಂಸ್ಕಾರ ನೀಡಲು ಶ್ರಮಿಸುತ್ತಾ ಬಂದಿದೆ .

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು, ಚನ್ನಪಟ್ಟಣ ತಾಲೂಕಿನಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ‘ಸಾಮಾಜಿಕ- ಶೈಕ್ಷಣಿಕ- ಆಧ್ಯಾತ್ಮಿಕ ಜಾಗೃತಿ ಅಭಿಯಾನ- ೨೦೨೬ ತಾಲೂಕು ಪ್ರವಾಸವು ತಿಟ್ಟಮಾರನಹಳ್ಳಿ ಗ್ರಾಮದಿಂದ ಸೋಮವಾರ ಆರಂಭಗೊಂಡಿತು.

ಜಾಗೃತಿ ಅಭಿಯಾನವನ್ನು ಆರಂಭಿಸಲು ಸೋಮವಾರ ಬೆಳಗ್ಗೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮಕ್ಕೆ ಶ್ರೀಗಳು ಆಗಮಿಸಿದಾಗ ಗ್ರಾಮಸ್ಥರು ಮತ್ತು ಭಕ್ತರು ಶ್ರೀಗಳಿಗೆ ಹೂವಿನ ಸುರಿಮಳೆಯೊಂದಿಗೆ ಶ್ರದ್ಧಾ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

ತಿಟ್ಟಮಾರನಹಳ್ಳಿ ಗ್ರಾಮದಿಂದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳನ್ನು ಪೂರ್ಣಕುಂಭ ಕಳಸ, ವಿವಿಧ ಜಾನಪದ ಕಲಾತಂಡಗಳೊಂದಿಗೆ ಆರತಿ ಬೆಳಗಿ ಗ್ರಾಮಸ್ಥರು ಬರಮಾಡಿಕೊಂಡರು. ಗ್ರಾಮಸ್ಥರು ಅಲಂಕರಿಸಿ ಸಿದ್ಧಪಡಿಸಿದ್ದ ಬೆಳ್ಳಿರಥವನ್ನು ಏರದೇ ಪಾದನಡಿಗೆಯಲ್ಲಿ ಗ್ರಾಮಸ್ಥರು ಮತ್ತು ಭಕ್ತರ ಮಧ್ಯೆಯೇ ಗ್ರಾಮಕ್ಕೆ ಆಗಮಿಸಿ, ಗ್ರಾಮ ದೇವರಿಗೆ ಪೂಜೆ ಸಲ್ಲಿಸಿ ತಾಲೂಕಿನಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನದ ಉದ್ದೇಶವನ್ನು ಶ್ರೀಗಳು ವಿವರಿಸಿದರು.

ಪ್ರತಿವರ್ಷದಂತೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದಿಂದ ಗ್ರಾಮ ಭೇಟಿ ಕಾರ್ಯಕ್ರಮದಡಿ ಈ ವರ್ಷ ಚನ್ನಪಟ್ಟಣ ಮತ್ತು ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕನ್ನು ಆಯ್ಕೆ ಮಾಡಿಕೊಂಡು, ಮೊದಲಿಗೆ ಚನ್ನಪಟ್ಟಣ ತಾಲೂಕಿನಲ್ಲಿ ಮೇ. ೧೧ರಿಂದ ಮೇ ೨೫ ವರೆಗೆ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಸುಮಾರು ೨೨ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರು ಮತ್ತು ಸದ್ಭಕ್ತರನ್ನು ಭೇಟಿ ಮಾಡಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ- ಸತ್ಸಂಗದ ಕಾರ್ಯಕ್ರಮಗಳ ಮೂಲಕ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಇಂದು ಒಕ್ಕಲಿಗ ಸಮುದಾಯ ಮತ್ತು ಆದಿಚುಂಚನಗಿರಿ ಮಠ ವಿಶ್ವವಿಖ್ಯಾತಿ ಪಡೆದಿದೆ ಎಂದರೆ ಅದಕ್ಕೆ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕರಾದ ಕೆ.ಎಚ್. ರಾಮಯ್ಯ, ತಾಯಿ ನಂಜಮ್ಮ ಅವರೇ ಮೂಲ ಕಾರಣ. ಅವರ ಪರಿಶ್ರಮದಿಂದ ಇಂದು ಒಕ್ಕಲಿಗ ಸಮುದಾಯದವರು ರಾಜಕೀಯ ಸೇರಿ ಎಲ್ಲಾ ರಂಗದಲ್ಲೂ ಹೆಸರು ಮಾಡಿದ್ದು ಶ್ರೀ ಮಠವು ಸಮುದಾಯಕ್ಕೆ ಆಧ್ಯಾತ್ಮಿಕ ಸಂಸ್ಕಾರ ನೀಡಲು ಶ್ರಮಿಸುತ್ತಾ ಬಂದಿದೆ ಎಂದರು.

ಶ್ರೀ ಮಠಕ್ಕೆ ಅಪಾರ ಭಕ್ತರು ಇದ್ದು ಭಕ್ತರು, ಭಕ್ತಿ, ಪ್ರೀತಿ, ದವಸ ಧಾನ್ಯವನ್ನು ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ಉಳ್ಳವರು ಹೇಗೋ ಶಿಕ್ಷಣವನ್ನು ಪಡೆದುಕೊಳ್ಳುತ್ತಾರೆ. ಆದರೆ ಗ್ರಾಮೀಣ ಭಾಗದ ಬಡವರ ಮಕ್ಕಳು ವಿದ್ಯಾವಂತರಾಗಿ ಉತ್ತಮ ಸಾಧನೆ ಮಾಡಿ ಮುಂದೆ ಬರಬೇಕು. ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಶ್ರೀಮಠ ಸಮಾಜದ ಎಲ್ಲಾ ವರ್ಗದ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಶ್ರಮಿಸುತ್ತಿದೆ. ಅಂತಹ ಬಡ ಮಕ್ಕಳನ್ನು ಮಠಕ್ಕೆ ಕಳುಹಿಸಿಕೊಟ್ಟು ಉನ್ನತ ಶಿಕ್ಷಣಕ್ಕೆ ಸಹಕರಿಸಬೇಕು ಎಂದರು.

