ವಿಕಲಚೇತನರು ಆತ್ಮಸ್ಥೆರ್ಯ ಕಳೆದುಕೊಳ್ಳದಿರಿ
ಶಾಸಕ ಡಾ.ಟಿ.ಬಿ.ಜಯಚಂದ್ರ ಸಲಹೆಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆಕನ್ನಡಪ್ರಭ ವಾರ್ತೆ ಶಿರಾ
ವಿಕಲಚೇತನರು ಎಂದಿಗೂ ಆತ್ಮಸ್ಥೆರ್ಯ ಕಳೆದುಕೊಳ್ಳಬೇಡಿ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.ನಗರದ ತಾಪಂ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ, ತಾಪಂ ಸಂಯುಕ್ತಾಶ್ರಯದಲ್ಲಿ ನಡೆದ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರ ಭದ್ರತೆಗಾಗಿ ಸರ್ಕಾರದಿಂದ ಮಾಸಿಕ 1400 ಪಿಂಚಣಿ ನೀಡಲಾಗುತ್ತಿದ್ದು, ಈ ಹಣ ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಆದ್ದರಿಂದ ಪಿಂಚಣೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು. ಇನ್ನು ಕೆಲವರಿಗೆ ತ್ರಿಚಕ್ರ ವಾಹನಕ್ಕೆ ಬೇಡಿಕೆ ಬಂದಿದ್ದು ಶಾಸಕರ ಅನುದಾನದಿಂದ ₹10 ಲಕ್ಷ ಅನುದಾನ ನೀಡುತ್ತೇನೆ. ವಿಕಲಚೇತನರು ತ್ರಿಚಕ್ರ ವಾಹನಗಳನ್ನು ಸದುಪಯೋಗಪಡಿಸಿಕೊಂಡು ಉದ್ಯೋಗ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ತಾಪಂ ಇಒ ಹರೀಶ್ ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದ್ಯ ನೀಡುತ್ತಿರುವ 1400 ಪಿಂಚಣಿಯನ್ನು ಹೆಚ್ಚಿಸಲು ಶಾಸಕರು ಮನವಿ ಮಾಡುವುದಾಗಿ ತಿಳಿಸಿರುವುದರಿಂದ ಇನ್ನು ಹೆಚ್ಚು ಅನುದಾನ ದೊರಕುವ ನಿರೀಕ್ಷೆ ಇದೆ. ಇಷ್ಟೇ ಅಲ್ಲದೆ ವಿಕಲಚೇತನರ ಶಿಕ್ಷಣಕ್ಕಾಗಿಯೂ ಧನ ಸಹಾಯ ಮಾಡುವ ಅವಕಾಶವಿದ್ದು, ಇಲಾಖೆ ಅರ್ಜಿ ಸಲ್ಲಿಸಿ ಎಂದರು.ಎಂಆರ್.ಡಬ್ಲ್ಯು ಚಿತ್ತಯ್ಯ ಮಾತನಾಡಿ, ವಿಕಲಚೇತನರ ಬದುಕಿಗೆ, ಸ್ಥಳೀಯ ಶಾಸಕರು ತಮ್ಮ ಅನುಧಾನದಲ್ಲಿ ತಾಲೂಕಿಗೆ ಹೆಚ್ಚಿನ ದ್ವಿಚಕ್ರ ವಾಹನಗಳನ್ನು ನೀಡುತ್ತಿರುವುದು ತಾಲೂಕಿನ ಬಹುತೇಕ ವಿಕಲಚೇತನರಿಗೆ ಬಹಳಷ್ಟು ಅನುಕೂಲಕರವಾಗಿದೆ. ಮತ್ತೊಬ್ಬರನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಎಷ್ಟೋ ವಿಕಲಚೇತನರಿಗೆ ಸ್ವಾವಲಂಭಿಯಾಗಿ ಬದುಕಲು, ಇತರರಂತೆ ನಾವು ಕೂಡ ಹೋಡಾಡಲು ಅನುಕೂಲ ಮಾಡಿಕೊಟ್ಟ ಶಾಸಕರಿಗೆ ತಾಲೂಕಿನ ವಿಕಲಚೇತನರು ಚಿರಋಣಿಯಾಗಿರುತ್ತಾರೆ ಎಂದರು.
ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ವಿಕಲಚೇತನ ಸಂಘದ ಅಧ್ಯಕ್ಷ ಮಾಗೋಡ ಕಂಬಣ್ಣ, ಬೇವಿನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್, ಮುಖಂಡರಾದ ಹೆಚ್.ಎಲ್.ರಂಗನಾಥ್, ಯಲದಬಾಗಿ ನವೀನ್, ಮಹದೇವಮ್ಮ, ಶಾಂತಮ್ಮ, ಪಿ.ಬಿ.ನರಸಿಂಹಯ್ಯ, ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಎಂ.ಸಿ.ರಾಘವೇಂದ್ರ, ಸುಧಾಕರ್ ಗೌಡ, ಲಿಂಗಭೂಷಣ್ ಸೇರಿದಂತೆ ಹಲವರು ಹಾಜರಿದ್ದರು.