ಕನ್ನಡಪ್ರಭ ವಾರ್ತೆ ಸೊರಬ
ಸೊರಬ-ಸಾಗರ ತಾಲೂಕಿನ ಮತದಾರರಿಂದ ತಿರಸ್ಕಾರಗೊಂಡಿರುವ ಹರತಾಳು ಹಾಲಪ್ಪ ಅವರು ಬುದ್ಧಿ ಕಲಿಯದೇ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ. ಅವರ ವರ್ತನೆ ಹೀಗೆಯೇ ಮುಂದುವರೆದರೆ ಜನತೆ ಶಾಶ್ವತವಾಗಿ ಮನೆ ಸೇರಿಸುತ್ತಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಹೇಳಿದರು.ಗುರುವಾರ ಪಟ್ಟಣದ ಬಂಗಾರಧಾಮದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಹೆಚ್. ಹಾಲಪ್ಪ ಜನರಿಂದ ತಿರಸ್ಕಾರಗೊಂಡು ನಿರುದ್ಯೋಗಿಯಾಗಿದ್ದಾರೆ. ಈ ಕಾರಣದಿಂದ ಅರೆಬರೆ ಓದಿಕೊಂಡು ಅವಿವೇಕತನದಿಂದ ಶರಾವತಿ ಸಂತ್ರಸ್ಥರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪನವರ ವಿರುದ್ಧ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಹಾಗಿದ್ದರೆ ಹೆಚ್. ಹಾಲಪ್ಪ ಸ್ನಾತಕೋತ್ತರ ಪಡೆದು ಪ್ರೊಫೆಸರ್ ಆಗಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಶರಾವತಿ ಸಂತ್ರಸ್ಥರ ಪರವಾಗಿ ನಿಂತು ಹೋರಾಟ ಮಾಡಬೇಕಿತ್ತು. ಅದನ್ನು ಬಿಟ್ಟು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಜನತೆಯೇ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.ಬಗರ್‌ಹುಕುಂ ಕಮಿಟಿ ತಾಲೂಕು ಅಧ್ಯಕ್ಷ ಎಂ.ಡಿ. ಶೇಖರ್ ಮಾತನಾಡಿ, ಜನರ ಭಾವನೆಗಳನ್ನು ಅರಿತು ಜನೋಪಯೋಗಿ ಕೆಲಸ ಮಾಡುವವರು ನಿಜವಾದ ಸಮಾಜ ಸೇವಕ. ಇದಕ್ಕೆ ಉನ್ನತ ಶಿಕ್ಷಣ ಪಡೆಯಬೇಕಿಲ್ಲ. ಅಭಿವೃದ್ಧಿಪರ ಚಿಂತನೆ ಮಾಡುವ ಇಚ್ಛಾಶಕ್ತಿ ಇರಬೇಕು. ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪ ಅವರು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರುತ್ತಿದ್ದಾರೆ. ತಾಲೂಕಿಗೆ ೬ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಿದ್ದಾರೆ. ಅವರ ಅಭಿವೃದ್ಧಿಯನ್ನು ಸಹಿಸದೇ ಹೆಚ್. ಹಾಲಪ್ಪ ತೀಕ್ಷ್ಣವಾಗಿ ಸಚಿವರ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದರು.
