ನನ್ನ ದುಡಿಮೆಗೆ ಜನರು ಶಕ್ತಿಯಾಗಿ ನಿಲ್ಲಬೇಕು: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ

KannadaprabhaNewsNetwork |  
Published : Jun 29, 2024, 12:40 AM IST
28ಕೆಎಂಎನ್ ಡಿ20 | Kannada Prabha

ಸಾರಾಂಶ

ಮಳವಳ್ಳಿ ತಾಲೂಕಿನ ಎಲ್ಲಾ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದೇನೆ. ಜನಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ನೇರ ನುಡಿಯ ಮೂಲಕವೇ ಉತ್ತರ ಕೊಡುತ್ತೇನೆ ಹೊರತು ಗುಲಾಮಗಿರಿ ರಾಜಕಾರಣ ಎಂದಿಗೂ ಮಾಡುವುದಿಲ್ಲ. ಕ್ಷೇತ್ರದಲ್ಲಿ ಗುಂಡಾಗಿರಿ, ದಬ್ಬಾಳಿಕೆಗೆಗಳಿಗೆ ಎಂದಿಗೂ ಅವಕಾಶ ಕೊಡುವುದಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ಕಾರದಿಂದ ವಿಶೇಷ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಲು ಶ್ರಮಿಸುತ್ತಿದ್ದೇನೆ. ನನ್ನ ದುಡಿಮೆಗೆ ಕ್ಷೇತ್ರದ ಜನರು ಶಕ್ತಿಯಾಗಿ ನಿಲ್ಲಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಚುನಾವಣೆಯಲ್ಲಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಹಿತಕಾಯಲು ಎಂದಿಗೂ ಬದ್ಧನಾಗಿರುತ್ತೇನೆ ಎಂದರು.

ತಾಲೂಕಿನ ಎಲ್ಲಾ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದೇನೆ. ಜನಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ನೇರ ನುಡಿಯ ಮೂಲಕವೇ ಉತ್ತರ ಕೊಡುತ್ತೇನೆ ಹೊರತು ಗುಲಾಮಗಿರಿ ರಾಜಕಾರಣ ಎಂದಿಗೂ ಮಾಡುವುದಿಲ್ಲ ಎಂದರು.

ಕ್ಷೇತ್ರದಲ್ಲಿ ಗುಂಡಾಗಿರಿ, ದಬ್ಬಾಳಿಕೆಗೆಗಳಿಗೆ ಎಂದಿಗೂ ಅವಕಾಶ ಕೊಡುವುದಿಲ್ಲ. ನಾನು ಎಲ್ಲಿಯವರೆಗೆ ಅಧಿಕಾರದಲ್ಲಿ ಇರುತ್ತಾನೋ ಅಲ್ಲಿಯವರೆವಿಗೂ ಪ್ರಾಮಾಣಿಕ ಆಡಳಿತವಿರಬೇಕು. ಕಾನೂನು ಮತ್ತು ಸಂವಿಧಾನ ಬದ್ಧವಾಗಿ ದೇಶ ನಡೆಯುವ ರೀತಿಯಲ್ಲಿ ಮಳವಳ್ಳಿಯಲ್ಲಿಯೂ ತರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ ಎಂದರು.

ಮುಂದಿನ ಒಂದೂವರೆ ವರ್ಷದೊಳಗೆ ಕ್ಷೇತ್ರದ ಎಲ್ಲರಿಗೂ ಕುಡಿಯಲು ಶುದ್ಧ ಕಾವೇರಿ ನೀರು ಒದಗಿಸಲು ಹಲವಾರು ಯೋಜನೆಗಳು ಜಾರಿಯಾಗಲಿವೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಅನುದಾನ ಕೊರತೆಯಾಗದಂತೆ ಆಡಳಿತ ನಡೆಸಲಾಗುತ್ತಿದೆ ಎಂದರು.

ನಾವು ಎಂದಿಗೂ ಸುಳ್ಳು ಭರವಸೆ ನೀಡುವುದಿಲ್ಲ. ಬೇರೆಯವರ ರೀತಿ ಸುಳ್ಳು ಘೋಷಣೆ ಮಾಡಿ ಅನುದಾನ ಕೊಟ್ಟು ಕಿತ್ತು ಕೊಳ್ಳುವುದಿಲ್ಲ. ನಮ್ಮ ಸರ್ಕಾರ ಅನುದಾನದ ಜೊತೆಗೆ ಗ್ಯಾರಂಟಿ ಯೋಜನೆ ನೀಡಿದರೂ ಲೋಕಸಭೆಯಲ್ಲಿ ಕೈ ಹಿಡಿಯಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಮುಂದಿನ ದಿನಗಳಲ್ಲಿ ಸ್ಥಳೀಯ ಚುನಾವಣೆಗಳು ಎದುರಾಗುತ್ತಿರುವುದರಿಂದ ಮತದಾರರು ತಾವೇ ಆತ್ಮವಲೋಕನ ಮಾಡಿಕೊಂಡು ಯೋಗ್ಯರಿಗೆ ಅಶೀರ್ವಾದ ಮಾಡಬೇಕೆಂದು ಕೋರಿದರು.

ಗ್ರಾಪಂ ಅಧ್ಯಕ್ಷ ಚನ್ನಿಗರಾಮು ಮಾತನಾಡಿ, ಗ್ರಾಪಂನಿಂದ ಈ ಸ್ವತ್ತು ಸೇರಿದಂತೆ ಇತರೆ ದಾಖಲೆಗಳನ್ನು ಸಾರ್ವಜನಿಕರಿಗೆ ಯಾವುದೇ ಪ್ರತಿ ಫಲಪೇಕ್ಷೆ ಇಲ್ಲದೇ ಪ್ರಮಾಣಿಕವಾಗಿ ನೀಡಲಾಗುತ್ತಿದೆ. ಗ್ರಾಮಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಕಂದೇಗಾಲ ಗ್ರಾಮದ ಅಭಿವೃದ್ಧಿಗೆ ಕೊಟ್ಯಂತರ ರು. ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಎಲ್.ಮಮತಾ, ಗ್ರಾಪಂ ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಸುನೀತಾ, ರಾಧಾ, ಜವರಾಯಿಶೆಟ್ಟಿ, ಗೌರಮ್ಮ, ಚಿಕ್ಕಹೈದೇಗೌಡ, ಪುಟ್ಟರಾಜು, ಜಯಮ್ಮ, ಭಾಗಮ್ಮ, ಸಿದ್ದರಾಜೇ ಅರಸು, ಗೌರಮ್ಮ, ಆರೋಗ್ಯಾಧಿಕಾರಿ ಡಾ.ಸುರೇಶ್, ಪಿಡಿಒ ಎನ್.ನವೀನ್ ಕುಮಾರ್, ತಾಪಂನ ಎಸ್.ಆರ್.ಅಖಿಲಾಂಭಿಕೆ, ಕೆ.ಸುಹಾಸ್, ಪಾರ್ಥಸಾರಥಿ, ಸೇವಾ ಕೇಂದ್ರ ನಿರ್ಮಾಣಕ್ಕೆ ಜಾಗ ದಾನ ಮಾಡಿದ ಮುತ್ತುರಾಯಪ್ಪ ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!