ಕುಷ್ಟಗಿ:
ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನರು ಹಣ್ಣು ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬಿಸಿಲಿನ ಪ್ರಖರತೆಯಿಂದ ಕಾದು ಕೆಂಡವಾಗಿರುವ ಭೂಮಿಯಿಂದ ಜನರು ಮನೆಯಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ.ವ್ಯಾಪಾರಕ್ಕೂ ಹೊಡೆತ:
ಬೆಳಗ್ಗೆ 10 ಗಂಟೆ ಆಗುತ್ತಿದ್ದಂತೆ ಸೂರ್ಯನ ಕಿರಣಗಳ ಪ್ರಖರತೆ ಪಡೆದು ಜನರು ಮನೆಯಿಂದ ಹೊರಬರುತ್ತಿಲ್ಲ. ಇದರಿಂದ ಮಾರುಕಟ್ಟೆ ಸೇರಿದಂತೆ ರಸ್ತೆಗಳು ಬೀಕೋ ಎನ್ನುತ್ತಿವೆ. ಜನರು ಮಾರುಕಟ್ಟೆಯತ್ತ ದಾವಿಸದೆ ಇರುವುದರಿಂದ ವ್ಯಾಪಾರ ವಹಿವಾಟಿಗೂ ಹೊಡೆತ ಬಿದ್ದಿದೆ. ಇದರಿಂದ ವಿವಿಧ ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ಹಣ್ಣಿನ ಅಂಗಡಿ ರಶ್:
ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಹಣ್ಣು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರಿನ ಅಂಗಡಿಯಲ್ಲಿ ಜನರಿಂದ ತುಂಬಿ ತುಳುಕುತ್ತಿವೆ. ವ್ಯಾಪಾರಸ್ಥರಿಗೂ ಭರ್ಜರಿ ವ್ಯಾಪಾರ ಆಗುತ್ತಿದೆ. ಬೇಡಿಕೆ ಹೆಚ್ಚಾದಂತೆ ವಿವಿಧ ಹಣ್ಣುಗಳ ದರ ಹೆಚ್ಚಳವಾಗಿದೆ. ಆದರೂ ಸಹ ಗ್ರಾಹಕರು ದೇಹವನ್ನು ತಂಪಾಗಿ ಇಟ್ಟಕೊಳ್ಳಲು ಎಳನೀರು, ಕಲ್ಲಂಗಡಿ, ಅನಾನಸ್, ಕರಬೂಜ, ಪಪ್ಪಾಯಿ, ಪೇರಲ, ಪೈನಾಪಲ್, ಬಾಳೆಹಣ್ಣು, ದ್ರಾಕ್ಷಿ, ಕರಿದ್ರಾಕ್ಷಿ, ಕಿತ್ತಳೆ, ಮೋಸಂಬಿ, ಸೇಬು, ಸ್ಟ್ರಾಬೆರಿ ಹಣ್ಣಿನ ಜ್ಯೂಸ್, ಕಬ್ಬಿನ ಹಾಲು, ಲಿಂಬು ಸೋಡಾ, ಮಜ್ಜಿಗೆ, ಲಸ್ಸಿ ಸೇವಿಸುತ್ತಿದ್ದಾರೆ.ಬೆಳಗ್ಗೆಯೇ ಕಾರ್ಮಿಕರು ಕೆಲಸಕ್ಕೆ:
ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಕಾರ್ಮಿಕರ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದ ನಿತ್ಯ ದುಡಿದು ಜೀವನ ನಡೆಸುವವರಿಗೆ ಹೊಡೆತ ಬಿದ್ದಿದೆ. ಹೀಗಾಗಿ ಕೆಲ ಕಾರ್ಮಿಕರು ಬೆಳಗ್ಗೆಯೇ ಕೆಲಸಕ್ಕೆ ತೆರಳಿ ಮಧ್ಯಾಹ್ನದ ಹೊತ್ತಿಗೆ ಮನೆಗೆ ಹಿಂತಿರುಗುತ್ತಿದ್ದಾರೆ.ಮಾರ್ಚ್ ಆರಂಭದಲ್ಲಿಯೇ ಬಿಸಿಲು ಹೆಚ್ಚಿದೆ. ಏಪ್ರಿಲ್, ಮೇ ತಿಂಗಳಲ್ಲಿ ಹೇಗೆ ಎಂಬ ಚಿಂತೆ ಕಾಡುತ್ತಿವೆ. ಬಿಸಿಲಿನ ಹೆಚ್ಚಳದಿಂದ ತಪ್ಪಿಸಿಕೊಳ್ಳಲು ನಿತ್ಯ ನೂರಾರು ರುಪಾಯಿ ಖರ್ಚು ಮಾಡಿದರೂ ಸಮಾಧಾನವಾಗುತ್ತಿಲ್ಲ ಎಂದು ದೋಟಿಹಾಳ ನಿವಾಸಿ ಶಿವರಾಜ ತಟ್ಟಿ ಹೇಳಿದರು.ಬಿಸಿಲಿನಿಂದ ಜನರು ತಪ್ಪಿಸಿಕೊಳ್ಳಲು ಜನರು ಹಣ್ಣಿನ ಮೊರೆ ಹೋಗಿದ್ದಾರೆ. ಹೀಗಾಗಿ ಕಲ್ಲಂಗಡಿ ಹಣ್ಣಿಗೆ ಭರ್ಜರಿ ಬೇಡಿಕೆ ಬಂದಿದೆ. ಇದರಿಂದ ವಿಜಯಪುರ, ಆಲಮಟ್ಟಿ, ನಿಡಗುಂದಿಯಿಂದ ಹಣ್ಣನ್ನು ತರಿಸಿಕೊಳ್ಳುತ್ತಿದ್ದೇವೆ ಎಂದು ವ್ಯಾಪಾರಸ್ಥರಾದ ಮಲ್ಲಿಕಾರ್ಜುನ ಹಿರೇಮಠ, ಶಿವುಕುಮಾರ ಹಿರೇಮಠ ಹೇಳಿದರು.