ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನರು ಹೈರಾಣ!

KannadaprabhaNewsNetwork |  
Published : May 23, 2024, 01:02 AM IST
22 ಬ್ಯಾಕೋಡು 01 ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಬ್ಯಾಕೋಡು ವ್ಯಾಪ್ತಿಯಲ್ಲಿ ಮಳೆಗಾಲದ ಪ್ರಾರಂಭದಲ್ಲೇ ಕರೆಂಟ್ ಕೈಕೊಟ್ಟಿದೆ. ಒಂದು ಗಂಟೆ ಸಮಯ ಸುರಿದ ಮಳೆಗೆ ದಿನಗಟ್ಟಲೇ ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಈಗಲೇ ಹೀಗಾದಾರೆ ಮಧ್ಯ ಮಳೆಗಾಲದ ಪರಿಸ್ಥಿತಿ ಹೇಗೆ ಎಂಬುದು ಜನರನ್ನು ಚಿಂತೆಗೀಡು ಮಾಡಿದೆ. ಕರೂರು ಬಾರಂಗಿ ರೈತರು ಕರುನಾಡಿಗೆ ಬೆಳಕು ನೀಡುವ ಸಲುವಾಗಿ ತಮ್ಮ ಫಲವತ್ತಾದ ಜಮೀನನ್ನು ನೀರಿನಲ್ಲಿ ಮುಳುಗಿಸಲು ಬಿಟ್ಟಿದ್ದಾರೆ. ತಮ್ಮ ಬದುಕನ್ನು ಸಮರ್ಪಿಸಿದ್ದಾರೆ. ಆದರೆ, ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಜನರಿಗೆ ಇಂದು ಬೆಳಕು ಸಮರ್ಪಕವಾಗಿ ದೊರಕದಂತಾಗಿದೆ.

ಪ್ರದೀಪ್ ಮಾವಿನ ಕೈ

ಕನ್ನಡ ಪ್ರಭ ವಾರ್ತೆ ಬ್ಯಾಕೋಡು

ಬೇಸಿಗೆಯಲ್ಲಿ 24 ಗಂಟೆ ಇರುವ ವಿದ್ಯುತ್‌ ಮಳೆಗಾಲದಲ್ಲಿ ಒಂದು ಗಂಟೆಯೂ ಇರಲ್ಲ. ಅರ್ಧ, ಒಂದು ಗಂಟೆ ಮಳೆ ಬಂದರೆ ಸಾಕು ದಿನವಿಡೀ ಕರೆಂಟ್‌ ಕಟ್‌. ಇದು ಬ್ಯಾಕೋಡು ವ್ಯಾಪ್ತಿ ಜನರ ದುಸ್ಥಿತಿ. ಬೇಸಿಗೆ ಬೆಳಕಿನಲ್ಲಿ ಕಳೆದರೆ ಮಳೆಗಾಲ ಕತ್ತಲೆಯಲ್ಲಿ ಕಳೆಯಬೇಕಾದ ಪರಿಸ್ಥಿತಿ ಇಲ್ಲಿಯ ಜನರದ್ದು...

ಬ್ಯಾಕೋಡು ವ್ಯಾಪ್ತಿಯಲ್ಲಿ ಮಳೆಗಾಲದ ಪ್ರಾರಂಭದಲ್ಲೇ ಕರೆಂಟ್ ಕೈಕೊಟ್ಟಿದೆ. ಒಂದು ಗಂಟೆ ಸಮಯ ಸುರಿದ ಮಳೆಗೆ ದಿನಗಟ್ಟಲೇ ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಈಗಲೇ ಹೀಗಾದಾರೆ ಮಧ್ಯ ಮಳೆಗಾಲದ ಪರಿಸ್ಥಿತಿ ಹೇಗೆ ಎಂಬುದು ಜನರನ್ನು ಚಿಂತೆಗೀಡು ಮಾಡಿದೆ.

