ಮಂಗಳೂರು : ಈ ಬಾರಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಬದಲಾವಣೆಯ ಫಲಿತಾಂಶ ನೀಡಲಿದೆ. ಅದೇ ರೀತಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯನ್ನು ಎದುರಿಸುತ್ತಿದ್ದು, ಜನತೆ ಕಾಂಗ್ರೆಸ್‌ನ್ನು ಬೆಂಬಲಿಸುವ ವಿಶ್ವಾಸ ಇದೆ ಎಂದು ರಾಜ್ಯ ಪ್ರಾಥಮಿಕ, ಮಾಧ್ಯಮಿಕ ಹಾಗೂ ಗ್ರಂಥಾಲಯ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವಿನ ವಾತಾವರಣ ಇದೆ. ಪದವೀಧರ ಕ್ಷೇತ್ರದಲ್ಲಿ 83 ಸಾವಿರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 25 ಸಾವಿರ ಮತದಾರರಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಕೂಡ ನಿರ್ದೇಶನ ನೀಡಿದ್ದಾರೆ ಎಂದರು. ಪಕ್ಷ ನೇತೃತ್ವದಲ್ಲೇ ಚುನಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಪರಿಷತ್ ಚುನಾವಣೆಯನ್ನು ಈ ಹಿಂದೆ ಆಯಾ ಅಭ್ಯರ್ಥಿಗಳೇ ನೋಡಿಕೊಳ್ಳುತ್ತಿದ್ದರು.
ಈ ಬಾರಿ ಕಾಂಗ್ರೆಸ್ ಪಕ್ಷವೇ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದೆ. ಜಿಲ್ಲಾ ಮಟ್ಟದಿಂದ ತೊಡಗಿ ಬೂತ್ ಮಟ್ಟದ ವರೆಗೆ ಪ್ರಚಾರ ಕಾರ್ಯ ನಡೆಯುತ್ತಿದ್ದು, ಪದವೀಧರ ಹಾಗೂ ಶಿಕ್ಷಕ ಮತದಾರರನ್ನು ಗುರುತಿ ಸಂಪರ್ಕಿಸುವ ಕೆಲಸ ನಡೆಯುತ್ತಿದೆ. ಹಾಗಾಗಿ ಈ ಚುನಾವಣೆಯನ್ನು ಗೆಲ್ಲುವ ಪಣ ಕಾಂಗ್ರೆಸ್ ತೊಟ್ಟಿದೆ ಎಂದರು. ಪ್ರಚಾರಕ್ಕೆ ಅವಧಿ ಸಾಲದು: ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಮೇ 20ರಂದು ನಾಮಪತ್ರ ಹಿಂತೆಗೆತಕ್ಕೆ ಅಂತಿಮ ದಿನವಾಗಿದೆ. ಬಳಿಕ ಸೀಮಿತ 12 ದಿನಗಳಲ್ಲಿ ಪ್ರಚಾರ ಕಾರ್ಯ ನಡೆಸಬೇಕು. ಆದರೆ ಶಾಲೆಗಳು ಮೇ 29ರಂದು ಆರಂಭವಾಗುತ್ತಿದ್ದು, ಅಂದೇ ಶಿಕ್ಷಕರು ಭೇಟಿಗೆ ಸಿಗುತ್ತಾರೆ. ಮತ್ತೆ ಉಳಿದ ಎರಡು ದಿನಗಳಲ್ಲಿ ಎಷ್ಟು ಪ್ರಚಾರ ನಡೆಸಬಹುದು ಎಂದು ಅವರು ಪ್ರಶ್ನಿಸಿದರು.
ಶಿಕ್ಷಕರ ಸಮಸ್ಯೆ ಇತ್ಯರ್ಥಕ್ಕೆ ಯತ್ನ: ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಮಂಜುನಾಥ್ ಮಾತನಾಡಿ, ಶಿಕ್ಷಕರಿಗೆ ವೇತನ, ನಿವೃತ್ತರಿಗೆ ಪಿಂಚಣಿ ಹೆಚ್ಚಳ ಮಾಡಿಲ್ಲ. ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿದವರು ಈವರೆಗೆ ಶಿಕ್ಷಕರ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿಲ್ಲ. ಶಿಕ್ಷಕರ ಸಮಸ್ಯೆ ನಿವಾರಿಸಲು, ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೋ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಇದ್ದರು.