ಶರಣು ಸೊಲಗಿಮುಂಡರಗಿ: ಕಳೆದ ಒಂದು ವಾರದಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಿಸಿಲಿನ ತಾಪಮಾನ 40 ಡಿಗ್ರಿಗಿಂತ ಹೆಚ್ಚಾಗಿದ್ದು, ಬಿರು ಬಿಸಿಲಿನಿಂದಾಗಿ ತಾಲೂಕಿನ ಜನ ತತ್ತರಿಸಿದ್ದಾರೆ.ಅತಿಯಾದ ಬಿಸಿಲಿನಿಂದಾಗಿ ಜನತೆ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯಿಂದ ಹೊರಗಡೆಗೆ ತಮ್ಮ ಯಾವುದೇ ವೈಯಕ್ತಿಕ ಕೆಲಸ ಇದ್ದರೂ ಬೆಳಗ್ಗೆ 6ರಿಂದ 10 ಗಂಟೆಯೊಳಗೆ ಮುಗಿಸಿಕೊಂಡು ಮನೆಗಳನ್ನು ಸೇರಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಸಂಜೆ 6 ಗಂಟೆಯ ನಂತರ ಮನೆಯಿಂದ ಹೊರಗೆ ಬಂದು ನಿತ್ಯದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಂಡದಂಥ ಬಿಸಿಲಿಗೆ ಹೆದರಿ ಸಾರ್ವಜನಿಕರು ಮಾರುಕಟ್ಟೆಗೆ ಬಂದು ವ್ಯಾಪಾರ, ವಹಿವಾಟು ಮಾಡಲು ಮನಸ್ಸು ಮಾಡುತ್ತಿಲ್ಲ. ಎಲ್ಲರೂ ಸಂಜೆ ವೇಳೆ ಮನೆಯಿಂದ ಹೊರಗೆ ಬರಲು ಬಯಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನತೆ ಮುಂಡರಗಿ ಪಟ್ಟಣಕ್ಕೆ ವ್ಯಾಪಾರ ವಹಿವಾಟಿಗೆ ಬರುವುದು ಕಡಿಮೆಯಾಗಿದೆ. ಅನಿವಾರ್ಯ ಕೆಲಸ ಕಾರ್ಯಗಳಿದ್ದವರು ಮಾತ್ರ ಬರುತ್ತಿದ್ದು, ಸಾರ್ವಜನಿಕರಿಲ್ಲದೇ ಪ್ರಮುಖ ಬಜಾರದಲ್ಲಿ ಎಲ್ಲ ವ್ಯಾಪಾರ ವಹಿವಾಟು ಕಡಿಮೆಯಾಗಿವೆ.ಬಿರುಬಿಸಿಲಿನ ತಾಪಕ್ಕೆ ವೃದ್ಧರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಪಟ್ಟಣಕ್ಕೆ ಬರುವ ಪ್ರತಿಯೊಬ್ಬರೂ ಮಧ್ಯಾಹ್ನದ ಸಮಯದಲ್ಲಿ ಹಣ್ಣು, ತಂಪಾದ ನೀರು, ತಂಪಾದ ಪಾನೀಯಗಳಿಗೆ ಮಾರುಹೋಗುತ್ತಿರುವುದು ಕಂಡುಬರುತ್ತಿದೆ. ಈ ಹಿಂದೆ ₹25ರಿಂದ ₹30ಕ್ಕೆ ಮಾರಾಟವಾಗುತ್ತಿದ್ದ ಎಳನೀರು ಇದೀಗ ₹50 ತಲುಪಿದೆ. ಪಟ್ಟಣದಾದ್ಯಂತ ಅಲ್ಲಲ್ಲಿ ಐಸ್ ಕ್ರೀಂ ಪಾರ್ಲರ್‌ಗಳು, ಕಲ್ಲಂಗಡಿ ಹಣ್ಣಿನ ವ್ಯಾಪಾರ, ವಿವಿಧ ಹಣ್ಣುಗಳ ಜ್ಯೂಸ್ ವ್ಯಾಪಾರ, ಹೋಟೆಲ್‌ಗಳಲ್ಲಿ ಮಜ್ಜಿಗೆ, ಮೊಸರು ಅವಲಕ್ಕಿ ವ್ಯಾಪಾರ ಜೋರಾಗಿ ನಡೆಯುತ್ತಿವೆ.
ಹಗಲು ಹೊತ್ತಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಅಲ್ಲಲ್ಲಿ ಮನೆಯ ಮುಂದಿನ ಗಿಡಮರಗಳ ಕೆಳಗೆ ಕುಳಿತು ಕಾಲ ಕಳೆಯುವುದು ಹಾಗೂ ಮಲಗಿ ನಿದ್ದೆ ಮಾಡುವುದು ಕಂಡುಬರುತ್ತಿದೆ. ರಾತ್ರಿ ಮಲಗಿದ ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟರೆ ನಿದ್ದೆ ಇಲ್ಲದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಾಯುವಿಹಾರಕ್ಕೆ ತೆರಳುವ ಜನರ ಸಂಖ್ಯೆಯೂ ಕಡಿಮೆಯಾಗಿದೆ.
ಈ ಹಿಂದೆ ಬೇಸಿಗೆ ಬಂತೆಂದರೆ ಸಾಕು, ಅನೇಕ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳ ಮುಂದೆ ಗಡಿಗೆ ಇಟ್ಟು ಅವುಗಳಿಗೆ ನೀರು ಹಾಕಿ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುತ್ತಿದ್ದರು. ಇಮಾಬೂಸುಭಾನಿ ನಗರ ಹಾಗೂ ಜೆ.ಎಚ್. ಪಟೇಲ್ ನಗರ ಹೊರತುಪಡಿಸಿದರೆ ಪಟ್ಟಣದಲ್ಲಿ ಬಹುತೇಕ ಕಡೆ ನೀರಿನ ವ್ಯವಸ್ಥೆ ಕಾಣಸಿಗುತ್ತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದಿಂದ ಬರುವ ಜನ ತಂಪು ಪಾನೀಯಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.ಸಂಚಾರ ಕಡಿಮೆ ಮಾಡಿದ್ದೇವೆ: ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗಿರುವುದರಿಂದ ಊರು ಬಿಟ್ಟು ಹೊರಬರಲು ಮನಸ್ಸೇ ಆಗುತ್ತಿಲ್ಲ. ಬ್ಯಾಂಕು ಅಥವಾ ಮದುವೆಯಂಥ ಅತಿ ಅವಶ್ಯವಿರುವ ಕಾರ್ಯಕ್ರಮಗಳಿಗೆ ಹೋಗುವುದು ಹೊರತುಪಡಿಸಿದರೆ ಉಳಿದ ಸಮಯದಲ್ಲಿ ಇತರೆ ಯಾವುದೇ ಕೆಲಸಕ್ಕೆ ಮುಂಡರಗಿಗೆ ಬರುವುದನ್ನು ಕಡಿಮೆ ಮಾಡಿದ್ದೇವೆ ಎಂದು ಗ್ರಾಮೀಣ ಭಾಗದ ಯುವಕ ಮೌನೇಶ್ವರ ಬಡಿಗೇರ ತಿಳಿಸಿದರು.