ಕರೂರು ಬಾರಂಗಿ ರೈತರು ಕರುನಾಡಿಗೆ ಬೆಳಕು ನೀಡುವ ಸಲುವಾಗಿ ತಮ್ಮ ಫಲವತ್ತಾದ ಜಮೀನನ್ನು ನೀರಿನಲ್ಲಿ ಮುಳುಗಿಸಲು ಬಿಟ್ಟಿದ್ದಾರೆ. ತಮ್ಮ ಬದುಕನ್ನು ಸಮರ್ಪಿಸಿದ್ದಾರೆ. ಆದರೆ, ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಜನರಿಗೆ ಇಂದು ಬೆಳಕು ಸಮರ್ಪಕವಾಗಿ ದೊರಕದಂತಾಗಿದೆ. ಮೇ ಕೊನೆಯಲ್ಲಿ ಕಣ್ಣಾಮುಚ್ಚಾಲೆ ಆಡಲು ಶುರು ಆದ ವಿದ್ಯುತ್ ಸಂಪರ್ಕ ಮತ್ತೆ ಸಮರ್ಪಕವಾಗಿ ಸೇವೆಗೆ ದಕ್ಕುವುದು ಬೇಸಿಗೆ ಕಾಲಕ್ಕೆ. ಇದು ಇಲ್ಲಿನ ವಾರ್ಷಿಕ ಸಮಸ್ಯೆ.

ಹಲವು ಸೇವೆಗಳಿಗೆ ಅಡಚಣೆ:

ಅವಳಿ ಹೋಬಳಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಂಡರೆ ಜೊತೆಗೆ ಇಂಟರ್‌ ನೆಟ್‌, ಮೊಬೈಲ್‌ ನೆಟ್‌ವರ್ಕ ಕಡಿತವಾಗುತ್ತದೆ. ಇದರಿಂದ ಬ್ಯಾಂಕ್, ಗ್ರಾಮ ಒನ್ ಕೇಂದ್ರ, ಅಂಚೆ, ನಾಡ ಕಚೇರಿ, ಗ್ರಾಮ ಪಂಚಾಯ್ತಿಯಲ್ಲಿನ ಸೇವೆಗಳೂ ಸ್ಥಗಿತವಾಗುತ್ತವೆ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ. ಬಿಂದಿಗೆ ಹಿಡಿದು ನೀರಿಗೆ ಬೀದಿಯಲ್ಲಿ ಹೋಗುವ ಸಂದರ್ಭ ಎದುರಾಗುತ್ತದೆ.

ಅಕ್ಕಿಗೆ ಪರದಾಟ, ಬಾಡಿಗೆ ಹೊರೆ:

ಮಳೆಗಾಲದ ಆರಂಭದಲ್ಲಿ ರೈತರು ಸಾಮಾನ್ಯವಾಗಿ ಮೂರು ತಿಂಗಳಿಗೆ ಆಗುವಷ್ಟು ಭತ್ತ ಮಿಲ್‌ ಮಾಡಿಸಲು ಹೋಗುವುದು ಸಾಮಾನ್ಯ. ಆದರೆ ವಿದ್ಯುತ್ ಇಲ್ಲದೇ ಎರಡ್ಮೂರು ದಿನವಾದರೂ ಅಕ್ಕಿಗೆ ಕಾಯಬೇಕಾದ ಸ್ಥಿತಿ. ಇದರಿಂದ ರೈತರಿಗೆ ವಾಹನದ ಬಾಡಿಗೆಯೂ ಕೂಡಾ ದುಬಾರಿ.

ಸಂಪರ್ಕಕ್ಕೆ ಸಿಗದ ಬ್ಯಾಕೋಡು ಜೆಇ:

ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಜನ ಹೈರಾಣಾಗಿದ್ದರೂ ಕೂಡ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಾತ್ರ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಲವೆಡೆ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿಗೆ ಅಂಟಿಕೊಂಡಿದ್ದು, ಗಾಳಿ ಬಂದಾಗ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತಿದೆ. ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ರಿಪೇರಿ ಅಥವಾ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪದೇಪದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ಮಳೆಗಾಲದಲ್ಲಿ ಮಾತ್ರ ಸಮರ್ಪಕ ವಿದ್ಯುತ್‌ ಸೇವೆ ನೀಡಲ್ಲ. ಕಳೆದ ಎರಡು ದಿನದಿಂದ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮಂಜುನಾಥ ಆಕ್ರೋಶ ಹೊರಹಾಕಿದ್ದಾರೆ.

ಕಾಡಿನ ಮಧ್ಯೆ ವಿದ್ಯುತ್ ಸಂಪರ್ಕ:

ನಿಟ್ಟೂರಿನಿಂದ ರಸ್ತೆಯ ಎರಡು ಬದಿಯಲ್ಲಿ ದಟ್ಟ ಕಾಡಿದ್ದು, ದೊಡ್ಡ ಗಾತ್ರದ ಮರದ ರೆಂಬೆ ಕೊಂಬೆಗಳು ಮುರಿದು ಬೀಳುವುದರಿಂದ ವಿದ್ಯುತ್ ಕಂಬಗಳು ಮುರಿದು ಬೀಳುವುದು ಇಲ್ಲಿ ಸಾಮಾನ್ಯ .ಒಂದೊಮ್ಮೆ ಹಾಗಾದರೆ ಮಳೆಗಾಲದಲ್ಲಿ ಮತ್ತೆ ಕಂಬ ಹಾಕಿ ತಂತಿ ಎಳೆದು ಸಂಪರ್ಕ ಕಲ್ಪಿಸಲು ಬರೋಬ್ಬರಿ ಎರಡ್ಮೂರು ದಿನವೇ ಬೇಕಾಗುತ್ತದೆ. ಆದ್ದರಿಂದ ಕೇಬಲ್ ಮಾದರಿ ಸಪರ್ಕ ಸಾಧಿಸಿದರೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬುದು ಸ್ಥಳೀಯ ಒತ್ತಾಯ.

--------------

ಮಳೆಗಾಲ ಆರಂಭಕ್ಕೆ ಮುನ್ನವೇ ಹೀಗಾದ್ರೆ, ಮುಂದೇನು?

ಈ ಹಿಂದೆ ಮಳೆಗಾಲ ಜೋರಾಗುತ್ತಿದ್ದಂತೆ ತಿಂಗಳುಗಟ್ಟಲೆ ಕರೆಂಟ್ ಇಲ್ಲದೆ ಜನರು ಪರದಾಡಿದ ಪರಿಸ್ಥಿತಿ ಕಣ್ಣೆದುರಿದೆ. ಈ ವರ್ಷ ಮಳೆಗಾಲದ ಪ್ರಾರಂಭದಲ್ಲೇ ಈ ರೀತಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿರೋದು ಜನರಲ್ಲಿ ಆತಂಕ ಮೂಡಿಸಿದೆ ಎಂದು ಮಾರಲಗೋಡು ನಿವಾಸಿ ಎನ್‌.ಪೃಥ್ವಿರಾಜ್ ಕಳವಳ ವ್ಯಕ್ತಪಡಿಸಿದ್ದಾರೆ. ಎಸ್ ಎಸ್ ಬೋಗ್, ಕುದರೂರು, ಚೆನ್ನಗೊಂಡ, ತುಮರಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರು ಪ್ರತೀ ವರ್ಷದಂತೆ ಈ ವರ್ಷವೂ ಮಳೆಗಾಲದಲ್ಲಿ ತಿಂಗಳು ಗಟ್ಟಲೆ ವಿದ್ಯುತ್‌ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣ ಆಗುವ ಮುನ್ಸೂಚನೆ ಸಿಗುತ್ತಿದೆ ಎಂದಿದ್ದಾರೆ. ಮೆಸ್ಕಾಂ ಈ ಭಾಗದ ಜನರಿಗೆ ವ್ಯವಸ್ಥಿತವಾಗಿ ವಿದ್ಯುತ್ ಪೂರೈಸಲು ಮುಂಜಾಗ್ರತಾ ಕ್ರಮಗಳ ಕೈಗೊಳ್ಳಬೇಕಿದೆ. ಹಾಗೆಯೇ ಹುಲಿಕಲ್ ಮಾರ್ಗದಲ್ಲಿ ಬರುವ ವಿದ್ಯುತ್ ಲೈನ್ ನಲ್ಲಿ ಸಮಸ್ಯೆ ಉಂಟಾದಲ್ಲಿ ಬದಲಿ ವ್ಯವಸ್ಥೆಯಾಗಿ ಜೋಗ ಮಾರ್ಗದಲ್ಲಿ ವ್ಯವಸ್ಥಿತವಾಗಿ ವಿದ್ಯುತ್ ಪೂರೈಸಲು ಅಗತ್ಯ ಕ್ರಮಗಳನ್ನು ಮೆಸ್ಕಾಂ ಕೈಗೊಳ್ಳಬೇಕು. ಸಿಬ್ಬಂದಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದ್ದಾರೆ.

----------------------ಈಗಾಗಲೇ ಮುಂಗಾರು ಅವಧಿಗೆ ಸೀಮಿತವಾಗಿ ಜಂಗಲ್ ಕಟಿಂಗ್‌ಗೆ ಮೆಸ್ಕಾಂ ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದು ತಾತ್ಕಾಲಿಕ ಕೆಲಸಗಾರರನ್ನು ನೇಮಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಸಮಸ್ಯೆ ಬಗೆಹರಿಸುತ್ತೇವೆ.

-ಶ್ರೀಧರ್, ಕಿರಿಯ ಇಂಜಿನಿಯರ್, ಬ್ಯಾಕೋಡು ಶಾಖೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