ಆಧ್ಯಾತ್ಮಿಕ ಸಂಸ್ಕಾರ ಅಗತ್ಯ:

ಇಂದು ಪ್ರಕೃತಿಯಲ್ಲಿ ಎಲ್ಲವೂ ಸುಂದರವಾಗಿದ್ದರೂ ಸಹ ಮನುಷ್ಯರ ಆಧುನಿಕತೆ ಹುಚ್ಚು ಮತ್ತು ದುರಾಸೆಗೆ ಪ್ರಕೃತಿ ಮೇಲೆ ನಿರಂತರ ದಾಳಿಯಾಗಿ ಎಲ್ಲವೂ ನಾಶ ಆಗುತ್ತಿದೆ. ಇದೇ ನಿಟ್ಟಿನಲ್ಲಿ ನಮ್ಮ ಸಮುದಾಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಹ ಮುಖಂಡರು ಸಾಧನೆ ಮಾಡಿದ್ದರೂ ಸಹ ಅವರಲ್ಲಿನ ಕೆಲ ಲೋಪದೋಷಗಳಿಂದ, ಸಂಘಟನೆ ಕೊರತೆಯಿಂದ ಅವರು ಸ್ವಯಂ ಅವನತಿಗೆ ಕಾರಣವಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿ ಆಧ್ಯಾತ್ಮಿಕ, ಸಂಸ್ಕಾರದ ಜ್ಞಾನದ ಕೊರತೆ. ಈ ನಿಟ್ಟಿನಲ್ಲಿ ಶ್ರೀಮಠವು ಸಮುದಾಯಕ್ಕೆ ಆಧ್ಯಾತ್ಮಿಕ ಸಂಸ್ಕಾರ ನೀಡಲು ಶ್ರಮಿಸುತ್ತಾ ಬಂದಿದೆ, ಜ್ಞಾನವಂತ ಸಮಾಜದಲ್ಲಿ ಇಂದು ಚಿನ್ನ, ಒಡವೆ, ಆಸ್ತಿ ಮಾತನಾಡಬಾರದು, ವಿದ್ಯೆ, ಬುದ್ಧಿ, ಜ್ಞಾನ, ಆಧ್ಯಾತ್ಮಿಕ ಶಕ್ತಿ ಮಾತನಾಡಬೇಕು. ಹೂವು ಪರಿಮಳ ಬೀರಿದಂತೆ ಮನುಷ್ಯರಾದ ನಾವು ಆಧ್ಯಾತ್ಮಿಕ ಸಂಸ್ಕಾರವಂತರಾಗಬೇಕು ಎಂದು ಶ್ರೀಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಅರ್ಚಕರಹಳ್ಳಿ ಮಠದ ಅನ್ನದಾನೇಶ್ವರನಾಥ ಸ್ವಾಮಿಜಿಗಳು, ಗೌಡಗೆರೆ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಮಲ್ಲೇಶ್ ಗುರೂಜಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಇದ್ದರು.

ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಸಿ. ಜಯಮುತ್ತು, ಟಿ.ಕೆ. ಯೋಗೇಶ್(ಪಾಪು), ತಿಟ್ಟಮಾರನಹಳ್ಳಿ ನಾಗೇಶ್, ಎಲೇಕೇರಿ ರವೀಶ್, ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ, ಸಿ.ಪಿ.ರಾಜೇಶ್, ರಾಂಪುರ ಧರಣೀಶ್, ಟಿ.ಎಲ್. ರಾಜು, ರಾಂಪುರ ಮಲವೇಗೌಡ, ಕರುಣ್ ಎಂಎ ಆನಂದ್, ಕೋಕಿಲಾರಾಣಿ. ಎಸ್.ಆರ್. ಪ್ರಮೋದ್, ಸುನೀಲ್ ಪಿ.ಡಿ. ರಾಜು ಹಾಜರಿದ್ದರು.

ರಘುನಂದನ್ ರಾಮಣ್ಣ ಕುಟುಂಬದಿಂದ ಶ್ರೀಗಳ ಪಾದಪೂಜೆ:

ಶ್ರೀ.ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಪ್ರವಚನದ ನಂತರ ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಮತ್ತು ಕುಟುಂಬದವರು, ಗ್ರಾಮದಲ್ಲಿನ ತಮ್ಮ ಪೂರ್ವಿಕರ ಮನೆಗೆ ಕರೆದೊಯ್ದು ಶ್ರೀಗಳ ಪಾದಪೂಜೆಯನ್ನು ನೆರವೇರಿಸಿದರು. ಸಂದರ್ಭದಲ್ಲಿ ರಘುನಂದನ್ ರಾಮಣ್ಣ. ಅವರ ತಾಯಿ ವಿಜಯಲಕ್ಷ್ಮೀ ರಾಮಣ್ಣ, ಪತ್ನಿ ಹಾಗೂ ಸಹೋದರ ಹಾಗೂ ಕುಟುಂಬದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವತತ್ವ ಪಾಲಿಸಿದರೆ ಜನ್ಮ ಸಾರ್ಥಕ: ಎಸ್.ಎಸ್.ಪಾಟೀಲ್
ಸರ್ಕಾರಿ ಗೌರವದೊಂದಿಗೆ ಸುಧಾಕರ್‌ ಅಂತ್ಯಕ್ರಿಯೆ