ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಬ್ಬಳ್ಳಿ -ಧಾರವಾಡಕ್ಕೆ ಹೋಲಿಸಿದರೆ ಬೆಳಗಾವಿ ಜಿಲ್ಲೆಗೆ ಆಗಿರುವ ಅಸಮಾನತೆಗೆ ಕಾರಣರಾದವರಿಗೆ ಉತ್ತರ ಕೊಡುವ ಸಮಯ ಬಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಬೆಳಗಾವಿ ಬಾರ್ ಅಸೋಸಿಯೇಶನ್ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡಿದವರನ್ನು ಜನತೆ ಎಂದಿಗೂ ಕ್ಷಮಿಸಲ್ಲ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೇ ಏನೂ ಮಾಡದವರು ಈಗ ಬೆಳಗಾವಿಗೆ ಬಂದು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಏನೂ ಮಾಡಲು ಸಾಧ್ಯವಾಗಲಿಲ್ಲ. ಬದಲಾಗಿ ಹೈಕೋರ್ಟ್ ಪೀಠ, ಐಐಐಟಿ, ಆಕ್ಸಿಜನ್ ಸಿಲಿಂಡರ್ ವಿಷಯದಲ್ಲಿ ಜಿಲ್ಲೆಗೆ ಅನ್ಯಾಯ ಮಾಡಿದರು. ಈಗ ಬಂದು ಏನು ಮಾಡುತ್ತಾರೆ? ಕೇವಲ ಅಧಿಕಾರದ ಹಿಂದೆ ಓಡಾಡುವ ಇಂಥ ವ್ಯಕ್ತಿ ಜಿಲ್ಲೆಗೆ ಬೇಕಾ ಎಂದು ಪ್ರಶ್ನಿಸಿದರು.ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ, ಆ ಪಕ್ಷದ ಮುಖಂಡರನ್ನೇ ನಿಂದಿಸಿಕೊಂಡು ಕಾಂಗ್ರೆಸ್‌ಗೆ ಬಂದರು. ಕೇವಲ ಮೂರು ತಿಂಗಳ ಹಿಂದಷ್ಟೇ ಬಿಜೆಪಿ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದ ವ್ಯಕ್ತಿ ಇಂದು ಏಕಾಏಕಿ ಬಿಜೆಪಿ ಸೇರಿ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂದು ಹೇಳುತ್ತಿದ್ದಾರೆ. ದ್ವಂದ್ವ ನಿಲುವು, ಅಧಿಕಾರ ಬೇಕೇ ಬೇಕು ಎಂಬ ಹಪಾಹಪಿಯವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಮಂತ್ರಿಯಾದರು. ಇವರಿಗೆ ಅಧಿಕಾರವೇ ಮುಖ್ಯ. ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ರಮೇಶ ಜಿಗಜಿಣಗಿ, ಜಗದೀಶ ಶೆಟ್ಟರ್ ಸೇರಿದಂತೆ ಡಜನ್ ಗಟ್ಟಲೆ ಬಿಜೆಪಿ ಅಭ್ಯರ್ಥಿಗಳು ಚುನಾವಣೆಗೂ ಮೊದಲೇ ಕೇಂದ್ರದಲ್ಲಿ ಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಲಕ್ಷ್ಮೀ ಹೆಬ್ಬಾಳಕರ್ ಖಾನಾಪುರದವರು ಎನ್ನುವ ಮುರಗೇಶ ನಿರಾಣಿಯವರ ರಾಜಕೀಯ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಬೆಳಗಾವಿಯಲ್ಲೇ ಹುಟ್ಟಿ ಬೆಳೆದವಳು. ಕಳೆದ 27 ವರ್ಷಗಳಿಂದ ಇಲ್ಲಿಯೇ ಮನೆ ಮಾಡಿ ಉಳಿದುಕೊಂಡಿದ್ದೇನೆ. ನನ್ನ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಎಲ್ಲವೂ ಇಲ್ಲಿಯದ್ದೇ ಇದೆ ಎಂದು ತಿರುಗೇಟು ನೀಡಿದರು.ಮಾಜಿ ಶಾಸಕ ಫಿರೋಜ್ ಸೇಠ್ ಮಾತನಾಡಿ, ಮೃಣಾಲ್ ಸಂಸದನಾಗಿ ನಮ್ಮೆಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದಾನೆ. ಬೆಳಗಾವಿ ಅಭಿವೃದ್ಧಿಗೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಹೇಳಿದರು.
