ಉಡುವಳ್ಳಿ ಗ್ರಾಪಂ ಹುಲುಗಲಕುಂಟೆಯಲ್ಲಿ ಟ್ಯಾಂಕರ್ ನೀರು ಹಿಡಿಯುತ್ತಿರುವ ನಿವಾಸಿಗಳು.
ಸೈಕಲ್, ಸ್ಕೂಟರ್‌ಗಳಲ್ಲಿ ನೀರು ಸಾಗಿಸುವ ಜೆಜಿ ಹಳ್ಳಿ, ಉಡುವಳ್ಳಿ, ಗೌಡನಹಳ್ಳಿ ಮಹಿಳೆಯರು । ಕೊರೆಸಿದರೂ ಪ್ರಯೋಜನವಾಗದ ಬೋರ್‌ವೆಲ್ಕನ್ನಡಪ್ರಭ ವಾರ್ತೆ ಹಿರಿಯೂರು
ಕಾದ ಬಾಣಲಿಯಂತಾದ ನೆಲದಲ್ಲಿನ ಬೋರ್‌ವೆಲ್ ಗಳೆಲ್ಲಾ ಒಂದೊಂದಾಗಿ ಉಸಿರು ಚೆಲ್ಲುತ್ತಿದ್ದರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಾರ್ವಜನಿಕರು ಪರದಾಡುವಂತಾಗಿದೆ. ಜೆಜಿ ಹಳ್ಳಿ, ಉಡುವಳ್ಳಿ, ಗೌಡನಹಳ್ಳಿ ಗ್ರಾಪಂ ಹಳ್ಳಿಗಳು ಸೇರಿದಂತೆ ಹಲವು ಹಳ್ಳಿಗಳಲ್ಲಿ ಈಗಾಗಲೇ ಕಿಲೋಮೀಟರ್ ಗಟ್ಟಲೆ ನಡೆದು ಕುಡಿಯುವ ನೀರು ತರುವ ಪರಿಸ್ಥಿತಿ ಇದೆ. ಗ್ರಾಮದೊಳಗಿನ ಒಂದೋ, ಎರಡೋ ಬೋರ್‌ವೆಲ್‌ಗಳಲ್ಲಿ ಬೇಸಿಗೆಯ ಕಾವಿಗೆ ನೀರು ಕಡಿಮೆಯಾಗುವುದು ಇಲ್ಲವೇ ಸಂಪೂರ್ಣ ನೀರೇ ಇಲ್ಲದಂತಾಗುವುದು ಆಗುತ್ತಿದ್ದು, ಜನರ ನೀರಿನ ಪರದಾಟ ನಿಲ್ಲುತ್ತಿಲ್ಲ. ಜೆಜಿ ಹಳ್ಳಿ ಗ್ರಾಮ ಪಂಚಾಯಿಯ ಕಾಟನಾಯಕನಹಳ್ಳಿಯ ಅಂಬೇಡ್ಕರ್ ನಗರದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳಿದ್ದು ಅಲ್ಲಿಗೆ ನೀರು ಸರಬರಾಜು ಮಾಡುತ್ತಿದ್ದ ಬೋರ್‌ವೆಲ್ ನಲ್ಲಿ ನೀರಿಲ್ಲದಂತಾಗಿದೆ. ಇದೀಗ ಅವರು ಅಂಬೇಡ್ಕರ್ ನಗರದಿಂದ ಕಾಟನಾಯಕನಹಳ್ಳಿ ಊರ ಬಳಿ ಬಂದು ನೀರು ಸಂಗ್ರಹಿಸಬೇಕಾಗಿದೆ. ಸೈಕಲ್‌ಗಳಲ್ಲಿ, ಸ್ಕೂಟರ್ ಗಳಲ್ಲಿ ನೀರು ಸಾಗಿಸುವ ಮತ್ತು ಮಹಿಳೆಯರು ಹಿಂಡು ಹಿಂಡಾಗಿ ಹೋಗಿ ನೀರು ತರುವ ದೃಶ್ಯ ಅಲ್ಲಿ ಮಾಮೂಲು. ಅದೇ ಗ್ರಾಪಂ ಆನೆಸಿದ್ರಿ ಗ್ರಾಮದಲ್ಲೂ ನೀರಿಗೆ ಹಾಹಾಕಾರ ಉಂಟಾಗಿದೆ. ಅವರಿವರ ಜಮೀನುಗಳ ಬೋರ್ ಗಳಲ್ಲಿ ನೀರು ತರಬೇಕಾದ ಸ್ಥಿತಿ ಇದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೂ ಸಹ ಅಲ್ಲಿ ಬೋರ್‌ವೆಲ್ ಕೊರೆಸಿದ್ದು ಪ್ರಯೋಜನವಾಗಿಲ್ಲ. ಉಡುವಳ್ಳಿ ಗ್ರಾಪಂ ಯಲ್ಲೂ ಸಹ ಕುಡಿಯುವ ನೀರಿಗೆ ತೊಂದರೆಯಾಗಿರುವ ಜೊತೆಗೆ ಜಮೀನುಗಳಲ್ಲಿನ ಬೋರ್‌ವೆಲ್ ಗಳಲ್ಲೂ ನೀರು ಕಡಿಮೆಯಾಗಿ ಅಡಿಕೆ ಮುಂತಾದ ಬೆಳೆಗಳು ಒಣಗುವ ಪರಿಸ್ಥಿತಿಯಲ್ಲಿವೆ. ಚಳ್ಳಮಡು, ಹುಲುಗಲಕುಂಟೆ, ಭೂತನಹಟ್ಟಿ, ಉಡುವಳ್ಳಿ, ವಸಂತನಗರ, ಇದ್ದಲನಾಗೇನಹಳ್ಳಿ, ಅಜ್ಜನಹಟ್ಟಿ ಭಾಗಗಳಿಗೆ ಈಗಾಗಲೇ ಟ್ಯಾoಕರ್ ಮೂಲಕ ನೀರು ಸಾಗಿಸಲಾಗುತ್ತಿದ್ದು ಮಳೆ ಬಂದು ಬೋರ್‌ಗಳು ರೀ ಚಾರ್ಜ್ ಆಗದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಪರಿಸ್ಥಿತಿ ಇದೆ. ಹುಲುಗಲಕುಂಟೆಯ ಊರೊಳಗಿನ ಬೋರ್ ವೆಲ್ ಫೇಲಾಗಿದ್ದು ಈಗಾಗಲೇ ಉಡುವಳ್ಳಿ ಕೆರೆಯಿಂದ ನಾಲ್ಕೂವರೆ ಕಿಮೀ ಪೈಪ್‌ಲೈನ್ ಮಾಡಿಕೊಳ್ಳಲಾಗಿದೆ.
800 ಅಡಿ ಬೋರ್ ಕೊರೆದರು ಸಹ ಅರ್ಧ ಇಂಚು ಮಾತ್ರ ನೀರು ಬೀಳುವಷ್ಟು ಅಂತರ್ಜಲ ಕುಸಿದಿದ್ದು ಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಮತ್ತಷ್ಟು ಹೆಚ್ಚುವ ಸಂಭವವಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.