ಬಿಜೆಪಿ ತಾಲೂಕಿನಲ್ಲಿ ಯಾವುದೇ ಜನಪರವಾದ ಹೋರಾಟವನ್ನು ಮಾಡಿಲ್ಲ. ಅದರಲ್ಲೂ ರೈತಪರವಾದ ಮತ್ತು ಕೃಷಿ ಉತ್ಪನ್ನಗಳ ಬಗ್ಗೆ ದ್ವನಿ ಎತ್ತಿಲ್ಲ. ಇತ್ತೀಚೆಗೆ ಅವರು ಪಟ್ಟಣದಲ್ಲಿ ಜನಪರ ನೋಟ-ರೈತರ ಹೋರಾಟ ಎನ್ನುವ ಶೀರ್ಷಿಕೆ ಹಿಡಿದು ಬೀದಿಗಿಳಿದಿರುವುದು ಇದೇ ಮೊದಲು. ಆದರೆ ಮಧು ಬಂಗಾರಪ್ಪ ಅವರು ತಾಳಗುಪ್ಪ ಬಗರ್‌ಹುಕುಂ ರೈತರ ಪರವಾಗಿ ನಿಂತು ಪಾದಯಾತ್ರೆ ನಡೆಸಿದ್ದಾರೆ. ಇಂಥ ಜನಪರ ಮತ್ತು ರೈತಪರವಾದ ಹೋರಾಟ ಮಾಡಿದವರಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಬಿಟ್ಟರೆ ಮಧು ಬಂಗಾರಪ್ಪ ಮಾತ್ರ ಎಂದರು.ಶರಾವತಿ ಸಂತ್ರಸ್ಥರ ಪರವಾಗಿ ಸಚಿವ ಮಧು ಬಂಗಾರಪ್ಪ ಯಾವುದೇ ಅಧಿಕಾರಿಗಳನ್ನು ನೇಮಿಸಲ್ಲ, ಯಾವುದೇ ಸಭೆ ನಡೆಸಿಲ್ಲ ಎಂದು ಬಿಜೆಪಿ ಮುಖಂಡರು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಕಳೆದ ೧೦ ವರ್ಷಗಳಿಂದ ನಿದ್ದೆಯಲ್ಲಿದ್ದ ಬಿಜೆಪಿಗೆ ಕಳೆದ ಎರಡೂವರೆ ವರ್ಷದಿಂದ ಮತ್ತೆ ಸಂತ್ರಸ್ಥರ ಪರವಾಗಿ ಮಧು ಬಂಗಾರಪ್ಪ ಧ್ವನಿಎತ್ತಿ ಎಬ್ಬಿಸಿದ್ದಾರೆ ಎಂದ ಅವರು, ಮಾಜಿ ಶಾಸಕ ಕುಮಾರ ಬಂಗಾರಪ್ಪ ಅವಧಿಯಲ್ಲಿ ತಾಲೂಕಿಗೆ ಎರಡೂವರೆ ಕೋಟಿ ರು. ಅಭಿವೃದ್ಧಿ ಹಣ ಬಿಡುಗಡೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಆದರೆ ಆ ಹಣ ಎಲ್ಲಿದೆ ಎಂದು ತಿಳಿಸಬೇಕು. ನೀರಾವರಿ ಸಚಿವರಾಗಿ ತಾಲೂಕಿಗಾಗಿ ಕಿಂಚಿತ್ತೂ ಅಭಿವೃದ್ಧಿ ಮಾಡಿಲ್ಲ. ಆದರೆ ಮಧು ಬಂಗಾರಪ್ಪ ಈಗಾಗಲೇ ಸರ್ಕಾರದಿಂದ ೫೦ ಕೋಟಿ ರು.ಗಳ ಅಭಿವೃದ್ದಿ ಹಣದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ನೈಜ ಸ್ಥಿತಿ ಅರಿತು ಮಾತನಾಡುವುದನ್ನು ಬಿಜೆಪಿ ಕಲಿಯಬೇಕು. ಅಸಂಬದ್ಧ ಹೇಳಿಕೆ ನೀಡುವುದನ್ನು ಮುಂದುವರೆಸಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತೀ, ಮುಖಂಡರಾದ ಅಬ್ದುಲ್ ರಶೀದ್, ಸುರೇಶ್ ಬಿಳವಾಣಿ, ಬಸವೇಶ್ವರ, ಶಿವಣ್ಣ ನಡಹಳ್ಳಿ, ಕಲ್ಲಂಬಿ ಹಿರಿಯಣ್ಣ, ಶ್ರೀಕಾಂತ್ ಹಿರೇಶಕುನ, ಕೆ.ಜಿ. ರಾಜೇಶ್ ಮೊದಲಾದವರು ಹಾಜರಿದ್ದರು.