ಶಾಸಕ ರಾಜು ಸೇಠ್ ಮಾತನಾಡಿ, ಮೃಣಾಲ್ ಸೌಜನ್ಯತೆ ಹೊಂದಿರುವ ವ್ಯಕ್ತಿ. ತಾಯಿಯವರ ನಿಷ್ಠೆ, ಶ್ರಮ ನೋಡಿ ಕಲಿತಿದ್ದಾನೆ. ಮುಂದೆ ಒಳ್ಳೆಯ ಸಂಸದನಾಗಿ ಕೆಲಸ ಮಾಡಲಿದ್ದಾನೆ ಎಂದ ಅವರು, ಜಗದೀಶ ಶೆಟ್ಟರ್ 2 ವರ್ಷದ ಹಿಂದೆ ಬೆಳಗಾವಿಯಿಂದ ವಿಮಾನ ಸೇವೆಗಳನ್ನೆಲ್ಲ ಹುಬ್ಬಳ್ಳಿಗೆ ಕಿತ್ತುಕೊಂಡು ಹೋಗಿದ್ದರು. ಜಿಲ್ಲೆಗೆ ಅವರಿಂದ ಸಾಕಷ್ಟು ಅನ್ಯಾಯವಾಗಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಮಾತನಾಡಿ, ಒಬ್ಬ ಸೈನಿಕನಂತೆ ನಾನು ಬೆಳಗಾವಿಗಾಗಿ ಲೋಕಸಭೆಯಲ್ಲಿ ಹೋರಾಟ ನಡೆಸಲಿದ್ದೇನೆ. ಜಿಲ್ಲೆಗೆ ಆಗಿರುವ ಅನ್ಯಾಯ ಸರಿಪಡಿಸಲು ಪ್ರಯತ್ನ ಮಾಡುತ್ತೇನೆ. ಒಂದು ಬಾರಿ ಅವಕಾಶ ಕೊಟ್ಟು ನೋಡಿ. ನಿಮ್ಮೆಲ್ಲರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.
ಬೆಳಗಾವಿಯ ಅಭಿವೃದ್ಧಿ ವಿರೋಧಿ ಶೆಟ್ಟರ್:ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳಿಂದ ಬೆಳಗಾವಿಯಲ್ಲಿ ವಕೀಲ ವೃತ್ತಿಗೆ ಸಾಕಷ್ಟು ಹಿನ್ನಡೆ ಉಂಟಾಯಿತು ಎಂದು ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಕಿವುಡಸಣ್ಣನವರ ದೂರಿದರು.ಜಗದೀಶ ಶೆಟ್ಟರ್ ಬೆಳಗಾವಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಜಿಲ್ಲೆಗೆ ಸಾಕಷ್ಟು ಅನ್ಯಾಯ ಎಸಗಿದ್ದಾರೆ. ಬೆಳಗಾವಿಗೆ ನಿಗದಿಯಾಗಿದ್ದ ಹೈಕೋರ್ಟ್ ಪೀಠವನ್ನು ಧಾರವಾಡಕ್ಕೆ ಸ್ಥಳಾಂತರಿಸಿದರು. ಜಿಲ್ಲೆಗೆ ಬರಬೇಕಿದ್ದ ಐಐಟಿ ಕಾಲೇಜು, ವಿಮಾನ ನಿಲ್ದಾಣ ವಿಸ್ತರಣೆಗೆ ಅಡ್ಡಿ ಪಡಿಸಿದರು ಎಂದು ಆರೋಪಿಸಿದರು.
ಈ ವೇಳೆ ಬಾರ್ ಅಸೋಸಿಯೇಶನ್ ಉಪಾಧ್ಯಕ್ಷ ಬಸವರಾಜ ಮುಗಳಿ, ಜಂಟಿ ಕಾರ್ಯದರ್ಶಿ ವೈ.ಕೆ. ಡಿವಟೆ, ಆರ್.ಕೆ. ಪಾಟೀಲ್, ಆರ್.ಪಿ. ಪಾಟೀಲ್, ಶೀತಲ್ ರಾಮಶೆಟ್ಟಿ, ವಿನೋಧ ಪಾಟೀಲ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಕೀಲರು ಉಪಸ್ಥಿತರಿದ್ದರು.ವಿನಾಯಕನಗರ, ಸೈನಿಕನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತಯಾಚಿಸಿದರು. ವಿವಿಧ ಮುಖಂಡರ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಫಿರೋಜ್ ಸೇಠ್, ಶಾಸಕ ರಾಜು ಸೇಠ್, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಉಪಸ್ಥಿತರಿದ್ದರು.