ಜನರಿಗೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ಸಿಗಬೇಕು : ತಮ್ಮಯ್ಯ

KannadaprabhaNewsNetwork | Published : Apr 20, 2025 1:47 AM

ಸಾರಾಂಶ

ಚಿಕ್ಕಮಗಳೂರು, ಜನಸಾಮಾನ್ಯರಿಗೆ ಸರ್ಕಾರದ ಜನಪರ ಯೋಜನೆಗಳ ಸೌಲಭ್ಯಗಳು ಸುಲಭವಾಗಿ ಸಿಗಬೇಕೆಂಬ ಉದ್ದೇಶದಿಂದ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಜೋಡಿಹೋಚಿಹಳ್ಳಿ-ನಿಡಘಟ್ಟ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ಜನಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜನಸಾಮಾನ್ಯರಿಗೆ ಸರ್ಕಾರದ ಜನಪರ ಯೋಜನೆಗಳ ಸೌಲಭ್ಯಗಳು ಸುಲಭವಾಗಿ ಸಿಗಬೇಕೆಂಬ ಉದ್ದೇಶದಿಂದ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಶನಿವಾರ ನಿಡಘಟ್ಟ ಗ್ರಾಮದಲ್ಲಿ ಜೋಡಿಹೋಚಿಹಳ್ಳಿ - ನಿಡಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ಜನಸಂಪರ್ಕ ಸಭೆಗಳ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ಕೆಲಸ ಮಾಡುತ್ತಿದ್ದು, ಇದರ ಸದುಪಯೋಗವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಈ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದು, ಗ್ರಾಮಸ್ಥರು ತಮ್ಮ ಸಂಬಂಧಪಟ್ಟ ಸಮಸ್ಯೆಗಳ ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಪಿಡಿಒಗಳು ಸ್ವೀಕರಿಸಿದ್ದು, ತಾಪಂ, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಕೆಎಸ್‌ಆರ್‌ಟಿಸಿ, ಮೆಸ್ಕಾಂ ಸೇರಿದಂತೆ ಇನ್ನೂ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿ ಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಬಗೆಹರಿಸುತ್ತಾರೆಂದು ತಿಳಿಸಿದರು.ಕಾನೂನು ತೊಡಕಾಗಿರುವ, ತಾಂತ್ರಿಕ ಸಮಸ್ಯೆಗಳಿರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಇಲ್ಲೇ ಬಗೆ ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಕಳೆದ 23 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಜನರ ಸಮಸ್ಯೆ ಗಳನ್ನು ಬಗೆಹರಿಸಬೇಕೆಂದು ಹೊರಡಿಸಿದ ಆದೇಶದಂತೆ ಈ ಅಪರೂಪದ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ನಿಡಘಟ್ಟ ಗ್ರಾಪಂ ಅಧ್ಯಕ್ಷ ಶಂಕರಮೂರ್ತಿ, ಉಪಾಧ್ಯಕ್ಷೆ ಗೀತಾ ತಿರುಮಲೇಗೌಡ, ಸದಸ್ಯರಾದ ವಿಶ್ವನಾಥ್, ರಾಜಪ್ಪ, ರುದ್ರಮ್ಮ, ಗೀತಾಂಜಲಿ ಸುರೇಶ್, ಸವಿತಾ ಶಿವಪ್ಪ, ಶೈಲಜಾ ತಿಮ್ಮಯ್ಯ, ಸೋಮೇಶ್, ಜೋಡಿಹೋಚಿಹಳ್ಳಿ ಗ್ರಾಪಂ ಅಧ್ಯಕ್ಷ ತ್ರಿಮೂರ್ತಿ, ಉಪಾಧ್ಯಕ್ಷೆ ಸುಮಿತ್ರ ಬಾಯಿ, ನಾಗೇಶ್, ಯಶೋಧ ಟಿ.ಎಂ, ಸಣ್ಣಪ್ಪ, ಕೆ. ಪ್ರೇಮ, ಸಂತೋಷ್, ತಾಲೂಕು ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಹೇಮಾವತಿ, ಗ್ರಾಪಂ ಪಿಡಿಒ ಸುಧಾ ಉಪಸ್ಥಿತರಿದ್ದರು.

--- ಬಾಕ್ಸ್‌ ----ಕುಡಿಯುವ ನೀರಿಗೆ ಆದ್ಯತೆ ನೀಡಲು ಸೂಚನೆಚಿಕ್ಕಮಗಳೂರು: ಬೇಸಿಗೆ ಕಾಲದಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾವುದೇ ಪ್ರದೇಶದಲ್ಲಿ ನೀರಿನ ಕೊರತೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಕರೆ ನೀಡಿದರು.

ಕಡೂರು ತಾಲೂಕಿಗೆ ಒಳಪಡುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಡಿ ಹೋಚಿಹಳ್ಳಿ ಸೇರಿದಂತೆ ವಿವಿಧೆಡೆ ₹3.47 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ನಿಡಘಟ್ಟ ಗ್ರಾಪಂ ಗೆ ₹2.30 ಕೋಟಿ ಹಾಗೂ ಜೋಡಿಹೋಚಿಹಳ್ಳಿ ಗ್ರಾಪಂಗೆ ₹1.17 ಕೋಟಿ ಒಟ್ಟು ₹3.47 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ದೇವಾಲಯ ಜೀರ್ಣೋದ್ದಾರ, ಸಮುದಾಯ ಭವನ ನಿರ್ಮಾಣ, ಕಾಂಕ್ರಿಟ್ ರಸ್ತೆ, ಚರಂಡಿ, ಶಾಲೆ ಅಭಿವೃದ್ಧಿ ಮುಂತಾದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.19 ಕೆಸಿಕೆಎಂ 4ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಶನಿವಾರ ನಡೆದ ಜೋಡಿಹೋಚಿಹಳ್ಳಿ - ನಿಡಘಟ್ಟ ಗ್ರಾ.ಪಂ ವ್ಯಾಪ್ತಿಯ ಜನಸಂಪರ್ಕ ಸಭೆಯನ್ನು ಚಿಕ್ಕಮಗಳೂರು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು.

Share this article